Advertisement

ಹಾರಾಡೋಕೆ ಗರುಡ ರೆಡಿ

09:48 PM Oct 03, 2019 | Team Udayavani |

2016ರಲ್ಲಿ ಭಾರತೀಯ ಸೇನೆ ನಡೆಸಿದ ಉರಿ ಸರ್ಜಿಕಲ್‌ ಸ್ಟ್ರೈಕ್‌ನಲ್ಲಿ
ಉಗ್ರಗಾಮಿಗಳ ನೆಲೆಗಳ ಮೇಲೆ ದಾಳಿ ಮಾಡಲು “ಗರುಡ’ ಎನ್ನುವ ಹೆಸರಿನ ಡ್ರೋನ್‌ ಮಾದರಿಯ ಅಸ್ತ್ರವನ್ನು ಬಳಸಿಕೊಳ್ಳಲಾಗಿತ್ತು. ಇದೇ ವರ್ಷ ಪ್ರಾರಂಭದಲ್ಲಿ ತೆರೆಗೆ ಬಂದಿದ್ದ ಹಿಂದಿಯ ಸೂಪರ್‌ ಹಿಟ್‌ ಚಿತ್ರ “ಉರಿ’ಯಲ್ಲೂ ಈ “ಗರುಡ’ನ ಆಪರೇಶನ್‌ ಬಗ್ಗೆ ಉಲ್ಲೇಖೀಸಲಾಗಿತ್ತು. ಈಗ ಇದೇ “ಗರುಡ’ ಹಸರಿನಲ್ಲಿ ಕನ್ನಡದಲ್ಲಿ ಚಿತ್ರವೊಂದು ತೆರೆಗೆ ಬರುತ್ತಿದೆ. ಅಂದಹಾಗೆ, “ಉರಿ’ ಸರ್ಜಿಕಲ್‌ ಸ್ಟ್ರೈಕ್‌ನಲ್ಲಿ ಬಳಸಲಾಗಿದ್ದ “ಗರುಡ’ನಿಗೂ ಕನ್ನಡದಲ್ಲಿ ಬರುತ್ತಿರುವ “ಗರುಡ’ ಚಿತ್ರಕ್ಕೂ ಸಣ್ಣದೊಂದು ಲಿಂಕ್‌ ಇದೆಯಂತೆ. ಅದೇನು ಅನ್ನೋದನ್ನ ಚಿತ್ರದಲ್ಲೇ ನೋಡಬೇಕು ಎನ್ನುವುದು ಚಿತ್ರತಂಡದ ಮೊದಲ ಮಾತು.

Advertisement

ಈ ಹಿಂದೆ “ಸಿಪಾಯಿ’ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ಸಿದ್ಧಾರ್ಥ್ ಮಹೇಶ್‌ “ಗರುಡ’ ಚಿತ್ರದ ಮೂಲಕ ಮತ್ತೂಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇಲ್ಲಿಯವರೆಗೆ ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಿಗೆ ನೃತ್ಯ ಸಂಯೋಜಕರಾಗಿ, ಕನ್ನಡದ ಅನೇಕ ಸ್ಟಾರ್‌ ನಟ-ನಟಿಯರನ್ನು ಕುಣಿಸಿದ್ದ ಧನು ಕುಮಾರ್‌. ಕೆ “ಗರುಡ’ ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದು, ಚಿತ್ರಕ್ಕೆ ಚಿತ್ರಕಥೆ ಬರೆದು ಆ್ಯಕ್ಷನ್‌-ಕಟ್‌ ಹೇಳಿದ್ದಾರೆ.

ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಮುಗಿಸಿ ತೆರೆಗೆ ಬರಲು ರೆಡಿಯಾಗುತ್ತಿರುವ, “ಗರುಡ’ ಚಿತ್ರದ ಫ‌ಸ್ಟ್‌ ಟ್ರೇಲರ್‌ ಅನ್ನು ಇತ್ತೀಚೆಗೆ ನಟ ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಇದೇ ವೇಳೆ “ಗರುಡ’ನಿಗೆ ಸಿಗುತ್ತಿರುವ ಪ್ರತಿಕ್ರಿಯೆ ಮತ್ತು ಚಿತ್ರದ ಬಗ್ಗೆ ಮಾಹಿತಿ ನೀಡಲು ಪತ್ರಕರ್ತರ ಮುಂದೆ ಬಂದಿದ್ದ ಚಿತ್ರತಂಡ, “ಗರುಡ’ನ ವಿಶೇಷತೆಗಳನ್ನು ಹಂಚಿಕೊಂಡಿತು. ಚಿತ್ರದ ಬಗ್ಗೆ ಮೊದಲು ಮಾತನಾಡಿದ ನಾಯಕ ನಟ ಸಿದ್ಧಾರ್ಥ್ ಮಹೇಶ್‌, “ಚಿತ್ರದಲ್ಲಿ ಮೂರು ಶೇಡ್‌ನ‌ಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಚಿತ್ರದಲ್ಲಿ ಆ್ಯಕ್ಷನ್‌, ಸೆಂಟಿಮೆಂಟ್‌, ಎಮೋಶನ್ಸ್‌, ಲವ್‌ ಎಲ್ಲವೂ ಇದೆ. ಇಡೀ ಫ್ಯಾಮಿಲಿ ಕುಳಿತು ನೋಡಿ ಎಂಜಾಯ್‌ ಮಾಡಬಹುದಾದ ಚಿತ್ರ. ಎಲ್ಲೂ ಕೊರತೆಯಾಗದಂತೆ ಅದ್ಧೂರಿಯಾಗಿ ಚಿತ್ರವನ್ನು ನಿರ್ಮಿಸಿದ್ದೇವೆ. ಚಿತ್ರದ ಟ್ರೇಲರ್‌ಗೆ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿದ್ದು, ಚಿತ್ರ ಆಡಿಯನ್ಸ್‌ಗೆ ಖಂಡಿತಾ ಇಷ್ಟವಾಗುತ್ತದೆ’ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಚಿತ್ರದ ಕಥಾಹಂದರದ ಬಗ್ಗೆ ಮಾತನಾಡಿದ ನಿರ್ದೇಶಕ ಧನು ಕುಮಾರ್‌. ಕೆ, “ಮನೆಯ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಹುಡುಗ ಕುಟುಂಬಕ್ಕಾಗಿ ಏನೆಲ್ಲ ಮಾಡುತ್ತಾನೆ. ಯಾವ ರೀತಿಯ ತ್ಯಾಗಕ್ಕೆ ಮುಂದಾಗುತ್ತಾನೆ. ಖುಷಿಯಾಗಿರುವ, ಸುಂದರ ಕುಟುಂಬದಲ್ಲಿ ಆಕಸ್ಮಿಕವಾಗಿ ನಡೆಯುವ ಘಟನೆಯೊಂದು ಆ ಹುಡುಗನ ಜೀವನವನ್ನ ಹೇಗೆ ಬದಲಾಯಿಸುತ್ತದೆ. ಮಾನಸಿಕ ಶಾಂತಿ ಭಂಗ ಆದಾಗ, ಆ ಹುಡುಗ ಹೇಗೆ ಪ್ರತಿಕ್ರಿಯಿಸುತ್ತಾನೆ ಅನ್ನೋದು ಚಿತ್ರದ ಕಥೆಯ ಎಳೆ’ ಎಂದರು.

Advertisement

ಇನ್ನು “ಗರುಡ’ ಚಿತ್ರಕ್ಕೆ ಸ್ವತಃ ನಾಯಕ ಸಿದ್ಧಾರ್ಥ್ ಮಹೇಶ್‌ ಅವರೇ ಕಥೆ ಬರೆದಿದ್ದು, ಚಿತ್ರದಲ್ಲಿ ಆಶಿಕಾ ರಂಗನಾಥ್‌ ಮತ್ತು ಐಂದ್ರಿತಾ ರೇ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಖಳನಾಯಕನಾಗಿರುವ ನಟ ಆದಿ ಲೋಕೇಶ್‌, ಹೆಣ್ಣುಮಕ್ಕಳು ಶಾಪ ಹಾಕುವಂತ ಪಾತ್ರದಲ್ಲಿ ಅಭಿನಯಿಸಿದ್ದಾರಂತೆ. ಇನ್ನು ರಗಡ್‌ ಪೊಲೀಸ್‌ ಅಧಿಕಾರಿಯಾಗಿ ಶ್ರೀನಗರ ಕಿಟ್ಟಿ, ತನಿಖಾ ಸಂಸ್ಥೆಯ ಅಧಿಕಾರಿಯಾಗಿ ರಘು ದೀಕ್ಷಿತ್‌ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಂಗಾಯಣ ರಘು, ರಾಜೇಶ್‌ ನಟರಂಗ, ರಮೇಶ್‌ ಪಂಡಿತ್‌, ಸುನೇತ್ರಾ ಪಂಡಿತ್‌, ರಮೇಶ್‌ ಭಟ್‌, ರವಿಶಂಕರ್‌ ಗೌಡ, ಆನಂದ್‌, ಗಿರಿ, ಜಹಾಂಗೀರ್‌, ಸುಜಯ್‌ ಶಾಸ್ತ್ರಿ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ನಾಲ್ಕು ಹಾಡುಗಳಿಗೆ ರಘು ದೀಕ್ಷಿತ್‌ ಸಂಗೀತವಿದ್ದು, ಜೈ ಆನಂದ್‌ ಛಾಯಾಗ್ರಹಣ, ದೀಪು ಎಸ್‌. ಕುಮಾರ್‌ ಸಂಕಲನವಿದೆ. ಚಿತ್ರಕ್ಕೆ ವಿನೋದ್‌, ವಿಕ್ರಂಮೋರ್‌, ಡಾ.ರವಿವರ್ಮ ಸಾಹಸವಿದೆ. “ಆರೆಂಜ್‌ ಫಿಕ್ಸೆಲ್ಸ್‌’ ಬ್ಯಾನರ್‌ನಲ್ಲಿ ರಾಜಾರೆಡ್ಡಿ ಬಿ.ಕೆ ಮತ್ತು ಕಿಶೋರ್‌. ಎ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸದ್ಯ ಟ್ರೇಲರ್‌ ಮೂಲಕ ಗಮನ ಸೆಳೆಯುತ್ತಿರುವ “ಗರುಡ’ ಇದೇ ನವೆಂಬರ್‌ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next