Advertisement

ಮಹಾನ್‌ ಚೇತನ ಕೆ. ಸಿ. ಕುಂದರ್‌

07:12 AM Apr 25, 2017 | Harsha Rao |

ಮುಖ್ಯಮಂತ್ರಿಗಳೇ “ಮುಖ್ಯಮಂತ್ರಿ’ ಎಂದು ಸಂಬೋಧಿಸಿದ್ದ ಮುತ್ಸದ್ಧಿ 

Advertisement

ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ರಂಗಗಳಲ್ಲಿ ಅಚ್ಚಳಿಯದ ಹೆಜ್ಜೆಗುರುತುಗಳನ್ನು ಮೂಡಿಸಿ, ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಪ್ರಗತಿಗೆ ಅಪಾರವಾದ ಕೊಡುಗೆಗಳನ್ನು ನೀಡಿರುವ ಹಿರಿಯ ಚೇತನ ಕೆ. ಸಿ. ಕುಂದರ್‌.

ರಾಮಕೃಷ್ಣ ಹೆಗಡೆಯವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದಿನಗಳಲ್ಲಿ ಅಧಿಕಾರ ವಿಕೇಂದ್ರೀಕರಣದ ಕುರಿತು ಒಂದಷ್ಟು ಕನಸುಗಳನ್ನು ಕಂಡಿದ್ದರು. ಆ ಸಂದರ್ಭ ಅವಿಭಜಿತ ದಕ್ಷಿಣಕನ್ನಡ ಜಿಲ್ಲಾ ಪರಿಷತ್‌ನ ಪ್ರಥಮ ಅಧ್ಯಕ್ಷರಾಗಿ ಸಾಮಾಜಿಕ ಅಭಿವೃದ್ಧಿಯ ಹರಿಕಾರ ಕೆ.ಸಿ. ಕುಂದರ್‌ ಕಾರ್ಯನಿರ್ವಹಿಸುತ್ತಿದ್ದರು. ಆಗ ಮಂಗಳೂರಿನಲ್ಲಿ ನಡೆದ ಸರಕಾರಿ ಕಾರ್ಯಕ್ರಮವೊಂದಕ್ಕೆ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಆಗಮಿಸಿದ್ದರು. ವೇದಿಕೆಯಲ್ಲಿದ್ದ ಗಣ್ಯರನ್ನು ಸಂಬೋಧಿಸುತ್ತ, ಆಗ ಜಿಲ್ಲಾ ಪರಿಷತ್‌ ಅಧ್ಯಕ್ಷರಾಗಿದ್ದ ಕುಂದರ್‌ ಅವರನ್ನು ಮುಖ್ಯಮಂತ್ರಿ ಹೆಗಡೆಯವರು “ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಮುಖ್ಯಮಂತ್ರಿಗಳಾದ ಕೆ.ಸಿ. ಕುಂದರ್‌ ಅವರೇ’ ಎಂದು ಕರೆದದ್ದು ಸಾಮಾಜಿಕ ವಲಯದಲ್ಲಿ ಆ ಕಾಲದ ದೊಡ್ಡ ಸುದ್ದಿಯಾಗಿತ್ತು. ಅದನ್ನು ಈ ಭಾಗದ ಹಿರಿಯ ರಾಜಕೀಯ ನೇತಾರರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಜಿಲ್ಲಾ ಪರಿಷತ್‌ ಅಥವಾ ಜಿಲ್ಲಾ ಪಂಚಾಯತ್‌ ಅಧ್ಯಕ್ಷರನ್ನು ಮುಖ್ಯಮಂತ್ರಿಯೊಬ್ಬರು ಆ ರೀತಿ ಸಂಬೋಧಿಸಿದ ನಿದರ್ಶನ ಪ್ರಾಯಃ ಅದೊಂದೇ.  

ರಾಮಕೃಷ್ಣ ಹೆಗಡೆಯವರು ಆ ರೀತಿ ಸಂಬೋಧಿಸಲು ಮುಖ್ಯ ಕಾರಣವೆಂದರೆ,  ಕೆ.ಸಿ. ಕುಂದರ್‌ ಅವರ ನಾಯಕತ್ವ ಶಕ್ತಿ, ಅವರಿಗಿದ್ದ ಸಾಮಾಜಿಕ ಬದ್ಧತೆ ಹಾಗೂ ಅವರು ಸಾಧಿಸಿದ್ದ ಅಭಿವೃದ್ಧಿಯ ವೇಗ. ಆ ಕಾಲದಲ್ಲಿ ಜಿಲ್ಲಾ ಪರಿಷತ್‌ ಅಧ್ಯಕ್ಷರಿಗೆ ಎಷ್ಟು ಅಧಿಕಾರ ಇತ್ತು ಎನ್ನುವುದನ್ನು ಕೂಡ ಇದು ಸೂಚಿಸುತ್ತದೆ. ಹಾಗೆ ಮುಖ್ಯಮಂತ್ರಿಗಳಿಂದಲೇ ದಕ್ಷಿಣಕನ್ನಡ ಜಿಲ್ಲೆಯ ಮುಖ್ಯಮಂತ್ರಿ ಎಂದು ಕರೆಸಿಕೊಂಡಿದ್ದ ಮುತ್ಸದ್ದಿ ಕೋಟ ಮಣೂರಿನ ನಿವಾಸಿ ಕೆ. ಸಿ. ಕುಂದರ್‌ ಅವರು ತನ್ನ 87ನೇ ವಯಸ್ಸಿನಲ್ಲಿ ಎಪ್ರಿಲ್‌ 13, 2017ರಂದು ಹೃದಯಾಘಾತದಿಂದ ನಿಧನರಾದರು. ಈ ಮಹಾನ್‌ ಚೇತನ ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಬೇಕಾದದ್ದು ನಮ್ಮ ಕರ್ತವ್ಯವಾಗಿದೆ. 

ಹುಟ್ಟೂರ ಜನತೆಗೆ ಹೊಸ ಹುಟ್ಟು
ಎಳವೆಯಿಂದಲೇ ಚುರುಕು ಸ್ವಭಾವದವರಾಗಿದ್ದ ಕೃಷ್ಣ ಚಿಕ್ಕಯ್ಯ ಕುಂದರ್‌ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಮದ್ರಾಸ್‌ ಪ್ರಸಿಡೆನ್ಸಿಯ ಮೂಲಕ ನಡೆದ ಮೆಟ್ರಿಕ್‌ ಪರೀಕ್ಷೆಯಲ್ಲಿ ಗಣಿತದಲ್ಲಿ ನೂರಕ್ಕೆ ನೂರು ಅಂಕ ಗಳಿಸುವುದರ ಜತೆಗೆ ಉತ್ತಮ ರ್‍ಯಾಂಕ್‌ ಪಡೆದು ಆ ಕಾಲದ ಶೈಕ್ಷಣಿಕ ವಲಯದಲ್ಲಿ ಹೊಸ ದಾಖಲೆ ನಿರ್ಮಿಸಿದ್ದರು. ಅನಂತರ ಮುಂಬೈಗೆ ತೆರಳಿದ ಕೆ. ಸಿ. ಕುಂದರ್‌ ಅವರು ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ನಿರತರಾಗಿ ಕೈತುಂಬಾ ಸಂಬಳ ಪಡೆಯುತ್ತಿದ್ದರು. ಆದರೆ ತಾನು ಬೇರೆಯವರ ಕೈಕೆಳಗೆ ದುಡಿಯುವುದಕ್ಕಿಂತ ತನ್ನೂರಿಗೆ ತೆರಳಿ ತನ್ನವರಿಗಾಗಿ ಏನಾದರು ಮಾಡಬೇಕು, ತನ್ನೂರ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕು ಎನ್ನುವ ಹಂಬಲ ಅವರದ್ದಾಗಿತ್ತು. ಹಾಗಾಗಿ ತವರೂರಿನತ್ತ ಮುಖ ಮಾಡಿದ ಕೆ.ಸಿ. ಕುಂದರ್‌ 1981ರಲ್ಲಿ ಕೋಟ ಮಣೂರಿಗೆ ಬಂದು ಗ್ರಾಮೀಣ ವಿಕಾಸ ಕೇಂದ್ರವನ್ನು ಸ್ಥಾಪಿಸಿದರು ಹಾಗೂ ಗ್ರಾಮಸ್ಥರನ್ನು ಒಟ್ಟು ಸೇರಿಸಿ ಒಂದಷ್ಟು ಸಾಮಾಜಿಕ ಅಭಿವೃದ್ಧಿಯ ಕಾರ್ಯಗಳನ್ನು ಕೈಗೆತ್ತಿಕೊಂಡರು. ಇದರ ಫಲವಾಗಿ ಸಾರಿಗೆ ಸಂಪರ್ಕ, ರಸ್ತೆ, ಕುಡಿಯುವ ನೀರು, ವೈದ್ಯಕೀಯ ಸೇವೆ, ಶಿಕ್ಷಣ ಮುಂತಾದ ಮೂಲಭೂತ ಸೌಲಭ್ಯಗಳು ಮಣೂರು-ಪಡುಕರೆಯ ಜನತೆಗೆ ಲಭ್ಯವಾಗತೊಡಗಿದವು. ಶಿಕ್ಷಣ, ಅದಕ್ಕೆ ತಕ್ಕ ಉದ್ಯೋಗ ಸಿಗದೆ ಬೇರೆ ಪರವೂರಿಗೆ ವಲಸೆ ಹೋಗುತ್ತಿದ್ದವರ ಪ್ರತಿಭಾ ಪಲಾಯನವನ್ನು ತಡೆದು ಅದರ ಪ್ರತಿಫ‌ಲ ಇಲ್ಲಿಗೇ ಲಭ್ಯವಾಗುವ ನಿಟ್ಟಿನಲ್ಲಿ ಶಾಲೆಯೊಂದನ್ನು ಕಟ್ಟಿಸಿ ಮಕ್ಕಳಿಗೆ ವಿದ್ಯಾಭ್ಯಾಸ ಒದಗಲು ನೆರವಾದರು. ಇದೀಗ ಪುಟ್ಟ ಊರು ಮಣೂರು -ಪಡುಕರೆಯಲ್ಲಿ ಅಂಗನವಾಡಿಯಿಂದ ಆರಂಭವಾಗಿ ಪದವಿಯ ತನಕ ಶಿಕ್ಷಣದ ವ್ಯವಸ್ಥೆಯಾಗಿರುವುದು ಅವರ ಶೈಕ್ಷಣಿಕ ದೂರದೃಷ್ಟಿಯ ಫಲವಾಗಿದೆ. 

Advertisement

ಇದರ ಜತೆಗೆ ಮೀನುಗಾರಿಕೆ ಕ್ಷೇತ್ರದಲ್ಲಿ ಕುಂದರ್‌ ಅವರ ಕೊಡುಗೆ ಅಪಾರ. ಯಾಂತ್ರೀಕೃತ ಮೀನುಗಾರಿಕೆಯನ್ನು ಕರಾವಳಿ ಭಾಗದಲ್ಲಿ ಪ್ರಥಮವಾಗಿ ಅಭಿವೃದ್ಧಿಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅನೇಕ ಮೀನುಗಾರರಿಗೆ ಬ್ಯಾಂಕ್‌ ಸಾಲದ ವ್ಯವಸ್ಥೆ ಮಾಡಿಸಿಕೊಟ್ಟು, ಯಾಂತ್ರೀಕೃತ ಮೀನುಗಾರಿಕೆಗೆ ಪ್ರೇರೇಪಿಸಿ, ಮೀನುಗಾರಿಕೆಯಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿ ಯಶಸ್ವಿಯಾದವರು ಕುಂದರ್‌ ಅವರು. 

ಶ್ರೇಷ್ಠ ತಾಲೂಕು ಬೋರ್ಡ್‌ ಎಂಬ ಹೆಗ್ಗಳಿಕೆ
ರಾಜಕೀಯದಲ್ಲಿ ಬೆಳೆಯಬೇಕು ಎಂಬ ಹಂಬಲವಿಲ್ಲದೆ ಸಮಾಜ ಸೇವೆಯಲ್ಲಿ ತೊಡಗಿದ್ದ ಕೆ.ಸಿ.ಕುಂದರ್‌ ಅವರಿಗೆ ರಾಜಕೀಯ ಪ್ರವೇಶಿಸಲು ಕಾರಣವಾದದ್ದು ಒಂದು ಕಹಿ ಘಟನೆ ಎಂದರೆ ತಪ್ಪಿಲ್ಲ. ಒಮ್ಮೆ ಯಾವುದೋ ವಿಚಾರಕ್ಕೆ ಸಂಬಂಧಿಸಿ ಸ್ಥಳೀಯ ಪಂಚಾಯತ್‌ ಅಧ್ಯಕ್ಷರೊಂದಿಗೆ ತನ್ನೂರಿನ ಪೊಲೀಸ್‌ ಠಾಣೆಗೆ ತೆರಳಿದ್ದ ಸಂದರ್ಭ ಕುಂದರ್‌ ಅವರನ್ನು ಠಾಣಾಧಿಕಾರಿಗಳು ಅರ್ಧ ಗಂಟೆ ನಿಲ್ಲಿಸಿ ಮಾತನಾಡಿಸಿದ್ದರು, ಕೇವಲ ಪಂಚಾಯತ್‌ ಅಧ್ಯಕ್ಷರಿಗೆ ಮಾತ್ರ ಆಸನ ವ್ಯವಸ್ಥೆ ಇತ್ತು. ಇದರಿಂದ ಮನನೊಂದ ಅವರು ಸರಕಾರಿ ವಲಯದಲ್ಲಿ ಕೆಲಸ ಮಾಡಬೇಕಾದರೆ ಅಧಿಕಾರ ಬೇಕು ಎನ್ನುವ ನಿರ್ಣಯಕ್ಕೆ ಬಂದು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುವ ನಿರ್ಧಾರ ಮಾಡಿದರು. 1983ರಲ್ಲಿ ಮಲ್ಪೆ ಮಧ್ವರಾಜ್‌ ಅವರ ಪ್ರೇರಣೆಯೊಂದಿಗೆ ಉಡುಪಿ ತಾಲೂಕು ಬೋರ್ಡ್‌ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, ಪ್ರಥಮ ಪ್ರಯತ್ನದಲ್ಲೇ ಅಧ್ಯಕ್ಷರಾಗಿ ಆಯ್ಕೆಯಾದರು. ಕುಂದರ್‌ ಅವರ ರಾಜಕೀಯ ಪ್ರವೇಶ ನಿರರ್ಥಕವಾಗಲಿಲ್ಲ. ಅವರ ಈ ಆಡಳಿತಾವಧಿಯಲ್ಲಿ ಉಡುಪಿ ತಾಲೂಕು ಬೋರ್ಡ್‌, ಕರ್ನಾಟಕ ರಾಜ್ಯದಲ್ಲೇ ಶ್ರೇಷ್ಠ ತಾಲೂಕು ಬೋರ್ಡ್‌ ಎನ್ನುವ ಪ್ರಶಸ್ತಿಗೆ ಪಾತ್ರವಾಯಿತು. ಅನಂತರ ಹಿಂದಿರುಗಿ ನೋಡಲೊಲ್ಲದ ಕುಂದರ್‌ ಅವರು ಜಿಲ್ಲಾ ಪರಿಷತ್‌ ಸದಸ್ಯರಾಗಿ, ಅಧ್ಯಕ್ಷರಾಗಿ ಆಯ್ಕೆಗೊಂಡು ಮುಖ್ಯಮಂತ್ರಿಗಳಿಂದಲೇ ಶ್ಲಾಘನೆ ಪಡೆದು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದರು. ಈ ರಾಜಕೀಯ ಜೀವನದ ಅವಧಿಯಲ್ಲಿಯೇ ಅವರು ಕಾಂಗ್ರೆಸ್‌ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಟಿ.ಎ. ಪೈ ಮುಂತಾದ ಅನೇಕ ನಾಯಕರ ಚುನಾವಣೆ ಗೆಲುವಿಗೆ ಶ್ರಮಿಸಿದ್ದರು.

ಸಾಮಾಜಿಕ ಅಭಿವೃದ್ಧಿಯ ಹರಿಕಾರ
ಕೆ.ಸಿ.ಕುಂದರ್‌ ಅವರು ಸಾಮಾಜಿಕ ವಲಯದ ಎಲ್ಲ ರಂಗಗಳಲ್ಲೂ ಸೇವೆ ಸಲ್ಲಿಸಿದವರು. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷರಾಗಿ, ಮಣೂರು ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷರಾಗಿ, ಮಹಾಲಕ್ಷ್ಮೀ ಕೋ ಆಪರೇಟಿವ್‌ ಬ್ಯಾಂಕ್‌ ಲಿ., ಅರ್ಬನ್‌ ಬ್ಯಾಂಕ್‌ ಮಂಗಳೂರು, ಉಡುಪಿ ಕುಂದಾಪುರ ತಾಲೂಕುಗಳ ಅಧ್ಯಕ್ಷರಾಗಿ, ಕರ್ನಾಟಕ ಮೀನುಗಾರರ ಕ್ರಿಯಾ ಸಮಿತಿಯ ಅಧ್ಯಕ್ಷರಾಗಿ, ಕರ್ನಾಟಕ ಕರಾವಳಿ ಐಸ್‌ಪ್ಲಾಂಟ್‌ ಮತ್ತು ಕೋಲ್ಡ್‌ ಸ್ಟೋರೇಜ್‌ ಮಾಲಕರ ಸಂಘದ ಅಧ್ಯಕ್ಷರಾಗಿ, ಅಖೀಲ ಕರ್ನಾಟಕ ಮೀನುಗಾರರ ಪರಿಷತ್‌ನ ಉಪಾಧ್ಯಕ್ಷರಾಗಿ, ಕೋಟ ಅಮೃತೇಶ್ವರಿ ದೇವಸ್ಥಾನ ಮತ್ತು ಬೆಣ್ಣೆಕುದ್ರು ದೇವಸ್ಥಾನಗಳ ಮೊಕ್ತೇಸರರಾಗಿ, ಕೋಟ ಸಿ.ಎ. ಬ್ಯಾಂಕ್‌ ಶಾಖಾ ಅಧ್ಯಕ್ಷರಾಗಿ, ಕೇಂದ್ರ ಹಾಗೂ ದಕ್ಷಿಣಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ನಿರ್ದೇಶಕರಾಗಿ, ರಾಜ್ಯ ಮೀನುಗಾರಿಕಾ ಸಲಹಾ ಸಮಿತಿಯ ಸದಸ್ಯರಾಗಿ, ಮಂಗಳೂರು ವಿಶ್ವವಿದ್ಯಾನಿಲಯ ಸೆನೆಟ್‌ ಸದಸ್ಯರಾಗಿ ಹಾಗೂ ಅಕಾಡೆಮಿಕ್‌ ಕೌನ್ಸಿಲ್‌ನ ಸದಸ್ಯರಾಗಿ, ಬಗ್ವಾಡಿ ಹೋಬಳಿ ಮೊಗವೀರ ಸಮಾಜ ಸಂಘ ಮುಂಬೈನ ಖಜಾಂಚಿಯಾಗಿ, ಕೋಟದಲ್ಲಿ ಜನತಾ ಫಿಶ್‌ ಮಿಲ್‌ ಎನ್ನುವ ಯಶಸ್ವೀ ಉದ್ಯಮದ ಸ್ಥಾಪಕರಾಗಿ -ಹೀಗೆ ಸಾಮಾಜಿಕ ರಂಗದ ಹತ್ತು ಹಲವು ಮುಖಗಳಲ್ಲಿ ಕೆ.ಸಿ. ಕುಂದರ್‌ ಅವರು ಕಾರ್ಯ ನಿರ್ವಹಿಸಿದ್ದರು. ಇಷ್ಟೆಲ್ಲ ಕಾರ್ಯಭಾರಗಳಿದ್ದೂ ಐದು ದಶಕಗಳ ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ವ್ಯವಹರಿಸಿದ ಹಿರಿಯ ಚೇತನ ಅವರು. 

ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ರಂಗಗಳಲ್ಲಿ ಅಚ್ಚಳಿಯದ ಹೆಜ್ಜೆಗುರುತುಗಳನ್ನು ಮೂಡಿಸಿ, ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಪ್ರಗತಿಗೆ ಅಪಾರವಾದ ಕೊಡುಗೆಗಳನ್ನು ನೀಡಿ ಈಗ ನೆನಪುಗಳನ್ನಷ್ಟೇ ಉಳಿಸಿ ಹೋಗಿರುವ ಮಹಾನ್‌ ಚೇತನ ಕೆ. ಸಿ. ಕುಂದರ್‌. 

ಅರ್ಹತೆ ಇದ್ದರೂ ಅವಕಾಶ ವಂಚಿತ
ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಸಂಪೂರ್ಣ ನಾಡಿ ಮಿಡಿತವನ್ನು ಅರಿತಿದ್ದ ಹಾಗೂ ಜಿಲ್ಲಾ ಪರಿಷತ್‌, ತಾಲೂಕು ಪರಿಷತ್‌ ಅಧ್ಯಕ್ಷರಾಗಿ ಬಹಳಷ್ಟು ಕೆಲಸ ಮಾಡಿದ್ದ ಕುಂದರ್‌ ಅವರು ಶಾಸಕನಾಗುವ ಎಲ್ಲ ಅರ್ಹತೆಯನ್ನು ಹೊಂದಿದ್ದರು. ಜತೆಗೆ ಜಿಲ್ಲೆಯ ಆ ಕಾಲದ ಪ್ರಭಾವಿ ಕಾಂಗ್ರೆಸ್‌ ನಾಯಕರ ಗೆಲುವಿಗೆ ಪ್ರಮುಖ ಪಾತ್ರ ವಹಿಸುತ್ತಿದ್ದವರಲ್ಲಿ ಇವರು ಒಬ್ಬರು. ಹೀಗಾಗಿ ಪ್ರತೀ ಬಾರಿ ಚುನಾವಣೆ ಸಮೀಪಿಸಿದಾಗಲೂ ಕುಂದರ್‌ ಶಾಸಕ ಸ್ಥಾನದ ಅಭ್ಯರ್ಥಿಯಾಗಬಹುದು ಎನ್ನುವ ನಿರೀಕ್ಷೆ ಅವರ ಅಭಿಮಾನಿ ವಲಯದಲ್ಲಿ ಇತ್ತು. ಒಂದೆರಡು ಬಾರಿ ಅವರು ಚುನಾವಣೆಯ ಟಿಕೆಟ್‌ಗಾಗಿ ಪ್ರಯತ್ನ ಕೂಡ ನಡೆಸಿದ್ದರು. ಆದರೆ ರಾಜಕೀಯ ಕಾರಣಗಳಿಂದ ಟಿಕೆಟ್‌ ದೊರೆಯದಿದ್ದಾಗ ಶಾಸಕನಾಗಬೇಕು ಎನ್ನುವ ಆಸೆಯಿಂದಲೇ ಅವರು ವಿಮುಖರಾಗಿ ಸಾಮಾಜಿಕ ಸೇವೆಯನ್ನು ಮುಂದುವರಿಸಿದರು. ಶಾಸಕನಾಗದಿದ್ದರೂ ಓರ್ವ ಸಚಿವನಿಗಿಂತ ಹೆಚ್ಚು ಜನಸೇವೆಯನ್ನು ಆ ಕಾಲದಲ್ಲಿ ಮಾಡಿದ ಮಹಾನುಭಾವ ಅವರು ಎಂದು ಕುಂದರ್‌ ಅವರ ಅಭಿಮಾನಿಗಳು ಇಂದಿಗೂ ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಇದೀಗ ಅವರ ಸಹೋದರ ಆನಂದ ಸಿ. ಕುಂದರ್‌ ಅವರು ಇದೇ ಹಾದಿಯಲ್ಲಿ ಸೇವಾ ಕಾರ್ಯಗಳನ್ನು ಮುದುವರಿಸುತ್ತಿದ್ದು, ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳದೆ ಗೀತಾನಂದ ಫೌಂಡೇಶನ್‌ ಟ್ರಸ್ಟ್‌ನ ಮೂಲಕ ಜಿಲ್ಲೆಯಾದ್ಯಂತ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಮುಂತಾದ ಕ್ಷೇತ್ರಗಳಿಗೆ ಬಹಳಷ್ಟು ಸೇವೆ ಸಲ್ಲಿಸುತ್ತಿದ್ದಾರೆ.

– ರಾಜೇಶ ಗಾಣಿಗ ಅಚ್ಲ್ಯಾಡಿ

Advertisement

Udayavani is now on Telegram. Click here to join our channel and stay updated with the latest news.

Next