Advertisement

ಮಹಾನ್‌ ಶಿಖರ ಉರುಳಿತು

10:47 AM Sep 28, 2017 | |

ಮಹಾಭಾರತ ಯುದ್ಧದ ಸಂದರ್ಭದಲ್ಲಿ “ಶಿಖಂಡಿಯ ಎದುರು ಯುದ್ಧ ಮಾಡಲಾರೆ ಎಂದು ನಾನು ಪ್ರತಿಜ್ಞೆ ಮಾಡಿದ್ದೇನೆ. ನನ್ನನ್ನು ನಿಗ್ರಹಿಸಿಕೊಳ್ಳಬೇಕೆಂದರೆ ನೀವು ಶಿಖಂಡಿಯನ್ನು ಮುಂದಿಟ್ಟುಕೊಂಡು ಯುದ್ಧ ಮಾಡಿ’ ಎಂದು ಭೀಷ್ಮರೇ ಉಪಾಯ ಹೇಳಿಕೊಟ್ಟರು. ಈ ಸಲಹೆಗೆ ಪಾಂಡವರೂ ಒಪ್ಪಿದರು. ಮರುದಿನ ಪಾಂಡವರ ಸೈನ್ಯವು ರಣರಂಗಕ್ಕೆ ನಡೆದಾಗ ಶಿಖಂಡಿಯು ಮುಂಭಾಗದಲ್ಲಿದ್ದ. ಅವನ ಸುತ್ತಮುತ್ತ ಸೈನ್ಯದ ಶೂರರು ಇದ್ದರು. ಭೀಷ್ಮರು ಕೌರವ ಸೈನ್ಯದ ಮುಂಭಾಗದಲ್ಲಿದ್ದರು. ದುರ್ಯೋಧನನೇ ಅವರ ಕಾವಲಿಗೆ ನಡೆದ.

Advertisement

ಕಾಳಗ ಪ್ರಾರಂಭವಾಯಿತು. ಭೀಷ್ಮರು ಸಾವಿರಾರು ಮಂದಿ ಪಾಂಡವ ಸೈನಿಕರನ್ನು ಕೊಂದರು. ಸಾತ್ಯಕಿಯು ಕೌರವ ಯೋಧರನ್ನು ಸಂಹರಿಸಿದ. ಭೀಷ್ಮರಂತೂ ಯಮನಂತೆ ಶತ್ರುಗಳನ್ನು ಉರುಳಿಸಿದರು. ಪಾರ್ಥನು ರೋಷದಿಂದ ಕೌರವ ಯೋಧರನ್ನು ಕೊಂದ. ದುರ್ಯೋಧನನು ಮತ್ತೆ ಭೀಷ್ಮರ ಬಳಿಗೆ ಹೋಗಿ ಅರ್ಜುನನಿಂದ ತನ್ನ ಸೈನ್ಯವನ್ನು ಉಳಿಸುವಂತೆ ಬೇಡಿದ. ಅವರು, “ಪ್ರತಿನಿತ್ಯ ಹತ್ತು ಸಾವಿರ ಪಾಂಡವ ಸೈನಿಕರನ್ನು ಕೊಲ್ಲುತ್ತಿದ್ದೇನೆ. ಇವತ್ತು ಪಾಂಡವರು ಸಾಯಬೇಕು. ಇಲ್ಲವೇ ನಾನು ಸಾಯಬೇಕು, ಎಂದು, ಯೋಧರನ್ನೂ ಆನೆಗಳನ್ನೂ ಅಶ್ವಗಳನ್ನೂ ಕೊಲ್ಲುತ್ತ ನಡೆದರು. ಶತ್ರುಗಳಿಗೆ ಕಣ್ಣೆತ್ತಿ ಅವರನ್ನು ನೋಡಲೂ ಭಯವಾಗುತ್ತಿತ್ತು.

ಅರ್ಜುನನು ಶಿಖಂಡಿಗೆ, “ಭೀಷ್ಮರನ್ನು ಎದುರಿಸು, ಅವರ ಬಾಣಗಳಿಗೆ ಹೆದರಬೇಡ. ಇಂದು ನಾನು ಅವರನ್ನು ಕೊಲ್ಲುತ್ತೇನೆ’ ಎಂದ. ಈ ಮಾತುಗಳನ್ನು ಕೇಳಿ ಅಭಿಮನ್ಯು ಮೊದಲಾದ ಪಾಂಡವ ವೀರರು ಭೀಷ್ಮರ ಮೇಲೆ ಆಕ್ರಮಣ ಮಾಡಿದರು. ದ್ರೋಣ, ದುರ್ಯೋಧನ, ಕೃತವರ್ಮ ಮೊದಲಾದವರು ಭೀಷ್ಮರ ನೆರವಿಗೆ ಹೋದರು. ಇವರ ನಡುವೆ ಭೀಕರ ಕಾಳಗ ನಡೆಯಿತು. ಭೀಷ್ಮರು ಶತ್ರು ಯೋಧರನ್ನು ಕೊಲ್ಲುತ್ತ ಸಾಗಿದರು. ಆದರೆ ಅವರಿಗೆ ಉತ್ಸಾಹ ಅಡಗಿತ್ತು. ಹತ್ತಿರ ಕಂಡ ಯುಧಿಷ್ಠಿರನಿಗೆ, “ನನಗೆ ಸಾಕಾಗಿದೆ, ಯುಧಿಷ್ಠಿರ ; ನನ್ನನ್ನು ಕೊಲ್ಲಲು ಪಾರ್ಥ ಮೊದಲಾದವರನ್ನು ಕರೆ’ ಎಂದರು. ಯುಧಿಷ್ಠಿರ, ಧೃಷ್ಟದ್ಯುಮ್ನ, ಮೊದಲಾದವರು ತಮ್ಮ ಸೈನ್ಯವನ್ನು ಹುರಿದುಂಬಿಸಿದರು. 

ಆನಂತರದಲ್ಲಿ ಭೀಷ್ಮರ ಸುತ್ತ ಪಾಂಡವ ಪ್ರಮುಖರ ಆಕ್ರಮಣವೋ ಆಕ್ರಮಣ. ಭೀಷ್ಮರು “ವಾಸುದೇವನು ಪಾಂಡವರ ಕಡೆ ಇಲ್ಲದಿದ್ದರೆ ನಾನು ಪಾಂಡವ ಸೈನ್ಯವನ್ನೆಲ್ಲ ಕೊಚ್ಚಿಹಾಕುತ್ತಿದ್ದೆ. ಈಗ ಶಿಖಂಡಿ ನನ್ನ ಮುಂದೆ ಬರುತ್ತಿದ್ದಾನೆ. ನಾನು ಯುದ್ಧ ಮಾಡುವುದಿಲ್ಲ’ ಎಂದುಕೊಂಡರು. ಯುದ್ಧವನ್ನು ವೀಕ್ಷಿಸುತ್ತಿದ್ದ ಋಷಿಗಳೂ, ವಸುಗಳೂ, “ನಿಮ್ಮ ನಿರ್ಧಾರ ಸರಿಯಾಗಿದೆ’ ಎಂದರು. ಈ ಸಂದರ್ಭದಲ್ಲಿಯೇ ಶಿಖಂಡಿ ಪ್ರಯೋಗಿಸಿದ ಒಂಬತ್ತು ಬಾಣಗಳು ಭೀಷ್ಮರ ಎದೆಯನ್ನು ಘಾತಿಸಿದವು. ಭೀಷ್ಮರು ಅನ್ಯಮನಸ್ಕರಾದುದನ್ನು ಗಮನಿಸಿದ ಅರ್ಜುನನು ಭೀಷ್ಮರ ಬಿಲ್ಲನ್ನು ಕತ್ತರಿಸಿದ.

ಭೀಷ್ಮರು, “ಈ ಬಾಣಗಳು ಶಿಖಂಡಿಯ ಬಾಣಗಳಲ್ಲ. ಭೀಮನ ಗದೆಯ ಪೆಟ್ಟುಗಳಂತೆ ಘಾತಿಸುವ ಈ ಬಾಣಗಳು ಅರ್ಜುನನವು’ ಎಂದರು. ಅರ್ಜುನನು ಬಾಣಗಳ ಮಳೆಯನ್ನು ಇನ್ನೂ ಬಿರುಸುಗೊಳಿಸಿದ. ಭೀಷ್ಮರ ಸುತ್ತ ಇದ್ದ ಹಲವರು ಕೌರವ ವೀರರು ಪಲಾಯನ ಮಾಡಿದರು. ಭೀಷ್ಮರ ದೇಹದಲ್ಲೆಲ್ಲ ಬಾಣಗಳೇ. ಆಗ ಭೀಷ್ಮರು ತಮ್ಮ ರಥದಲ್ಲಿ ಉರುಳಿದರು. ಒಂದು ಮಹಾನ್‌ ಶಿಖರವೇ ಉರುಳಿದಂತಾಯಿತು. ಬೀಳುತ್ತಿದ್ದ ಭೀಷ್ಮರು ಸೂರ್ಯನತ್ತ ನೋಡಿ ಇನ್ನೂ ಉತ್ತರಾಯಣವಾಗಿಲ್ಲ ಎಂದು ಗುರುತಿಸಿದರು. ಬಯಸಿದಾಗ ದೇಹ ಬಿಡುವ ವರವು ಅವರಿಗೆ ತಂದೆಯಿಂದ ಸಿಕ್ಕಿತ್ತು. ಹಾಗಾಗಿ, ಉತ್ತರಾಯಣದವರೆಗೆ ಪ್ರಾಣ ಹಿಡಿದುಕೊಂಡಿರಲು ನಿಶ್ಚಯಿಸಿದರು.

Advertisement

ಭೀಷ್ಮರು ರಥದಿಂದ ಉರುಳಿದ್ದನ್ನು ಕಂಡು ದುರ್ಯೋಧನನು ದಿಕ್ಕುಗೆಟ್ಟ. ಕೌರವ ಸೈನಿಕರ ಕಣ್ಣುಗಳಿಂದ ನೀರು ಉರುಳಿತು. ಅವರು ಯುದ್ಧ ಮಾಡುವುದನ್ನು ಮರೆತು ದಿಕ್ಕುಗಾಣದೆ ನಿಂತರು. ಎರಡು ಕಡೆಯ ಯೋಧರೂ ಅಸ್ತ್ರಗಳನ್ನು ಕೆಳಗಿಟ್ಟರು. ಭೀಷ್ಮರು ಯೋಗದಲ್ಲಿ ನಿರತರಾಗಿ ಉತ್ತರಾಯಣಕ್ಕಾಗಿ ಕಾಯತೊಡಗಿದರು. ಸಂಜಯನು ಭೀಷ್ಮರು ಉರುಳಿದುದನ್ನು ಹೇಳುತ್ತಲೇ ಧೃತರಾಷ್ಟ್ರನು, “ಸಂಜಯ, ನನ್ನ ಹೃದಯವನ್ನು ಕಲ್ಲಿನಿಂದ ಮಾಡಿರಬೇಕು. ಇಲ್ಲವಾದರೆ ಈ ಸುದ್ದಿಯನ್ನು ಕೇಳಿ ಅದು ಬಿರಿಯಬೇಕಾಗಿತ್ತು. ದೇವವ್ರತರು ಈ ಸ್ಥಿತಿಗೆ ಬಂದರು ಎಂದು ನಾನು ನಂಬಲಾರೆ’ ಎಂದು ಶೋಕಿಸಿದ. ಧೃತರಾಷ್ಟ್ರನ ಮಾತಿಗೆ ಪ್ರತ್ಯುತ್ತರವಾಗಿ ಸಂಜಯ ತನ್ನ ಕಥನವನ್ನು ಮುಂದುವರಿಸಿದ.

ಪಾಂಡವ ಕೌರವರೆಲ್ಲ ಭೀಷ್ಮರ ಸುತ್ತ ನಿಂತರು. ಭೀಷ್ಮರು ತಲೆದಿಂಬು ಬೇಕೆಂದರು. ದುರ್ಯೋಧನನು ಮೆತ್ತಗಿನ ದಿಂಬುಗಳನ್ನು ತರಿಸಿದ. ಭೀಷ್ಮರು ಅವು ಬೇಡವೆಂದು ಹೇಳಿ, “ಅರ್ಜುನ, ನನಗೆ ಯೋಗ್ಯವಾದ ದಿಂಬನ್ನು ಕೊಡು’ ಎಂದರು. ಅರ್ಜುನನು ಭೀಷ್ಮರ ಅಪ್ಪಣೆ ಪಡೆದು, ಬಾಣಗಳನ್ನು ಅಭಿಮಂತ್ರಿಸಿ, ಅವರ ತಲೆಗೆ ಆಧಾರವಾಗುವಂತೆ ಅವುಗಳನ್ನು ನೆಲಕ್ಕೆ ಹೊಡೆದ. ದುರ್ಯೋಧನನು ವೈದ್ಯರನ್ನು ಕರೆಸಿದ. ಆದರೆ ಭೀಷ್ಮರು ಅವರ ಅಗತ್ಯವಿಲ್ಲ ಎಂದು ಹೇಳಿ, ತಾವು ಉತ್ತರಾಯಣದವರೆಗೆ ಹಾಗೆಯೇ ಬಾಣಗಳ ಮೇಲೆ ಮಲಗಿರುವುದಾಗಿ ಹೇಳಿದರು. ಪಾಂಡವರೂ ಕೌರವರೂ ಅವರಿಗೆ ನಮಿಸಿ ತಮ್ಮ ಶಿಬಿರಗಳಿಗೆ ಹೋದರು.

(ಪ್ರೊ. ಎಲ್‌. ಎಸ್‌. ಶೇಷಗಿರಿ ರಾವ್‌ ಅವರ “ಕಿರಿಯರ ಮಹಾಭಾರತ’ ಪುಸ್ತಕದಿಂದ ಆಯ್ದ ಭಾಗ)

Advertisement

Udayavani is now on Telegram. Click here to join our channel and stay updated with the latest news.

Next