Advertisement
ಬೂದು ಬಣ್ಣದ ಹಕ್ಕಿ ಎಂದು ಬಣ್ಣ ವ್ಯತ್ಯಾಸ ಮತ್ತು ಗರಿಗಳ ವಿನ್ಯಾಸದಿಂದ ಬೇರೆ ಬೇರೆ ಜಾತಿಯ ಹಕ್ಕಿಯಿಂದ ಬೇರ್ಪಡಿಸಿ ಗುರುತಿಸಬಹುದು. ಇತರ ಹಕ್ಕಿಗಳ ಗೂಡಿಗೆ ಸೇರಿ, ಅಲ್ಲಿರುವ ಹಕ್ಕಿಯ ಮೊಟ್ಟೆಯನ್ನು ಕದ್ದು ತಿನ್ನುವುದರಿಂದ ಇದಕ್ಕೆ ಕದುಗ ಹಕ್ಕಿ ಎಂದೂ ಹಳ್ಳಿಗರು ಕರೆಯುತ್ತಾರೆ. ಕಾಗೆಯ ಕುಟುಂಬಕ್ಕೆ ಸೇರಿದ್ದರೂ ಈ ಹಕ್ಕಿಯ ಚುಂಚು ಕಾಗೆ ಚುಂಚಿನಂತೆ ಇಲ್ಲ. ಬೂದು ಗಪ್ಪು ಬಣ್ಣ ಇದ್ದು ತುದಿ ಚೂಪಾಗಿ ಕೆಳಮುಖ ಬಾಗಿರುವ ದೃಢವಾದ ಚುಂಚಿದೆ. ಇದು ಮಾಂಸ ಹಾಗೂ ದೊಡ್ಡ ಹಣ್ಣುಗಳನ್ನೂ ತಿನ್ನಲೂ ಸಹಾಕವಾಗಿದೆ. ಪಪ್ಪಾಯಿ, ಹಲಸು, ಪೈನಾಪಲ್ ಮುಂತಾದ ಹಣ್ಣುಗಳನ್ನು ಕತ್ತರಿಸಿ ತಿನ್ನಲು ಇದರ ಚುಂಚಿನಿಂದ ಅನುಕೂಲವಾಗಿದೆ. ಇದರ ಮೈಬಣ್ಣ ಕಂದು ಮಿಶ್ರಿತ ಬೂದು. ಮುಖ, ಮುಂದೆಲೆ, ಕುತ್ತಿಗೆಯ ಮುಂಭಾಗ ಕಪ್ಪಾಗಿದೆ. ರೆಕ್ಕೆಯ ಮೇಲ್ಭಾಗ ಬೂದು ಬಣ್ಣದಿಂದ ಕೂಡಿದೆ. ಕಪ್ಪು ಬಣ್ಣದ ರೆಕ್ಕೆಯಲ್ಲಿ ಬಿಳಿ ಬಣ್ಣದ ಮಚ್ಚೆ ಎದ್ದು ಕಾಣುತ್ತದೆ. ಹೊಟ್ಟೆ , ಬಾಲದ ಮೇಲ್ಭಾಗವು ಕೆಂಪು ಮಿಶ್ರಿತ ಬೂದು ಬಣ್ಣದಿಂದ ಕೂಡಿದೆ. ರೆಂಪ ಅಂದರೆ ಬಾಲದ ಬುಡದಲ್ಲಿ ಬಾಲ ಕೇಸರಿ ಬಣ್ಣ ಇರುವುದರಿಂದ ಇದು ಹಿಮಾಲಯ ಮರದ ಹಕ್ಕಿ ಅಂತ ಗುರುತಿಸಬಹುದು.
Related Articles
Advertisement
ನೀಲಗಿರಿ ಪರ್ವತ ಭಾಗ, ಅಸ್ಸಾಂ, ಬೆಂಗಾಲ, ಪಶ್ಚಿಮ ಘಟ್ಟದ ಭಾಗಗಳಿಂದ ಆರಂಭಿಸಿ, ವಿಶಾಖ ಪಟ್ಟಣದವರೆಗೂ ಈ ಹಕ್ಕಿಯ ಇರುನೆಲೆಗಳು ಇವೆ. ಇದರ ಕೂಗಿನ ದನಿಯಲ್ಲಿ ಸ್ವಲ್ಪ ಭಿನ್ನತೆ ಇದೆ. ಇದು ಸಹ ಇತರ ಮರಹಕ್ಕಿಗಳಂತೆ ಮರದ ತುದಿ ಇಲ್ಲವೇ ಬಿದಿರು ಮೆಳೆಗಳ ಹತ್ತಿರ ಕುಳಿತು ತನ್ನ ಬೆನ್ನು, ಬಾಲ ಬಗ್ಗಿಸಿ ಗೂನು ಬೆನ್ನು ಮಾಡಿಕೊಂಡು ಸಿಳ್ಳೆ ಹೊಡೆಯುತ್ತದೆ. ಬಾಟಲಿಯಲ್ಲಿ ಗಾಳಿಊದಿದಾಗ ಬರುವಂತಹ ಸಿಳ್ಳೆ ದನಿಯನ್ನೇ ಹೋಲುತ್ತದೆ. ಮಿಲನದ ಸಂದರ್ಭದಲ್ಲಿ ಗಂಡು- ಹೆಣ್ಣನ್ನು ವಿಭಿನ್ನ ದನಿಯಲ್ಲಿ ಕರೆಯುತ್ತದೆ. ಅದರ ಸಮೀಪಬಂದು ತನ್ನ ಪ್ರಣಯ ಪ್ರಕಟಣೆ ಮಾಡಿ, ಹೆಣ್ಣು ಹಕ್ಕಿಯನ್ನು ಓಲೈಸುತ್ತದೆ. ಉತ್ತ ಹೊಲಗಳಲ್ಲಿರುವ ಮೃದ್ವಂಗಿಗಳು ಹುಳ, ಎರೆ ಹುಳು, ಮಣ್ಣು ಹುಳಗಳನ್ನು ಈ ಹೆಕ್ಕಿ ತಿನ್ನುತ್ತದೆ. ಆಲ, ಬಸರಿ, ಹಳಗೇರು ಹಣ್ಣು ಬಿಟ್ಟಾಗ ಹಾರ್ನ್ ಬಿಲ್ ಹಕ್ಕಿಗಳ ಜೊತೆ ಸೇರಿ ಸೇವಿಸುವುದುಂಟು. ಚಿಕ್ಕಹುಳುಗಳು, ಹಕ್ಕಿ ಮೊಟ್ಟೆ, ದಿರ್ಬಲ ಹಕ್ಕಿ ಮರಿ, ಹರಣೆ, ಓತಿಕ್ಯಾತ, ಚಿಕ್ಕ ಹಸಿರು ಹಾವುಗಳನ್ನು ಹಿಡಿದು ಭೋಜನ ಮಾಡುತ್ತದೆ. ಕೆಲವೊಮ್ಮೆ ಕಾಳು, ಬೀಜಗಳನ್ನೂ ತಿನ್ನುವುದಿದೆ. ಹಾಗಾಗಿ ಇದನ್ನು ಸರ್ವ ಭಕ್ಷಕ ಎಂದೂ ಕರೆಯುತ್ತಾರೆ. 4-5 ಗುಂಪಿನಲ್ಲಿ ಇಲ್ಲವೇ ದೊಡ್ಡ ಬೆಟ್ಟದ ಭಾಗದಲ್ಲಿ 20 ಕ್ಕಿಂತ ಹೆಚ್ಚು ಹಕ್ಕಿಗಳಿರುವ ಗುಂಪು ಸಹ ಸಿಕ್ಕಿದೆ. ಕೆಲವೊಮ್ಮೆ ಬಿತ್ತನೆಗೆ ತಯಾರು ಮಾಡಿರುವ ಉತ್ತ ಹೊಲಗಳ ಸಮೀಪವೂ ಗಸ್ತು ತಿರುಗುತ್ತಿರುತ್ತದೆ. ಕಾಗೆಯಂತೆ ಮರದ ತುಂಡು ಮತ್ತು ಬಿದಿರೆಲೆ, ನಾರಿನಿಂದ ಗೂಡು ಕಟ್ಟಿರುತ್ತದೆ. ಇದರ ಮೊಟ್ಟಯು ತಿಳಿ ನೀಲಿಬಣ್ಣದಿಂದ ಕೂಡಿರುತ್ತದೆ. ಗಂಡು-ಹೆಣ್ಣು ಎರಡೂ ಸೇರಿ-ಗೂಡು ಕಟ್ಟುವುದು ರೂಢಿ. ಪಿ.ವಿ.ಭಟ್ ಮೂರೂರು