Advertisement

ಕೃಷ್ಣೆಗೆ ಮಹಾ ಬಾಯಾರಿಕೆ

02:44 PM May 16, 2019 | Team Udayavani |

ಚಿಕ್ಕೋಡಿ: ಏಪ್ರಿಲ್ ಮತ್ತು ಮೇ ಮೊದಲ ವಾರದಲ್ಲಿ ಉಲ್ಬಣಿಸಿದ ಕುಡಿಯುವ ನೀರಿನ ಸಮಸ್ಯೆ ಇದೀಗ ಅಲ್ಪಸ್ವಲ್ಪ ದೂರವಾಗಿದೆ. ನೆರೆಯ ಮಹಾರಾಷ್ಟ್ರದ ಕಾಳಮ್ಮವಾಡಿ ಜಲಾಶಯದಿಂದ ದೂಧಗಂಗಾ ನದಿಗೆ ಹರಿ ಬಿಟ್ಟಿರುವ ನೀರಿನಿಂದ ನಿಪ್ಪಾಣಿ ಮತ್ತು ಚಿಕ್ಕೋಡಿ ತಾಲೂಕಿನ ನದಿ ಪಾತ್ರದ ಜನರ ನೀರಿನ ಕೊರತೆ ನೀಗಿದೆ.

Advertisement

ನಿಪ್ಪಾಣಿ ಹಾಗೂ ಚಿಕ್ಕೋಡಿ ತಾಲೂಕಿನ ನದಿ ಪಾತ್ರದ ಹಳ್ಳಿಗಳು ಬಹುತೇಕ ವೇದಗಂಗಾ ಮತ್ತು ದೂಧಗಂಗಾ ನದಿ ನೀರನ್ನೇ ಅವಲಂಬಿಸಿರುವುದರಿಂದ ಈ ಭಾಗದ ಹಳ್ಳಿಗಳಿಗೆ ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಕಾಳಮ್ಮವಾಡಿ ಜಲಾಶಯದಿಂದ ದೂಧಗಂಗಾ ನದಿಗೆ 700 ಕ್ಯೂಸೆಕ್‌ ನೀರು ನದಿಗೆ ಹರಿಸಿರುವುದರಿಂದ ಸದ್ಯಕ್ಕಂತೂ ಚಿಂತೆಯಿಲ್ಲ. ಆದರೆ ನೀರು ಖಾಲಿಯಾಗುವಷ್ಟರಲ್ಲಿ ದೊಡ್ಡ ಅಡ್ಡ ಮಳೆಯಾದರೆ ಮಾತ್ರ ಈ ಭಾಗದ ಜನರಿಗೆ ಮತ್ತಷ್ಟು ಅನುಕೂಲವಾಗುತ್ತದೆ. ಇಲ್ಲವಾದರೆ ಮತ್ತೆ ಮಹಾರಾಷ್ಟ್ರ ಸರ್ಕಾರದತ್ತ ಮುಖ ಮಾಡಬೇಕಾಗುತ್ತದೆ.

ವೇದಗಂಗಾ ಮತ್ತು ದೂಧಗಂಗಾ ನದಿ ಪಾತ್ರದ ವ್ಯಾಪ್ತಿಯಲ್ಲಿ ಬರುವ ನಿಪ್ಪಾಣಿ ತಾಲೂಕಿನ ಜತ್ರಾಟ, ಭಿವಸಿ, ಬಾರವಾಡ, ಅಕ್ಕೋಳ, ಕಾರದಗಾ, ಭೋಜ, ಕುನ್ನೂರ, ಕೊಗನ್ನೋಳ್ಳಿ, ಮಾಂಗೂರ, ಬೇಡಕಿಹಾಳ ಮತ್ತು ಚಿಕ್ಕೋಡಿ ತಾಲೂಕಿನ ಶಮನೇವಾಡಿ, ಮಲಿಕವಾಡ, ಸದಲಗಾ, ಯಕ್ಸಂಬಾ ಮುಂತಾದ ಹಳ್ಳಿಯ ಜನರಿಗೆ ಸದ್ಯಕ್ಕಂತೂ ಆತಂಕ ದೂರವಾಗಿದೆ.

ಅಂತರ್ಜಲಮಟ್ಟ ವೃದ್ಧಿ: ಗಡಿ ಭಾಗದ ಜನರ ಜೀವನಾಡಿಯಾದ ಕೃಷ್ಣಾ ಮತ್ತು ದೂಧಗಂಗಾ ನದಿ ಬತ್ತಿ ಹೋಗಿದ್ದವು. ಕೃಷ್ಣಾ ನದಿಗೆ ಇನ್ನೂ ನೀರು ಬಂದಿಲ್ಲ ಹೀಗಾಗಿ ಕೃಷ್ಣಾ ನದಿ ತೀರದ ಗ್ರಾಮಗಳ ಜನರಿಗೆ ತೊಂದರೆ ಹೆಚ್ಚಿದೆ. ದೂಧಗಂಗಾ ನದಿ ನೀರಿನಿಂದ ಈ ಭಾಗದಲ್ಲಿ ಅಂತರ್ಜಲಮಟ್ಟವೂ ವೃದ್ಧಿಯಾಗಿದೆ. ಇದೀಗ ಮತ್ತೆ ಕೊಳವೆಬಾವಿ ಮೂಲಕ ಜನರು ನೀರು ಪಡೆದುಕೊಳ್ಳುತ್ತಿದ್ದಾರೆ.

ಉಲ್ಬಣಿಸಿದ ನೀರಿನ ಸಮಸ್ಯೆ: ಕೃಷ್ಣಾ ನದಿ ಖಾಲಿಯಾದ ನಂತರ ಜನರು ನೀರಿಗಾಗಿ ನದಿಯಲ್ಲಿ ಹೊಂಡ ತೋಡಿ ನೀರು ಪಡೆದುಕೊಳ್ಳುತ್ತಿದ್ದರು. ಇದೀಗ ಹೊಂಡ ತೋಡಿದರೂ ನೀರು ಬರುತ್ತಿಲ್ಲ. ಹೀಗಾಗಿ ಕೃಷ್ಣಾ ನದಿ ಪಾತ್ರದಲ್ಲಿ ಬರುವ ಚಿಕ್ಕೋಡಿ ತಾಲೂಕಿನ ಮಾಂಜರಿ, ಅಂಕಲಿ, ಯಡೂರ, ಇಂಗಳಿ, ಯಡೂರವಾಡಿ, ರಾಯಬಾಗ ತಾಲೂಕಿನ ಬಾವನಸವದತ್ತಿ, ಹೊಸ ದಿಗ್ಗೆವಾಡಿ, ಹಳೆ ದಿಗ್ಗೆವಾಡಿ ಸೇರಿದಂತೆ ಅಥಣಿ ತಾಲೂಕಿನ ಹತ್ತಾರು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಮತ್ತೂ ಹೆಚ್ಚಿದೆ.

Advertisement

ಕೃಷ್ಣಾ ನದಿಗೆ ನೀರು ಹರಿಸಬೇಕೆಂದು ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ನಿಯೋಗ ತೆಗೆದುಕೊಂಡು ಮಹಾ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿ ಬಂದಿದ್ದಾರೆ. ಅದರಂತೆ ರಾಜ್ಯ ಸರ್ಕಾರದ ನೀರಾವರಿ ಸಚಿವ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಿ ಕೃಷ್ಣಾ ನದಿಗೆ ನೀರು ಹರಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ ಇನ್ನೂವರೆಗೆ ಮಹಾ ಸರ್ಕಾರ ನೀರು ಹರಿಸದೇ ಇರುವುದು ಗಡಿ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕೃಷ್ಣಾ ನದಿಗೆ ನೀರು ಹರಿಸಲು ರಾಜ್ಯ ಸರ್ಕಾರ ಸಾಕಷ್ಟು ಪ್ರಯತ್ನ ನಡೆಸಿದೆ. ನದಿ ಪಾತ್ರದಲ್ಲಿ ನೀರಿನ ಸಮಸ್ಯೆ ಉಂಟಾದರೆ ಟ್ಯಾಂಕರ್‌ ಮೂಲಕ ಹಾಗೂ ಈಗಿರುವ ಕೊಳವೆಬಾವಿ ಮೂಲಕ ನೀರು ಕೊಡಲು ಸರ್ಕಾರ ಬದ್ಧವಾಗಿದೆ. ಕುಡಿಯುವ ನೀರಿಗಾಗಿ ಸಾಕಷ್ಟು ಅನುದಾನ ಲಭ್ಯ ಇರುವುದರಿಂದ ನೀರಿನ ಸಮಸ್ಯೆ ಉಂಟಾಗುವ ಹಳ್ಳಿಗಳಿಗೆ ನೀರು ಕೊಡುವ ವ್ಯವಸ್ಥೆ ಕಲ್ಪಿಸಲಾಗುತ್ತದೆ.
• ಡಾ| ಸಂತೋಷ ಬಿರಾದಾರ,ತಹಶೀಲ್ದಾರರು, ಚಿಕ್ಕೋಡಿ
ಮಹಾರಾಷ್ಟ್ರ ಸರ್ಕಾರ ಕಾಳಮ್ಮವಾಡಿ ಜಲಾಶಯದ ಮೂಲಕ ದೂಧಗಂಗಾ ನದಿಗೆ ನೀರು ಹರಿಸಿದ್ದರಿಂದ ನಿಪ್ಪಾಣಿ ಮತ್ತು ಚಿಕ್ಕೋಡಿ ಭಾಗದ ಜನರಿಗೆ ಅನುಕೂಲವಾಗಿದೆ. ಅದರಂತೆ ಕೃಷ್ಣಾ ನದಿಗೆ ಕೊಯ್ನಾದಿಂದ ನೀರು ಹರಿಸಿ ಕೃಷ್ಣಾ ನದಿ ತೀರದ ಜನರಿಗೆ ಅನುಕೂಲ ಕಲ್ಪಿಸಬೇಕು. ಮಹಾ ಸರ್ಕಾರ ವಿಳಂಬ ಧೋರಣೆ ಅನುಸರಿಸದೇ ನೀರು ಹರಿಸಿ ಅನುಕೂಲ ಕಲ್ಪಿಸಬೇಕು.
• ರಮೇಶ ಪಾಟೀಲ,ಶೇತಕರಿ ಸಂಘಟನೆ ಮುಖಂಡರು ಭೋಜ
Advertisement

Udayavani is now on Telegram. Click here to join our channel and stay updated with the latest news.

Next