Advertisement
ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರಾಣವನ್ನೇ ಪಣವಾಗಿಟ್ಟು ಅನನ್ಯ ಸೇವೆಗೈಯುತ್ತಿರುವ ಪೊಲೀಸರು, ಗೃಹ ರಕ್ಷಕ ದಳ, ಸರಕಾರಿ ಆಸ್ಪತ್ರೆ, ಕಂದಾಯ, ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತರು, ಪುರಸಭಾ ನೌಕರರು-ಪೌರಕಾರ್ಮಿಕರು, ತಾಲೂಕು ಕಚೇರಿ ಸಿಬ್ಬಂದಿ, ಕ್ವಾರಂಟೈನ್ ಕೇಂದ್ರ ಮಾತ್ರವಲ್ಲದೇ ಆಹಾರದ ಅಗತ್ಯವುಳ್ಳ ನೂರಾರು ಮಂದಿಗೆ ಅವರ ಬಳಿ ತೆರಳಿ ಊಟ ಪೂರೈಸುವ ಮೂಲಕ ಪಡುತಿರುಪತಿ ಕ್ರಿಕೆಟರ್ñ ತಂಡ ಶ್ರೇಷ್ಠ ಕಾರ್ಯ ಮಾಡುತ್ತಿದ್ದು, ಈ ತಂಡದೊಂದಿಗೆ ಜೈ ಹಿಂದ್ ಕ್ಲಬ್ ಕೂಡ ಜೊತೆಗೂಡಿದೆ.
ಹೊಟೇಲ್ ಇಲ್ಲದೇ ಚೆಕ್‌ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರಿಗೆ ತೊಂದರೆಯಾಗುತ್ತಿರುವುದನ್ನು ಮನಗಂಡ ಪಡುತಿರುಪತಿ ತಂಡದ ಸದಸ್ಯರು ಆಹಾರ ಸಾಮಗ್ರಿ ತರಿಸಿ, ಪತ್ರಿಕೆ ವಿತರಕ ಗೋವಿಂದರಾಯ ಪೈ ಅವರ ಮನೆಯಲ್ಲಿ ಅಡುಗೆ ತಯಾರಿಸಿ ಚೆಕ್‌ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಊಟ ಪೂರೈಸಿದರು. ಕೆಲದಿನಗಳಲ್ಲೇ ಆಹಾರ ಬೇಡಿಕೆ ಜಾಸ್ತಿಯಾಯಿತು. ಇದರೊಂದಿಗೆ ದಾನಿಗಳು ಸ್ವಇಚ್ಛೆಯೊಂದಿಗೆ ಸಹಕಾರ ನೀಡಲು ಮುಂದಾದರು. ಮಹಾವೀರ ಜಯಂತಿಯಂಗವಾಗಿ ಕಾರ್ಕಳ ಜೈನ್ ಮಿಲನ್ ವತಿಯಿಂದ ಒಂದು ದಿನದ ಖರ್ಚು ಭರಿಸಿದ್ದರು. ಪ್ರಸ್ತುತ ಪ್ರತಿದಿನ 400ಕ್ಕೂ ಅಧಿಕ ಮಂದಿಗೆ ಜಿಎಸ್‌ಬಿ ಶೈಲಿಯ ಸಸ್ಯಾಹಾರಿ ಊಟ ತಯಾರಿಸಲಾಗುತ್ತಿದೆ. ಇಷ್ಟೊಂದು ಮಂದಿಗೆ ಊಟ ತಯಾರಿಸುವುದು ಸುಲಭದ ಮಾತಲ್ಲ. ಮಾತ್ರವಲ್ಲದೇ ಆಯಾಯ ಕಚೇರಿ, ಮನೆಗಳಿಗೆ, ತಾಲೂಕಿನ ವಿವಿಧ ಚೆಕ್‌ಪೋಸ್ಟ್‌ಗೆ ಸುಡುಬಿಸಿಲು ಎನ್ನದೇ ಬೈಕ್‌ನಲ್ಲಿ ತೆರಳಿ ಊಟ ಪೂರೈಸುತ್ತಿರುವುದು ನಿಜಕ್ಕೂ ಮಹತ್ಕಾರ್ಯವೇ ಸರಿ. ಮಧಾ°ಹ್ನ ಅನ್ನ, ಸಾಂಬಾರು, ಪಲ್ಯ, ಉಪ್ಪಿನಕಾಯಿ, ಮಜ್ಜಿಗೆಯಿದ್ದರೆ, ಉಪಾಹಾರಕ್ಕೆ ಇಡ್ಲಿ-ಚಟ್ನಿ, ಪುಳಿಯೊಗರೆ, ಬನ್ಸ್, ಸಜ್ಜಿಗೆ-ಅವಲಕ್ಕಿ ನೀಡಲಾಗುತ್ತಿದೆ. ಸರಕಾರಿ ಆಸ್ಪತ್ರೆ ರೋಗಿಗಳಿಗೆ ಅನ್ನದೊಂದಿಗೆ ಹಣ್ಣು ನೀಡಲಾಗುತ್ತಿದ್ದು, ವಿಶೇಷ ಸಂದರ್ಭ ಪಾಯಸವನ್ನೂ ಮಾಡಲಾಗುತ್ತಿದೆ.
Related Articles
Advertisement
ಅಚ್ಚುಕಟ್ಟುತನಪಡುತಿರುಪತಿ ಕ್ರಿಕೆಟರ್ ತಂಡದ ಸದಸ್ಯರು ಬಹಳ ವ್ಯವಸ್ಥಿತವಾಗಿ, ಶುಚಿ-ರುಚಿಯಾಗಿ ಅಡುಗೆ ತಯಾರಿಸಿ, ಪ್ಯಾಕಿಂಗ್ ಮಾಡಿ, ಆಯಾಯ ಸ್ಥಳಗಳಿಗೆಂದು ನಿಗದಿಗೊಳಿಸಲಾಗಿರುವ ರಟ್ಟಿನ ಬಾಕ್ಸ್‌ಗೆ ಅನ್ನದ ಪೊಟ್ಟಣ ತುಂಬಿಸಲಾಗುತ್ತಿದೆ. ಬಳಿಕ 3 ಕಾರು, 15 ದ್ವಿಚಕ್ರ ವಾಹನದಲ್ಲಿ ಆಹಾರವನ್ನು ಆಯಾಯ ಸ್ಥಳಗಳಿಗೆ ಹೋಗಿ ವಿತರಣೆ ಮಾಡಲಾಗುತ್ತಿದೆ. ಇದೆಲ್ಲ ಕಾರ್ಯವೂ ಅತ್ಯಂತ ಅಚ್ಚುಕಟ್ಟುತನದಿಂದ ನಡೆಯುತ್ತಿದೆ. ಮಾದರಿ
ದಾನಿಗಳ ಸಹಕಾರದೊಂದಿಗೆ ದಿನಂಪತ್ರಿ 400 ಕ್ಕೂ ಅಧಿಕ ಮಂದಿಗೆ ಊಟ ನೀಡಲು ಸಾಧ್ಯವಾಗುತ್ತಿದೆ. ಒಂದು ವೇಳೆ ಸರಕಾರದಿಂದ ಲಕ್ಷ-ಲಕ್ಷ ರೂ. ಅನುದಾನ ದೊರೆಯುತ್ತಿದ್ದರೂ ಇಷ್ಟೊಂದು ಸಮರ್ಪಕವಾಗಿ ಅಗತ್ಯವುಳ್ಳವರಿಗೆ ಆಹಾರ ವಿತರಣೆ ಖಂಡಿತ ಸಾಧ್ಯವಾಗುತ್ತಿರಲಿಲ್ಲ. ಜಾತಿ, ಧರ್ಮ ಅಂತ ಯಾವೊಂದು ತಾರತಮ್ಯವಿಲ್ಲದೇ ಸೇವಾ ಮನೋಭಾವದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಇಂತಹ ಮಾದರಿ ತಂಡ ಪ್ರತಿ ತಾಲೂಕಿನಲ್ಲೂ ಕಾರ್ಯನಿರ್ವಹಿಸುತ್ತಿದ್ದಲ್ಲಿ ತಾಲೂಕು ಆಡಳಿತಕ್ಕೆ ಬಹಳ ಅನುಕೂಲವಾಗಿರುತ್ತಿತ್ತು. ಅಧಿಕಾರಿಗಳ ಭೇಟಿ
ಶಾಸಕ ವಿ. ಸುನಿಲ್ ಕುಮಾರ್, ತಹಶೀಲ್ದಾರ್ ಪುರಂದರ ಹೆಗ್ಡೆ, ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ, ಡಿವೈಎಸ್‌ಪಿ ಭರತ್ ರೆಡ್ಡಿ, ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ನಗರ ಠಾಣಾ ಎಸ್‌ಐ ಮಧು ಬಿ.ಇ., ಗ್ರಾಮಾಂತರ ಠಾಣಾ ಎಸ್‌ಐ ನಾಸಿರ್ ಹುಸೇನ್ ಭೇಟಿ ನೀಡಿ ತಂಡದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದರು. ಪ್ರಚಾರವಿಲ್ಲ
ಸಂಘ-ಸಂಸ್ಥೆಗಳು, ದಾನಿಗಳು ಅಗತ್ಯವುಳ್ಳವರಿಗೆ ಅಕ್ಕಿ, ಆಹಾರ ಸಾಮಗ್ರಿ ವಿತರಣೆ ಮಾಡಿ ಫೇಸ್‌ಬುಕ್, ವ್ಯಾಟ್ಸ್‌ಪ್‌ನಲ್ಲಿ ಹರಿಯಬಿಡುವುದನ್ನು ನಾವು ಕಾಣುತ್ತೇವೆ. ಆದರೆ, ಪಡುತಿರುಪತಿ ತಂಡದ ಯಾವೊಬ್ಬ ಸದಸ್ಯನೂ ತಮ್ಮ ಕಾರ್ಯದ ಕುರಿತು ಫೋಟೋ ತೆಗೆದು, ನಾಲ್ಕು ಪದ ಬರೆದಿರುವುದು ಕಂಡು ಬಂದಿಲ್ಲ. ಏನೇ ಇರಲಿ ಹಸಿದ ಹೊಟ್ಟೆಗೆ ಅನ್ನವಿಕ್ಕುವ ಮೂಲಕ ಪುಣ್ಯದ ಕಾರ್ಯದಲ್ಲಿ ತೊಡಗಿಸಿಕೊಂಡ ಸರ್ವರಿಗೂ ನಮ್ಮದೊಂದು ಸಲಾಂ.. – ರಾಮಚಂದ್ರ ಬರೆಪ್ಪಾಡಿ