ಮಂಗಳೂರು: ಕೋವಿಡ್-19 ದಿಂದ ದ.ಕ. ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿರುವ ಕಾರಣ ಜನರಿಗೆ ತುರ್ತಾಗಿ ಹಣದ ಆವಶ್ಯಕತೆಯನ್ನು ಮನಗಂಡ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್) ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಜನರ ಮನೆ ಬಾಗಿಲಿಗೆ ನೀಡಲು ಮುಂದಾಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಗುರುವಾರ ನಗರದ ಕಂಕನಾಡಿ ಮೈದಾನದ ಬಳಿ ಎಸ್‌ಸಿಡಿಸಿಸಿ ಬ್ಯಾಂಕಿನ ಮೊಬೈಲ್ ವಾಹನ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ನಿಲುಗಡೆಯಾಗಿ ಜನರಿಗೆ ಬ್ಯಾಂಕಿಂಗ್ ಸೇವೆಯನ್ನು ನೀಡಿದೆ. ಕೆಲವರು ವಾಹನದಲ್ಲಿರುವ ಎಟಿಎಂನಿಂದ ಹಣ ಪಡೆದರೆ, ಇನ್ನೂ ಕೆಲವರು ಮೊಬೈಲ್ ಶಾಖೆ ಮೂಲಕ ವ್ಯವಹಾರ ನಡೆಸಿದರು.
ಲಾಕ್‌ಡೌನ್ ಕಾರಣಕ್ಕೆ ಬ್ಯಾಂಕ್ ಶಾಖೆಗಳಿಗೆ ತೆರಳಿ ವ್ಯವಹಾರ ನಡೆಸಲು ಜನರು ಹಿಂಜರಿಯುತ್ತಿದ್ದು, ಎಸ್‌ಸಿಡಿಸಿಸಿ ಬ್ಯಾಂಕ್ ಜನರ ಬಳಿಗೆ ಹೋಗಿ ಬ್ಯಾಂಕಿಂಗ್ ಸೇವೆ ನೀಡಿರುವ ಬಗ್ಗೆ ಹಿರಿಯ ನಾಗರಿಕ ಹಾಗೂ ಬ್ಯಾಂಕಿನ ಗ್ರಾಹಕ ಪೌಲ್ ಕರ್ಕಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎ. 17ರಂದು ಕದ್ರಿ ಮೈದಾನದ ಬಳಿ, 18ರಂದು ಮಂಗಳಾದೇವಿ ದೇವಸ್ಥಾನದ ಬಳಿ, 20ರಂದು ಬೊಂದೇಲ್ ಕಟ್ಟೆ, 21ರಂದು ಉರ್ವಾ ಮಾರ್ಕೆಟ್, 22ರಂದು ಆಕಾಶಭವನ, 23ರಂದು ಅತ್ತಾವರ ಕೆ.ಎಂ.ಸಿ. ಆಸ್ಪತ್ರೆ ಬಳಿ ಹಾಗೂ 24ರಂದು ಬಿಜೈ ಕಾಪಿಕಾಡ್‌ನಲ್ಲಿ ಮೊಬೈಲ್ ವಾಹನ ನಿಲುಗಡೆಯಾಗಿ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಬ್ಯಾಂಕಿಂಗ್ ಸೇವೆಯನ್ನು ನೀಡಲಿದೆ. ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳುವಂತೆ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ
ಜನರ ಹತ್ತಿರವಿರುವ ಬ್ಯಾಂಕ್
ಎಸ್‌ಸಿಡಿಸಿಸಿ ಬ್ಯಾಂಕ್ ಸದಾ ಜನಸಾಮಾನ್ಯರ ಬಳಿಯಲ್ಲಿರುವ ಬ್ಯಾಂಕ್. ಲಾಕ್‌ಡೌನ್‌ನಿಂದ ಜನರು ತೊಂದರೆ ಅನುಭವಿಸುತ್ತಿರುವ ಹೊತ್ತಿನಲ್ಲಿ ಮೊಬೈಲ್ ವಾಹನದ ಮೂಲಕ ಬ್ಯಾಂಕಿಂಗ್ ವ್ಯವಹಾರ ನಡೆಸಿ ಜನಸ್ನೇಹಿ ಬ್ಯಾಂಕ್ ಎನ್ನುವುದನ್ನು ಮತ್ತೂಮ್ಮೆ ರುಜುವಾತು ಪಡಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.