Advertisement

ಮೂಢನಂಬಿಕೆ ಮಟ್ಟ ಹಾಕಲು ಪವಾಡ ರಹಸ್ಯ ಬಯಲು

03:57 PM May 13, 2019 | pallavi |

ಹಾವೇರಿ: ಮೂಢನಂಬಿಕೆ ಮಟ್ಟಹಾಕಲು, ಮುಗ್ಧ ಜನರು ಮೋಸ ಹೋಗದಂತೆ ವೈಜ್ಞಾನಿಕತೆ, ವೈಚಾರಿಕತೆ ಬೆಳೆಸಲು ಪವಾಡ ರಹಸ್ಯ ಬಯಲು ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಶಿಕ್ಷಕ ಆರ್‌.ಸಿ. ನಂದಿಹಳ್ಳಿ ಹೇಳಿದರು.

Advertisement

ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಬ್ಯಾಡಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ ಹಾಗೂ ಆಶಾಕಿರಣ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಬ್ಯಾಡಗಿ ರಂಗಮಂದಿರದಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರದಲ್ಲಿ ನಡೆದ ಪವಾಡ ಬಯಲು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಿರಂತರವಾಗಿ ಜಾಗೃತಿ ಮೂಡಿಸಲು ಪವಾಡ ಬಯಲು ಕಾರ್ಯಕ್ರಮ ಸಹಕಾರಿಯಾಗಿದೆ. ಅಲ್ಲದೇ ಮಕ್ಕಳಲ್ಲಿ ವೈಜ್ಞಾನಿಕವಾಗಿ ಚಿಂತನ-ಮಂಥನ ಮಾಡಲು ಹಾಗೂ ವಿಜ್ಞಾನ ವಿಷಯದಲ್ಲಿ ಆಸಕ್ತಿದಾಯಕ ಕಲಿಕೆಗೆ ಪೂರಕವಾಗಿದೆ ಎಂದರು.

ಆಶಾಕಿರಣ ಸಂಸ್ಥೆಯ ಅಧ್ಯಕ್ಷ ಮುತ್ತುರಾಜ ಮಾದರ ಮಾತನಾಡಿ, ಮೂಢನಂಬಿಕೆ ಎಂದ ತಕ್ಷಣ ನಮಗೆ ನೆನೆಪಾಗುವುದು ಮಾಟ, ಮಂತ್ರ, ದೆವ್ವ, ಭೂತಾರಾಧನೆ, ಬೆಕ್ಕು ಅಡ್ಡ ಹೊಯಿತು, ಸೀನು, ಕುರಿ-ಕೋಣ ಬಲಿಕೊಡುವುದು, ನೋಡಿದ ತಕ್ಷಣ ಬೆಂಕಿ ಹತ್ತುವುದು, ಮಂತ್ರದ ನಿಂಬೆಹಣ್ಣು ಮುಂತಾದ ಹತ್ತು ಹಲವಾರು ಕಂದಾಚಾರಗಳಿಗೆ ಮುಗ್ಧ ಜನ ಬಲಿಯಾಗುತ್ತಿದ್ದಾರೆ. ಡೋಂಘಿ ಬಾಬಾಗಳಿಂದ ಹಾಗೂ ಸ್ವಯಂಘೋಷಿತ ದೇವಮಾನವರಿಂದ ಮುಗ್ಧ ಮಹಿಳೆಯರು, ಅಮಾಯಕರು ಮೋಸಕ್ಕೆ ಒಳಗಾಗುತ್ತಿದ್ದಾರೆ, ಇವೆಲ್ಲವುಗಳ ಜಾಗೃತಿಗಾಗಿ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಉಪಯುಕ್ತ ಎಂದರು.

ಪವಾಡ ರಹಸ್ಯ ಬಯಲು: ತೆಂಗಿನ ಕಾಯಿಯಲ್ಲಿ ಹೂವು ಬರುವುದು, ನಿಂಬೆ ಹಣ್ಣಿನಲ್ಲಿ ರಕ್ತ ಬರುವುದು, ಬೆಂಕಿ-ಕರ್ಪೂರ ಬಾಯಲ್ಲಿ ಬೆಳಗುವುದು, ಗಾಳಿಯಲ್ಲಿ ವಿಭೂತಿ, ಚೈನು, ಉಂಗುರ ಸೃಷ್ಟಿಸುವುದು, ಮುಟ್ಟಿದ್ದೆಲ್ಲ ಸಿಹಿ ಮಾಡುವುದು, ಕೊಳ್ಳಿ ದೆವ್ವ, ಮೈಯಲ್ಲಿ ಶಸ್ತ್ರ ಹಾಕಿಕೊಳ್ಳುವುದು ಹೀಗೆ ಮುಂತಾದವುಗಳನ್ನು ಕಡಿವಾಣ ಹಾಕುವ ಸಲುವಾಗಿ ವೈಜ್ಞಾನಿಕ ಕ್ರಿಯೆಯಿಂದ ಜರುಗುವ ಅದರಲ್ಲಿ ಅಡಗಿರುವ ನಿಜವಾದ ರೂಪ ತೋರಿಸಿ ಅರಿವು ಮೂಡಿಸಲಾಯಿತು.

Advertisement

ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಎಂ.ಡಿ. ಚಿಕ್ಕಣ್ಣನವರ, ಸಂಪನ್ಮೂಲ ವ್ಯಕ್ತಿಗಳಾದ ಶ್ಯಾಮ್‌, ರಾಧಾ, ರಮೇಶ ನಾಯ್ಕ, ಮಂಗಳಾ ಮತ್ತು ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next