ಕುಷ್ಟಗಿ: ತಾಲೂಕಿನ ಹಿರೇಮನ್ನಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಯದಹುಣಸಿ ಗ್ರಾಮದಲ್ಲಿ ಸಿಡಿಲು ಬಡಿದು ಹಾಗೂ 68 ಕುರಿ, 14 ಆಡು ಸೇರಿದಂತೆ ಒಂದು ಹೋರಿ ಮೃತಪಟ್ಟಿದೆ. ಮಾಯದ ಹುಣಸಿ ಗ್ರಾಮದ ಕರೇಹನುಮಪ್ಪ ಮಾದರ ಎಂಬುವರಿಗೆ ಸೇರಿದ ಕುರಿ ಹಾಗೂ ಹೋರಿ ಸಿಡಿಲಿಗೆ ಬಲಿಯಾಗಿವೆ. ಬುಧವಾರ ಸಂಜೆ ಮರದ ಕೆಳಗೆ ಕಟ್ಟಿದ ಜಾನುವಾರುಗಳಿಗೆ ಸಿಡಿಲು ಬಡಿದಿದ್ದು, ಲಕ್ಷಾಂತರ ರೂ. ಹಾನಿ ಸಂಭವಿಸಿದೆ.
ಈ ಕುರಿತು ತಹಶೀಲ್ದಾರ್ ಗುರು ಬಸವರಾಜ ಪ್ರತಿಕ್ರಿಯಿಸಿ, ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳನ್ನು ಸಿಡಿಲಿಗೆ ಮೃತಪಟ್ಟ ಜಾನುವಾರುಗಳ ಮರಣೋತ್ತರ ಪರೀಕ್ಷೆ ನಡೆಸಲು ಕಳುಹಿಸಲಾಗಿದೆ. ನೈಸರ್ಗಿಕ ವಿಕೋಪದಲ್ಲಿ ಜಾನುವಾರು ಕಳೆದುಕೊಂಡ ರೈತರಿಗೆ ಪರಿಹಾರಕ್ಕಾಗಿ ಗುರುವಾರ ಸಹಾಯಕ ಆಯುಕ್ತರಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಬುಧವಾರ ತಾಲೂಕಿನ ತಾವರಗೇರಿ, ಹಿರೇಮನ್ನಾಪುರ ಗ್ರಾಮದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ. ತಾವರಗೇರಾ: ಸಮೀಪದ ಚಿಕ್ಕ ಮುಕರ್ತಿಹಾಳ ಗ್ರಾಮದಲ್ಲಿ ಬುಧವಾರ ಸಿಡಿಲು ಬಡಿದು ಒಂದು ಎತ್ತು ಹಾಗೂ ಒಂದು ಆಕಳು ಮೃತಪಟ್ಟಿವೆ. ಗ್ರಾಮದ ಹನುಮಗೌಡ್ರ ಎಂಬುವರಿಗೆ ಸೇರಿದ ಜಾನುವಾರುಗಳು ದುರ್ಘಟನೆಯಲ್ಲಿ ಮೃತಪಟ್ಟಿದ್ದು, ಅಂದಾಜು 35 ಸಾವಿರ ರೂ. ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಕಂದಾಯ ನಿರೀಕ್ಷಕರ ಮಲ್ಲಿಕಾರ್ಜುನ, ಗ್ರಾಮಲೆಕ್ಕಾಧಿಕಾರಿ ವೆಂಕಟೇಶ, ಗ್ರಾಮ ಸಹಾಯಕ ಶಾಮಣ್ಣ ವಸಲೇಕಾರ ಭೇಟಿ ನೀಡಿ ಪರಿಶೀಲಿಸಿದರು.