Advertisement

ಬಾಲಿವುಡ್‌ನ‌ಲ್ಲಿ ದೊಡ್ಡ ಹವಾ

06:00 AM Jun 22, 2018 | |

ಬಾಲಿವುಡ್‌ನ‌ಲ್ಲಿ ಇತ್ತೀಚೆಗೆ ಇದೊಂದು ದೊಡ್ಡ ಟ್ರೆಂಡ್‌ ಆಗಿದೆ ಎಂದರೆ ತಪ್ಪಿಲ್ಲ. ಸ್ವಾತಂತ್ರ್ಯ ಹೋರಾಟಗಾರ ಮತ್ತು ಬ್ರಿಟಿಷರ ವಿರುದ್ಧ ಹೋರಾಡಿದ್ದ ಭಗತ್‌ ಸಿಂಗ್‌ ಕುರಿತಾದ “ಶಹೀದ್‌-ಎ-ಭಗತ್‌ ಸಿಂಗ್‌’ 1954ರಲ್ಲೇ ಬಿಡುಗಡೆಯಾಗಿತ್ತು. ಆ ನಂತರ “ಶಹೀದ್‌’ ಎಂಬ ಇನ್ನೊಂದು ಚಿತ್ರವು 1965ರಲ್ಲಿ ಬಿಡುಗಡೆಯಾಗಿತ್ತು.

Advertisement

ಹಿರಿಯ ನಟ ಮನೋಜ್‌ ಕುಮಾರ್‌ ಅವರು ಭಗತ್‌ ಸಿಂಗ್‌ ಪಾತ್ರದಲ್ಲಿ ನಟಿಸಿದ್ದರು. ಅದಕ್ಕೂ ಮುನ್ನ 1963ರಲ್ಲಿ ಶಮ್ಮಿ ಕಪೂರ್‌ ಅವರು “ಶಹೀದ್‌ ಭಗತ್‌ ಸಿಂಗ್‌’ ಎಂಬ ಇನ್ನೊಂದು ಚಿತ್ರದಲ್ಲಿ ನಟಿಸಿದರು.

ಆ ನಂತರದ ವರ್ಷಗಳಲ್ಲಿ ಭಗತ್‌ ಸಿಂಗ್‌ ಕುರಿತಾದ “ದಿ ಲೆಜೆಂಡ್‌ ಆಫ್ ಭಗತ್‌ ಸಿಂಗ್‌’, “ಶಹೀದ್‌’,”ಶಹೀದ್‌-ಎ-ಅಜಾಮ್‌’ ಎಂಬ ಚಿತ್ರಗಳು ಬಂದವು.

ವಿಶೇಷವೆಂದರೆ, ಇದುವರೆಗೂ ಹಿಂದಿಯಲ್ಲಿ ಭಗತ್‌ ಸಿಂಗ್‌ರ ಕುರಿತಾಗಿ ಏಳು ಚಿತ್ರಗಳು ಬಂದಿವೆ. ಇನ್ನು ಪಂಜಾಬಿ ಸೇರಿದಂತೆ ಬೇರೆ ಭಾಷೆಗಳಲ್ಲಿ ಅದೆಷ್ಟು ಚಿತ್ರಗಳು ಬಂದಿವೆಯೋ ಲೆಕ್ಕ ಇಟ್ಟವರಿಲ್ಲ.

ಭಗತ್‌ ಸಿಂಗ್‌ ಅಲ್ಲದೆ, ಕುಖ್ಯಾತ ಡಕಾಯಿತ ರಾಣಿ ಪೂಲನ್‌ ದೇವಿ ಕುರಿತಾದ “ಬ್ಯಾಂಡಿಟ್‌ ಕ್ವೀನ್‌’, ಶ್ಯಾಮ್‌ ಬೆನಗಲ್‌ ಅವರು ಮಹಾತ್ಮ ಗಾಂಧಿ ಅವರ ಕುರಿತ ದಿ ಮೇಕಿಂಗ್‌ ಆಫ್ ಮಹಾತ್ಮ’, ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಕುರಿತ “ನೇತಾಜಿ ಸುಭಾಷ್‌ ಚಂದ್ರ ಬೋಸ್‌ – ದಿ ಫ‌ರ್ಗಾಟನ್‌ ಹೀರೋ’, ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ಅವರ ಕುರಿತಾದ “ಸರ್ದಾರ್‌’, ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಕುರಿತ “ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌’ ಮುಂತಾದ ಚಿತ್ರಗಳನ್ನು ಹೆಸರಿಸಬಹುದು. 

Advertisement

ಈ ಬಯೋಪಿಕ್‌ಗಳೆಲ್ಲವೂ ಸ್ವಾತಂತ್ರ್ಯ ಹೋರಾಟಗಾರರ, ರಾಜಕೀಯ ನೇತಾರರ ಕುರಿತಾಗಿ ಸುತ್ತುತ್ತಿದ್ದ ಕಾಲದಲ್ಲಿ ಅದಕ್ಕೊಂದು ಬೇರೆ ದಿಕ್ಕು ಕೊಟ್ಟಿದ್ದು ರಾಕೇಶ್‌ ಓಂಪ್ರಕಾಶ್‌ ಮೆಹ್ರಾ. “ದಿ ಫ್ಲೈಯಿಂಗ್‌ ಸಿಖ್‌’ಎಂದೇ ಖ್ಯಾತರಾಗಿರುವ ಅಥ್ಲೀಟ್‌ ಮಿಲ್ಕಾ ಸಿಂಗ್‌ ಅವರ ಜೀವನವನ್ನಾಧರಿಸಿ, “ಭಾಗ್‌ ಮಿಲ್ಕಾ ಭಾಗ್‌’ ಎಂಬ ಚಿತ್ರ ಮಾಡಿದರು ಮೆಹ್ರಾ. ಈ ಚಿತ್ರ ಹಿಟ್‌ ಆಗಿದ್ದೇ ಆಗಿದ್ದು, ನಂತರ ಸಾಕಷ್ಟು ಕ್ರೀಡಾಪಟುಗಳ ಜೀವನವನ್ನಾಧರಿಸಿದ ಚಿತ್ರಗಳು ಬಿಡುಗಡೆಯಾಗಿವೆ, ಆಗುತ್ತಿವೆ. 

ಭಾರತೀಯ ಕ್ರಿಕೆಟ್‌ ತಂಡದ ನಾಯಕರಾಗಿದ್ದ ಎಂ.ಎಸ್‌. ಧೋನಿ ಕುರಿತ “ಎಂ.ಎಸ್‌. ಧೋನಿ – ದಿ ಅನ್‌ಟೋಲ್ಡ್‌ ಸ್ಟೋರಿ, ಮಾಜಿ ನಾಯಕರಾಗಿದ್ದ ಅಜರುದ್ದೀನ್‌ ಅವರ ಕುರಿತ “ಅಜರ್‌’, ಬಾಕ್ಸರ್‌ ಮೇರಿ ಕೋಮ್‌ ಅವರ ಬದುಕು ಮತ್ತು ಹೋರಾಟಗಳನ್ನು ಬಿಂಬಿಸಿದ “ಮೇರಿ ಕೋಮ್‌’, ಪೋಗತ್‌ ಸಹೋದರಿಯರ ಕುರಿತಾದ “ದಂಗಲ್‌’ ಹೀಗೆ ಹಲವು ಚಿತ್ರಗಳು ಬಂದಿವೆ. ಇದಲ್ಲದೆ ಸಿಲ್ಕ್ ಸ್ಮಿತಾ ಕುರಿತಾದ “ದಿ ಡರ್ಟಿ ಪಿಕ್ಚರ್‌’, ಮಾನವ ಹಕ್ಕುಗಳ ಹೋರಾಟಗಾರ ಶಹೀದ್‌ ಆಜ್ಮಿ ಕುರಿತ “ಶಹೀದ್‌’, ಪಾಕಿಸ್ತಾನದಲ್ಲಿ ಬಂಧಿಯಾಗಿದ್ದ ಭಾರತೀಯ ಸರಬ್ಜಿತ್‌
ಸಿಂಗ್‌ ಕುರಿತಾದ “ಸರಬ್ಜಿತ್‌’, ಕ್ರೀಡಾಪುಟವಾದ ಮಾಜಿ ಡಕಾಯಿತ ಪಾನ್‌ ಸಿಂಗ್‌ ಟೋಮರ್‌ನ ಕುರಿತಾದ ಅದೇ ಹೆಸರಿನ ಚಿತ್ರ, ಉಗ್ರಗಾಮಿಗಳಿಂದ 350ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಿದ ಗಗನ ಸಖೀ ನೀರಜಾ ಭಾನೋತ್‌ ಕುರಿತಾದ “ನೀರಜಾ’, ಗ್ರಾಮೀಣ ಭಾರತದ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ತಯಾರಿಸಿದ ಅರುಣಾಚಲಂ ಮುರುಗನಾಥಂ, ಗುಡ್ಡ ಕಡಿದು ರಸ್ತೆ ಮಾಡಿದ ದಶರತ್‌ ಮಾಂಝಿ ಕುರಿತ “ಮಾಂಝಿ – ದಿ ಮೌಂಟೇನ್‌ ಮ್ಯಾನ್‌’, ಮುಂಬೈನ ಗ್ಯಾಂಗ್‌ಸ್ಟರ್‌ ಆಗಿದ್ದ ಅರುಣ್‌ ಗಾವಿ ಕುರಿತ “ಡ್ಯಾಡಿ’,ಡಾನ್‌ ದಾವೂದ್‌ ಇಬ್ರಾಹಿಂ ಸೋದರಿ ಹಸೀನಾ ಪಾರ್ಕರ್‌ ಕುರಿತಾದ “ಹಸೀನಾ ಪಾರ್ಕರ್‌’ ಹೀಗೆ ಹಲವು ಸಿನಿಮಾಗಳನ್ನು ಹೆಸರಿಸಬಹುದು.

ಇದು ಇಷ್ಟಕ್ಕೇ ಮುಗಿಯುವುದಿಲ್ಲ. ಈ ಬಯೋಪಿಕ್‌ಗಳ ಸಂಖ್ಯೆ ಬಾಲಿವುಡ್‌ನ‌ಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಪ್ರಮುಖವಾಗಿ ಇನ್ನೂ ಹಲವು ಬಯೋಪಿಕ್‌ಗಳು ಬಿಡುಗಡೆಯಾಗುವ ಹಂತದಲ್ಲಿದ್ದರೆ, ಇನ್ನೂ ಕೆಲವು ನಿರ್ಮಾಣದ ಹಂತದಲ್ಲಿವೆ. ಈ ಪಟ್ಟಿಯಲ್ಲಿ ಅತ್ಯಂತ ಕುತೂಹಲ ಮತ್ತು ನಿರೀಕ್ಷೆ ಮೂಡಿಸಿರುವ ಚಿತ್ರವೆಂದರೆ ಅದು, “ಸಂಜು’. ನಟ ಸಂಜಯ್‌ ದತ್‌ ಅವರ ಜೀವನದ ಹಲವು ಮಜಲುಗಳನ್ನು ತೋರಿಸುತ್ತಿರುವ ಈ ಚಿತ್ರದಲ್ಲಿ ರಣಬೀರ್‌ ಕಪೂರ್‌, ಸಂಜಯ್‌ ದತ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್‌ ಸಿಂಗ್‌ ಅವರ ಕುರಿತಾದ “ದಿ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ಎಂಬ ಚಿತ್ರದಲ್ಲಿ ಅನುಪಮ್‌ ಖೇರ್‌ ಅವರು ಸಿಂಗ್‌ ಅವರ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಮುಂದಿನ ವರ್ಷ ಬಿಡುಗಡೆಯಾಗಲಿರುವ “ಥ್ಯಾಕರೆ’ ಎಂಬ ಚಿತ್ರದಲ್ಲಿ ಶಿವಸೇನಾ ಮುಖ್ಯಸ್ಥ ಬಾಲಾ ಸಾಹೇಬ್‌ ಥ್ಯಾಕರೆ ಅವರ ಜೀವನವನ್ನಾಧರಿಸಿದ್ದು, ಆ ಪಾತ್ರವನ್ನು ನವಾಜುದ್ದೀನ್‌ ಸಿದೀಕಿ ನಿರ್ವಹಿಸುತ್ತಿರುವುದು ವಿಶೇಷ. ಇನ್ನು ಅಕ್ಷಯ್‌ ಕುಮಾರ್‌, ಹಾಕಿ ಆಟಗಾರ ಬಲಬೀರ್‌ ಸಿಂಗ್‌ ಆಗಿ “ಗೋಲ್ಡ್‌’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ, ಟಿ-ಸೀರೀಸ್‌ ಎಂಬ ದೊಡ್ಡ ಕಂಪನಿಯ ಸಂಸ್ಥಾಪಕರಾದ ಗುಲ್ಶನ್‌ ಕುಮಾರ್‌ ಆಗಿಯೂ “ಮೊಘಲ್‌’ ಎಂಬ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಿಲ್ಜಿತ್‌ ದೋಸಾಂಜ್‌ ಅವರು ಖ್ಯಾತ ಹಾಕಿಪಟು ಸಂದೀಪ್‌ ಸಿಂಗ್‌ ಕುರಿತ “ಸೂರ್ಮ’ ಚಿತ್ರದಲ್ಲಿ ನಟಿಸಿದರೆ, ಹೃತಿಕ್‌ ರೋಶನ್‌ “ಸೂಪರ್‌ 30′ ಎಂಬ ಚಿತ್ರದಲ್ಲಿ ಗಣಿತಾಶಾಸOಉಜ್ಞ ಆನಂದ್‌ ಕುಮಾರ್‌ ಅವರ ಪಾತ್ರವನ್ನು ಮಾಡುತ್ತಿದ್ದಾರೆ.

ಒಲಿಂಪಿಕ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಪಡೆದ ಅಭಿನವ್‌ ಭಿಂದ್ರ ಕುರಿತಾಗಿ ಚಿತ್ರ ತಯಾರಾಗುತ್ತಿದ್ದು, ಆ ಚಿತ್ರದಲ್ಲಿ ಹರ್ಷವರ್ಧನ್‌ ಕಪೂರ್‌ ನಟಿಸುತ್ತಿದ್ದಾರೆ. ಇದಲ್ಲದೆ ಕಪಿಲ್‌ ದೇವ್‌, ಬ್ಯಾಡ್ಮಿಂಟನ್‌ ಆಟಗಾರರಾದ ಸೈನಾ ನೆಹವಾಲ್‌, ಪಿ.ವಿ. ಸಿಂಧು ಮುಂತಾದವರ ಕುರಿತೂ ಚಿತ್ರಗಳು ಬರುತ್ತಿವೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next