Advertisement

ವಚನ ಮಹಾಸಂಪುಟಗಳ ಲೋಕಾರ್ಪಣೆ

11:38 AM Feb 24, 2017 | |

ಬೆಂಗಳೂರು: ವಚನಗಳು ಕನ್ನಡಿಗರು ಜಗತ್ತಿಗೆ ಕೊಟ್ಟಿರುವ ಕೊಡುಗೆ. ಅವುಗಳಲ್ಲಿ ಪ್ರತಿಪಾದಿತವಾಗಿರುವ ಮೌಲ್ಯ ಜಾಗತಿಕವಾದದ್ದು ಎಂದು ಬೆಲ್ದಾಳದ ಶ್ರೀ ಬಸವ ಸಿದ್ದರಾಮ ಶರಣರು ಅಭಿಪ್ರಾಯಪಟ್ಟಿದ್ದಾರೆ.

Advertisement

ಕನ್ನಡ ಪುಸ್ತಕ ಪ್ರಾಧಿಕಾರ ಗುರುವಾರ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಾಂಸ್ಕೃ­ತಿಕ ಸಮುತ್ಛಯದಲ್ಲಿ ಹಮ್ಮಿ­ಕೊಂಡಿದ್ದ ಕಾರ್ಯಕ್ರಮದಲ್ಲಿ ಬೈಬಲ್‌ ಮಾದರಿಯ ವಚನ ಸಂಪುಟಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, “ಕಾಯಕ ಜೀವಿಗಳ ಜೀವ­ನಾನುಭವ ಮೂಡಿಬಂದಿರುವ ವಚ­ನ­­ಗಳು ಯಾವುದೇ ಜಾತಿ, ಮತಕ್ಕೆ ಸೀಮಿತವಲ್ಲ. ಇದೊಂದು ಮಹಾಮನೆಯಾಗಿದ್ದು, ಸಕಲ ಜೀವಾತ್ಮರಿಗೂ  ಒಳಿತು ಬಯಸುತ್ತವೆ,” ಎಂದು ಹೇಳಿದರು. 

ಪುಸ್ತಕ ಪ್ರಾಧಿಕಾರ ಪ್ರಕಟಿತ 23 ವಿವಿಧ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ, “ವಚನಗಳು ಕನ್ನಡದ ದುಡಿಮೆ ಸಂಸ್ಕೃತಿಯ ಜನಸಾಹಿತ್ಯಕ್ಕೆ ಕೊಟ್ಟ ಸಾರ್ವಕಾಲಿಕ ಕೊಡುಗೆಯಾಗಿದೆ. ಪ್ರಾಧಿಕಾರ ಅಲೆ­ಮಾರಿ ಸಮುದಾಯಗಳ ಕುರಿತು ಮೂರು ಕೃತಿಗಳನ್ನು ಪ್ರಕಟಿಸಿ­ರುವುದು ಅಪರೂಪದ ವಿದ್ಯಮಾನ.

ಹೇಳಿಕೊಳ್ಳಲು ಒಂದು ಊರು, ತಲೆ ಮೇಲೆ ಒಂದು ಸೂರು ಇಲ್ಲದೆ ಅಲೆದಾಡುವ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಸಾಂಸ್ಕೃತಿಕ ಚಹರೆಗಳನ್ನು ಅದೇ ಸಮುದಾಯಕ್ಕೆ ಸೇರಿದ ಬರಹಬಲ್ಲವರು ಬರೆದು ಅಕ್ಷರ ಲೋಕಕ್ಕೆ ಪರಿಚಯಿಸಿದ ಕೃತಿಗಳನ್ನು ಪ್ರಕಟಿಸುವ ಮೂಲಕ ಪ್ರಾಧಿಕಾರ ಸಾರ್ಥಕ ಕೆಲಸ ಮಾಡಿದೆ,” ಎಂದರು. 

ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್‌, “ಪ್ರಾಧಿಕಾರದ ನಡಿಗೆ, ಯುವಜನರೆಡೆಗೆ, ಜನ ಸಾಮಾನ್ಯರು ಮತ್ತು ಗ್ರಾಮಾಂತರದೆಡೆಗೆ ಎಂಬ ತನ್ನ ಆಶಯವನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದ್ದೇನೆ. ಪಂಡಿತಮಾನ್ಯರಿಗೆ ಮಾತ್ರ ಮೀಸಲಾಗಿದ್ದ ಪ್ರಾಧಿಕಾರವನ್ನು ಜನಸಮೂಹಗಳ ನಡುವೆ ಕೂಡಿಕೊಳ್ಳುವಂತೆ ಸಾರ್ಥಕ ಸೇವೆ ಮಾಡಿದ್ದೇವೆ. ಜತೆಗೆ 54 ಮೌಲಿಕ ಪುಸ್ತಕಗಳನ್ನು ತಮ್ಮ ಅಧ್ಯಕ್ಷತೆಯಲ್ಲಿ ಪ್ರಕಟಿಸಿದ್ದೇವೆ,” ಎಂದು ಹೇಳಿದರು.

Advertisement

ಈ ಮೊದಲು 14 ಸಂಪುಟಗಳಲ್ಲಿ ಪ್ರಕಟಗೊಂಡ ವಚನ ಸಾಹಿತ್ಯ ಸಂಪುಟಗಳನ್ನು ಒಟ್ಟು ಸೇರಿಸಿ ಬೈಬಲ್‌ ಮಾದರಿಯಲ್ಲಿ ಕೇವಲ 2 ಸಂಪುಟಗಳನ್ನು ಮಾಡಲಾಗಿದೆ. ಮೊದಲ ಸಂಪುಟವು ಬಸವ ಯುಗದ ವಚನ ಮಹಾಸಂಪುಟವಾಗಿದ್ದು, 1952 ಪುಟಗಳನ್ನು ಒಳಗೊಂಡಿದೆ. 2ನೇ ಸಂಪುಟವು ಬಸವೋತ್ತರ ಯುಗದ ವಚನ ಮಹಾಸಂಪುಟವಾಗಿದ್ದು, 1536 ಪುಟಗಳನ್ನು ಒಳಗೊಂಡಿದೆ. 
-ಬಂಜಗೆರೆ ಜಯಪ್ರಕಾಶ್‌, ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ.

Advertisement

Udayavani is now on Telegram. Click here to join our channel and stay updated with the latest news.

Next