ಹೊಸಪೇಟೆ: ತಾಲೂಕಿನ ಐತಿಹಾಸಿಕ ಕಮಲಾಪುರ ಕೆರೆಯ ಮೀನಿಗೆ ಈ ಬಾರಿ ಎಲ್ಲಿಲ್ಲದ ಬೇಡಿಕೆ. ಜಿಲ್ಲೆ ಮಾತ್ರವಲ್ಲದೆ, ರಾಜ್ಯದ ವಿವಿಧ ಜಿಲ್ಲೆಗಳ ಮೀನು ಸಗಟು ವ್ಯಾಪಾರಿಗಳು, ಮೀನು ಖರೀದಿಗಾಗಿ ಮುಗಿಬಿದ್ದಿದ್ದಾರೆ.
ಕಮಲಾಪುರ ಕರೆಯ ಮೀನಿಗೆ ಬೇಡಿಕೆ ಇರುವುದನ್ನು ಮನಗಂಡ ಮೀನು ವ್ಯಾಪಾರಿಗಳು, ಲಾಭ ಗಳಿಕೆಗಾಗಿ ಭದ್ರಾವತಿ ಹಾಗೂ ಶಿವಮೊಗ್ಗ ಸೇರಿದಂತೆ ಇತರೆ ಕಡೆಗಳಿಂದ ಕಮಲಾಪುರಕ್ಕೆ ಧಾವಿಸುತ್ತಿದ್ದಾರೆ. ಗುರುವಾರ ನಸುಕಿನಲ್ಲಿ ಮೀನುಗಾರರು ಬೀಸಿದ ಬಲೆಗೆ 3 ಟನ್ ಗಳಷ್ಟು ಮೀನು ಸಿಕ್ಕಿದ್ದು, ಅಷ್ಟೂ ಮೀನುಗಳನ್ನು ಲಾರಿಯಲ್ಲಿ ತುಂಬಿಕೊಂಡು ಸಾಗಿಸಿದರು. ಕಮಲಾಪುರ ಕೆರೆಯ ಮೀನು ಎಂದರೆ ಮತ್ಸ್ಯಪ್ರಿಯರ ಬಾಯಲ್ಲಿ ನಿರೂರಲಿದ್ದು, ಒಮ್ಮೆ ರುಚಿ ನೋಡಿದರೆ, ಮತ್ತೂಮ್ಮೆ ಬೇಕು ಅನ್ನಿಸುತ್ತದೆ. ಹೀಗಾಗಿ ಕೆರೆಯ ಏರಿಯ ಮೇಲೆ ಪ್ರಯಾಣ ಬೆಳೆಸುವ ಪ್ರಯಾಣಿಕರು ಸೇರಿದಂತೆ ಜಿಲ್ಲೆಯ ಬಹುತೇಕ ಜನರು, ಒಮ್ಮೆಯಾದರೂ ಈ ಕೆರೆ ಮೀನಿನ ರುಚಿ ಸವಿಯಲು ಕೊಂಡೊಯ್ಯುತ್ತಾರೆ.
ವಿವಿಧ ಜಾತಿ ಮೀನುಗಳು: ಕಟ್ಲಾ, ರವೌ, ಜೀಲಿಗೆ, ಕಾಮನ್ ಕರ್ಪೂ ಸೇರಿದಂತೆ ವಿವಿಧ ಜಾತಿಯ 1 ಕೆ.ಜಿ.ಯಿಂದ ಸುಮಾರು 3 ಕೆ.ಜಿ. ತೂಕದ ಮೀನುಗಳು ಕೆರೆಯಲ್ಲಿ ಸಿಗುತ್ತಿವೆ. ನೂರಾರು ಮೀನುಗಾರರು ಕೊರೆಯುವ ಚಳಿಯಲ್ಲೂ ಮೀನು ಹಿಡಿಯಲು ನಸುಕಿನಲ್ಲಿ ಕೆರೆಯ ನೀರಿಗೆ ಇಳಿಯುತ್ತಾರೆ.
ಕಳೆದ ವರ್ಷ ಮಳೆಯ ಕೊರತೆಯಿಂದ ಕೆರೆಯಲ್ಲಿ ನೀರೆಲ್ಲ ಬತ್ತಿ ಹೋಗಿ, ಸುತ್ತಮುತ್ತಲಿನ ಗ್ರಾಮದ ರೈತರು ಸೇರಿದಂತೆ ಮೀನುಗಾರರು ಪರದಾಡುವಂತಾಗಿತ್ತು. ಕೆರೆಯಲ್ಲಿ ನೀರು ಬರಿದಾಗುತ್ತಿದಂತಯೇ, ಇತ್ತ ಗ್ರಾಮಸ್ಥರು ಸ್ಥಳೀಯ ಸಂಘಟನೆಗಳ ಜೊತೆಗೂಡಿ, ಕೆರೆಯ ಹೂಳೆತ್ತಲು ಮುಂದಾಗಿ, ಫಲವತ್ತಾದ ಹೂಳನ್ನು ಟ್ರ್ಯಾಕ್ಟರ್ ಮೂಲಕ ಹೊಲ-ಗದ್ದೆಗಳಿಗೆ ಹಾಕಿಕೊಳ್ಳುವ ಮೂಲಕ ಫಲವತ್ತತೆ ಕಾಯ್ದುಕೊಂಡರು.
ಉತ್ತಮ ಮಳೆ: ಕಳೆದ ವರ್ಷಗಿಂತಲೂ ಈ ವರ್ಷ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕೆರೆಯಲ್ಲಿ ನೀರು ಸಾಕಷ್ಟು ಸಂಗ್ರಹವಾಗಿದ್ದು, ದಿನ ಒಂದಕ್ಕೆ 3 ಸಾವಿರ ಕೆಜಿಯಷ್ಟು ಮೀನುಗಳು ಮೀನುಗಾರರ ಬಲೆಗೆ ಬೀಳುತ್ತಿವೆ. ಇದರಿಂದ ಹರ್ಷಿತರಾಗಿರುವ ಮೀನುಗಾರರು, ಮೀನುಗಳನ್ನು ಹೊರ ಜಿಲ್ಲೆಗಳಿಗೆ ಮಾರಾಟ ಮಾಡಿಕೊಳ್ಳುತ್ತಿದ್ದು, ಕಳೆದ ಬಾರಿ ಕೆರೆಯಲ್ಲಿ ನೀರಿಲ್ಲದೆ ಒದ್ದಾಡಿದ್ದ ಮೀನುಗಾರರು, ತಾವು ಬೀಸಿದ ಬಲೆಯಲ್ಲಿ ದೊಡ್ಡ ಗಾತ್ರದ ಮೀನುಗಳನ್ನು ಸಿಕ್ಕಂತಲ್ಲ
ಮಂದಹಾಸ ಬೀರುತ್ತಿದ್ದಾರೆ.
ಪಿ.ಸತ್ಯನಾರಾಯಣ