Advertisement

ಹೆಣ್ಣು ಮಕ್ಕಳಿಗೆ ಅವಕಾಶ ದೊರೆತರೆ ಮಹತ್ತರ ಪಾತ್ರ ನಿರ್ವಹಣೆ

06:26 PM Apr 30, 2022 | Team Udayavani |

ಬೆಳಗಾವಿ: ಹೆಣ್ಣು ಮಕ್ಕಳಿಗೆ ಅವಕಾಶ ದೊರೆತಲ್ಲಿ ಕುಟುಂಬ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಅತೀ ಮಹತ್ವದ ಪಾತ್ರವನ್ನು ನಿರ್ವಹಿಸಬಲ್ಲರು. ಬಾಲ್ಯವಿವಾಹ, ಮಕ್ಕಳ ಅನೈತಿಕ ಸಾಗಾಣಿಕೆ, ಅನ್ಯಾಯ, ಅತ್ಯಾಚಾರದಂತಹ ಸಮಸ್ಯೆಗಳು ಮಹಿಳೆಯರಿಗೆ ತಮ್ಮ ಸಾಮರ್ಥ್ಯವನ್ನು ಹೊರಹಾಕಲು ಅಡಚಣೆಯಾಗುತ್ತಿವೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುನಾಥ ಪರಸನ್ನವರ ಹೇಳಿದರು.

Advertisement

ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಹುಕ್ಕೇರಿ, ಮಹಿಳಾ ಶಕ್ತಿ ಕೇಂದ್ರ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಹುಕ್ಕೇರಿ ತಾಲೂಕಿನ ಹುನ್ನೂರ ಗ್ರಾಮದ ವಿಠಲ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಬೇಟಿ ಬಚಾವೋ ಬೇಟಿ ಪಢಾವೋ ಜಾಗೃತಿ ಅಭಿಯಾನ ಹಾಗೂ ಉತ್ತಮ ಕಾರ್ಯ ನಿರ್ವಹಣೆ ತೋರಿದ ಕಿಶೋರಿಯರಿಗೆ ಮತ್ತು ಸಂಘಗಳಿಗೆ ಸ್ಟಾರ್‌ ಕಿಶೋರಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಮಹಿಳಾ ಶಕ್ತಿ ಕೇಂದ್ರದ ಮಹಿಳಾ ಕಲ್ಯಾಣಾಧಿಕಾರಿ ಶಿಲ್ಪಾ ದೇಸಾಯಿ ಮಾತನಾಡಿ, ಹೆಣ್ಣುಮಕ್ಕಳಿಗೆ ಯೋಗ್ಯ ಶಿಕ್ಷಣ, ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಪಾಲಕರು ಗಮನಹರಿಸಬೇಕು. ಉತ್ತರ ಭಾರತಕ್ಕೆ ಹೋಲಿಸಿದಾಗ ಶಿಶು ಭ್ರೂಣ ಹತ್ಯೆ, ಮಹಿಳೆ ಮೇಲೆ ಆಗುವ ದೌರ್ಜನ್ಯಗಳ ಸಂಖ್ಯೆ ನಮ್ಮಲ್ಲಿ ಕಡಿಮೆ ಇವೆ. ಬೇಟಿ ಬಚಾವೋ ಬೇಟಿ ಪಢಾವೋ ಕಾರ್ಯಕ್ರಮ ಹೆಣ್ಣು ಮಕ್ಕಳ ಬದುಕಿನಲ್ಲಿ ಅನೇಕ ಬದಲಾವಣೆ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎನ್‌.ಎಸ್‌ .ನಾಗಲೋಟಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ದೊರಕುವ
ಯೋಜನೆಗಳ ಬಗ್ಗೆ ವಿವರಿಸಿದರು. ಮಹಿಳಾ ಕಲ್ಯಾಣ ಸಂಸ್ಥೆಯ ಸಂಯೋಜಕ ಎಂ.ಎಸ್‌. ಚೌಗಲಾ ಕೌಟುಂಬಿಕ ಸಲಹಾ ಕೇಂದ್ರ, ಸಾಂತ್ವನ ಮಹಿಳಾ ಸಹಾಯವಾಣಿ, ಉಜ್ವಲಾ ಪುನರ್ವಸತಿ ಕೇಂದ್ರದ ಚಟುವಟಿಕೆಗಳ ಬಗ್ಗೆ ವಿವರಿಸಿದರು.

ಗೌರವ ಕಾರ್ಯದರ್ಶಿ ವೈಜಯಂತಿ ಚೌಗಲಾ, ಆಡಳಿತ ಮಂಡಳಿ ಸದಸ್ಯೆ ಶಶಿಕಲಾ ಮಾಳಖೇಡ, ಮೇಲ್ವಿಚಾರಕಿ ಅಶ್ವಿ‌ನಿ, ಜಿಲ್ಲಾ ಸಂಯೋಜಕರಾದ ಕವಿತಾ ಹೊಸಮನಿ, ಪ್ರಿಯಾಂಕಾ ಖೋತ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next