Advertisement

ಸಿರಿಧಾನ್ಯಗಳ ಭರ್ಜರಿ ವ್ಯಾಪಾರ

12:18 PM Dec 26, 2017 | |

ರಾಯಚೂರು: ಸಾವಯವ ಕೃಷಿ ಪದ್ಧತಿ ಹಾಗೂ ಸಿರಿಧಾನ್ಯಗಳನ್ನು ಬೆಳೆಯಲು ಉತ್ತೇಜಿಸುವ ನಿಟ್ಟಿನಲ್ಲಿ ಇಲ್ಲಿನ ಕೃಷಿ ವಿವಿಯಲ್ಲಿ ಹಮ್ಮಿಕೊಂಡಿದ್ದ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕೃಷಿ ವಿವಿಯಿಂದ ಇದೇ ಸ್ಥಳದಲ್ಲಿ ನಾಲ್ಕು ದಿನಗಳ ಕೃಷಿ ಮೇಳ ನಡೆದು ಇನ್ನೂ 20 ದಿನ ಕಳೆದಿರಲಿಲ್ಲ. ಅದಾಗಲೇ ಕೃಷಿ ಇಲಾಖೆ, ಪ್ರಾಂತೀಯ ಸಾವಯವ ಕೃಷಿಕರ ಸಂಘದ ಸಹಯೋಗದಲ್ಲಿ ಮೇಳ ಹಮ್ಮಿಕೊಳ್ಳಲಾಗಿತ್ತು. ಆದರೆ, ಸಾಮಾನ್ಯರು ಹಾಗೂ ಸಾವಯವ ಕೃಷಿಕರು ಅದರ ಬಳಕೆದಾರರೇ ಬೇರೆ ಎಂಬುದನ್ನು ಮೇಳ ಸಾಕ್ಷಿಕರೀಸಿತು. ಮೊದಲ ದಿನವಾದ ರವಿವಾರವೇ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆ ಒಳಗೊಂಡಂತೆ ಮೇಳ ಆಯೋಜಿಸಿದ್ದರಿಂದ ಮೂರು ಜಿಲ್ಲೆಗಳಿಂದ ರೈತರು ಆಗಮಿಸಿದ್ದರು. 

Advertisement

ಬಹುತೇಕ ಸಾವಯವ ರೈತರು, ಸಿರಿಧಾನ್ಯಗಳ ವ್ಯಾಪಾರಿಗಳು ಹಾಗೂ ವಿವಿಧ ಸಹಕಾರ, ಮಹಿಳಾ ಸಂಘಗಳ ಸದಸ್ಯರು ಮೇಳದಲ್ಲಿ ಕಂಡುಬಂದರು. ಸುಮಾರು 70ಕ್ಕೂ ಅಧಿಕ ಮಳಿಗೆಗಳನ್ನು ನಿರ್ಮಿಸಿದ್ದು, ಎಲ್ಲರಿಗೂ ಉಚಿತವಾಗಿಮಳಿಗೆ ನೀಡಲಾಗಿತ್ತು. ಇದರಿಂದ ಎಲ್ಲ ಮಳಿಗೆಗಳು ಭರ್ತಿಯಾಗಿದ್ದವು.

ಭರ್ಜರಿ ವಹಿವಾಟು: ದುಬಾರಿ ಎನಿಸಿದರೂ ಸಿರಿಧಾನ್ಯಗಳ ಖರೀದಿಗೆ ಜನ ಹಿಂದೇಟು ಹಾಕಲಿಲ್ಲ. ನಾವು ಇದು ಕೇವಲ ಪ್ರದರ್ಶನ ಮೇಳ ಎಂದುಕೊಂಡು ಕಡಿಮೆ ಧಾನ್ಯ ತಂದಿದ್ದೆವು. ಆದರೆ, ಇಲ್ಲಿ ತುಂಬಾ ಬೇಡಿಕೆಯಿದೆ. ನಾವು ತಂದಿದ್ದ ಎಲ್ಲ ಖಾದ್ಯಗಳು ಖರ್ಚಾಗಿವೆ. ಬೇಡಿಕೆ ಹೆಚ್ಚಾಗಿರುತ್ತದೆ ಎಂದು ಮೊದಲೇ ತಿಳಿದಿದ್ದರೆ ಇನ್ನೂ ಹೆಚ್ಚು ಸಿರಿಧಾನ್ಯಗಳನ್ನೇ ತರುತ್ತಿದ್ದೆವು ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದರು. ದರ ವ್ಯಾತ್ಯಾಸ: ಒಂಭತ್ತು ಬಗೆಯ ಸಿರಿಧಾನ್ಯಗಳೆನ್ನುತ್ತಾರೆ. ಎಲ್ಲ ವರ್ತಕರು ಸಿರಿಧಾನ್ಯಗಳಿಂದ ಸಿದ್ಧಪಡಿಸಿದ ಖಾದ್ಯಗಳು ಹಾಗೂ ಪ್ಯಾಕೆಟ್‌ಗಳಲ್ಲಿ ಧಾನ್ಯಗಳನ್ನು  ರಾಟಕ್ಕಿಡಲಾಗಿತ್ತು.

ಆದರೆ, ಧಾನ್ಯಗಳು ಒಂದೇ ತರಹವಿದ್ದರೂ ವಿವಿಧ ದರ ನಿಗದಿ ಮಾಡಲಾಗಿತ್ತು. ಒಂದು ಕಡೆ ಇದ್ದ ದರ ಮತ್ತೂಂದು ಕಡೆ ಇರಲಿಲ್ಲ. ಹೀಗಾಗಿ ಗ್ರಾಹಕರು ಎಲ್ಲಿ ಖರೀದಿಸಬೇಕು ಎಂಬ ಗೊಂದಲದಲ್ಲಿದ್ದಂತೆ ಕಂಡುಬಂತು. ಅಲ್ಲದೇ, ಹೀಗೆ ಯಾಕೆ ಒಂದು ಕಡೆ ಕಡಿಮೆ ಹೆಚ್ಚು ದರ ಇಟ್ಟಿದ್ದಾರೋ ಎಂದು ಜನ ಗೊಣಗುತ್ತಿದ್ದದ್ದು ಕಂಡು ಬಂತು. ವರ್ತಕರನ್ನು ಕೇಳಿದರೆ, ಎಲ್ಲ ಒಂದೇ ರೀತಿಯ ಧಾನ್ಯಗಳಿರುವುದಿಲ್ಲ. ಗುಣಮಟ್ಟಕ್ಕೆ ತಕ್ಕಂತೆ ದರ ನಿಗದಿ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು.

ಮನ ರಂಜಿಸಿದ ಸಿರಿ ಸಂಜೆ
ಮೇಳದ ನಿಮಿತ್ತ ರವಿವಾರ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಝಿ ಸರಿಗಮಪ ಖ್ಯಾತಿ ಗಾಯಕರಾದ ಸುನೀಲ್‌, ಇಂಪನಾ, ಬಸಪ್ಪ ಹಲವು ಹಾಡುಗಳನ್ನು ಹಾಡಿ ಸರಿಸುಮಾರು ಎರಡು ಗಂಟೆಗಳ ಕಾಲ ರಂಜಿಸಿದರು. 

Advertisement

ಸುನೀಲ್‌ ಭಕ್ತಿಗೀತೆ, ಸಿನಿಮಾ ಹಾಡುಗಳನ್ನು ಹಾಡಿದರೆ, ಇಂಪನಾ ಯುವಕರನ್ನು ಆಕರ್ಷಿಸುವಂಥ ಟಪ್ಪಂಗುಚ್ಚಿ ಹಾಡುಗಳನ್ನೇ ಹಾಡಿದರು. ಇನ್ನು ಬಸಪ್ಪ ಹಳೆ ಚಿತ್ರಗೀತೆಗಳನ್ನು ಹಾಡಿ ರಂಜಿಸಿದರು. ಕೊನೆಯಲ್ಲಿ ಇಂಪನಾ ಹಾರ್ಟ್‌ ಅನ್ನೊ ಅಡ್ಡದಲ್ಲಿ ಹಾಡಿದರೆ, ಸುನೀಲ್‌ ಅಲ್ಲಾಡ್ಸ ಅಲ್ಲಾಡ್ಸು ಹಾಡು ಹಾಡಿ ಯುವಕ ಯುವತಿಯರನ್ನು ಕುಣಿಯುವಂತೆ ಮಾಡಿದರು. ಕೊನೆಯಲ್ಲಿ ವಿವಿಯ ವಿದ್ಯಾರ್ಥಿನಿಯರು, ಯುವಕರು ಕುಣಿದು ಕುಪ್ಪಳಿಸಿದರು. ಗಾಯಕರೊಂದಿಗೆ ಸೆಲ್ಫಿ  ತೆಗೆದುಕೊಳ್ಳಲು ಯುವಕರು ಮಾತ್ರ ಸಾಲುಗಟ್ಟಿದ್ದರು.

ಮಾಹಿತಿ ನೀಡುವವರೇ ಮಾಯ..!
ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಲಕ್ಷಾಂತರ ರೂ. ಖರ್ಚು ಮಾಡಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಎರಡನೇ ದಿನ ಸಂಜೆಗೆಲ್ಲ ಅಧಿಕಾರಿಗಳ್ಯಾರು ಮೇಳದಲ್ಲಿ ಕಾಣಿಸಲಿಲ್ಲ. ಮಾಹಿತಿಗಾಗಿ ನಿಗದಿ ಮಾಡಿದ್ದ ಮಳಿಗೆಗಳು ಕೂಡ ಖಾಲಿಯಾಗಿದ್ದವು. ರವಿವಾರ ಮತ್ತು ಸೋಮವಾರ ರಜೆ ಇರುವ ಕಾರಣ 2ನೇ ದಿನ ಸಂಜೆ ಕೂಡ ಹೆಚ್ಚು ಜನ ಆಗಮಿಸಿದ್ದರು. ಆದರೆ, ಮಾಹಿತಿ ನೀಡಲು ಇಲಾಖೆ ಸಿಬ್ಬಂದಿಯೇ ಇರಲಿಲ್ಲ. ಅಲ್ಲದೇ, ಮಳಿಗೆಗಳನ್ನು ಬೇಗನೇ ಖಾಲಿ ಮಾಡುವಂತೆ ತಾಕೀತು ಮಾಡಿದ್ದಲ್ಲದೇ, ಮಳಿಗೆಗಳಿಗೆ ವಿದ್ಯುತ್‌ ಕಡಿತಗೊಳಿಸಲಾಯಿತು. ಇದಕ್ಕೆ ವರ್ತಕರು ಬೇಸರ ವ್ಯಕ್ತಪಡಿಸಿದರು.

ವಿವಿಧ ಸ್ಪರ್ಧೆಗಳು
ಸಿರಿಧಾನ್ಯ ಮೇಳದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದು, ಮೂರು ಜಿಲ್ಲೆಗಳಿಂದ ಸ್ಪರ್ಧಿಗಳು ಪಾಲ್ಗೊಂಡು ಗಮನ ಸೆಳೆದರು. ವಿಜೇತರಿಗೆ ಸಮಾರೋಪದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಿರಿ ರಂಗೋಲಿ ಸ್ಪರ್ಧೆಯಲ್ಲಿ ರಾಯಚೂರಿನ ಪ್ರೀತಿ ನಿಜಾಂಕರಿ ಪ್ರಥಮ, ಲತಾ ದ್ವಿತೀಯ, ಹಾಗೂ ಜಯಲಕ್ಷ್ಮೀ ಅವರು ತೃತೀಯ ಸ್ಥಾನ ಪಡೆದರು. ಸಿರಿಪಾಕ ಸ್ಪರ್ಧೆಯಲ್ಲಿ ಮಿಶ್ರಧಾನ್ಯಗಳ ಹಲ್ವ ತಯಾರಿಸಿದ ರಾಯಚೂರಿನ ಪ್ರೀತಿ ಪ್ರಥಮ ಸ್ಥಾನ ಗಳಿಸಿದರೆ, ನವಣೆ ಅಕ್ಕಿ ಹಲ್ವ ತಯಾರಿಸಿದ ಸರಸ್ವತಿ ಪಾಟೀಲ್‌ ದ್ವಿತೀಯ ಸ್ಥಾನ ಹಾಗೂ ನವಣೆ ಹೋಳಿಗೆ ತಯಾರಿಸಿದ ಶಿಲ್ಪಾ ತೃತೀಯ ಸ್ಥಾನಗಳಿಸಿದ್ದಾರೆ.

ಕಿರುಧಾನ್ಯಗಳ ಖಾರದ ಅಡುಗೆ ಸ್ಪರ್ಧೆಯಲ್ಲಿ ಬಾತ್‌ ಮೊಸರನ್ನ ತಯಾರಿಸಿದ ರಾಯಚೂರಿನ ನಿರ್ಮಲಾ ಪ್ರಥಮ, ಬರಗು ವೆಜ್‌ ಬಿರಿಯಾನಿ ತಯಾರಿಸಿದ ಜಯಲಕ್ಷ್ಮೀ ದ್ವಿತೀಯ ಸ್ಥಾನ ಗಳಿಸಿದರು. ಕೊರಲೆ ಬಿಸಿ ಬೇಳೆ ಬಾತ್‌ ತಯಾರಿಸಿದ್ದ ಎಸ್‌. ಆರತಿ ತೃತೀಯ ಸ್ಥಾನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next