ಹೊಸದಿಲ್ಲಿ: ಮೈತ್ರಿ ಸರ್ಕಾರ ಯಶಸ್ವಿಯಾಗಿ ನೂರು ದಿನ ಪೂರ್ಣಗೊಳಿಸಿದ್ದು , ನಾಡಿನ ಜನತೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೃತಜ್ಞತೆ ಸಲ್ಲಿಸಿದ್ದಾರೆ.
ಸಿಎಂ ಎಚ್‌ಡಿಕೆ ಅವರು ಗುರುವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ 15 ನಿಮಷಗಳ ಕಾಲ ಮಹತ್ವದ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
‘ನಮ್ಮ ಸರಕಾರ ಎರಡೂ ಪಕ್ಷಗಳ ಸಹಕಾರದೊಂದಿಗೆ ನೂರು ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ರೈತ ಸಮುದಾಯ ಬಯಸಿದ್ದನ್ನು ನಾವು ಈಡೇರಿಸಿದ್ದೇವೆ. ರಾಜ್ಯದ ಜನತೆ ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ನಿರೀಕ್ಷೆಗಳನ್ನು ಸಂಪೂರ್ಣಗೊಳಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ನೀಡುವುದು ಮೊದಲ ಗುರಿ’ ಎಂದರು.
‘ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ನನ್ನ ಮೊದ ಆಧ್ಯತೆಯಾಗಿತ್ತು. ಆ ನಿಟ್ಟಿನಲ್ಲಿ ನಾನು ಯಶಸ್ವಿಯಾಗಿದ್ದೇನೆ. ಅಧಿಕಾರಿಗಳು ಜೊತೆಯಾಗಿ ಕೆಲಸ ಮಾಡಬೇಕು ನನ್ನ ಮತ್ತು ಸರ್ಕಾರದ ನಡವಳಿಕೆಯಿಂದ ಅಧಿಕಾರಿಗಳ ವಿಶ್ವಾಸವನ್ನು ಪಡೆದುಕೊಂಡಿದ್ದೇವೆ’.
‘ಮೈತ್ರಿ ಸರ್ಕಾರದಲ್ಲಿ ಆದಾಯ ಸಂಗ್ರಹಣೆಯಲ್ಲಿ ನಾವು ಹಿಂದೆ ಬಿದ್ದಿಲ್ಲ . ಆದಾಯ ಏರಿಕೆಯಾಗಿದ್ದು , ದಾಖಲೆಯ ಆದಾಯ ಸಂಗ್ರಹಿಸುವುದಲ್ಲಿ ನಾವು ಮುಂದಾಗಿದ್ದೇವೆ’.
‘ಕೊಡಗು ಪ್ರಕೃತಿ ವಿಕೋಪ ಮತ್ತು ಇತರ ಕಡೆಗಳಲ್ಲಿ ಆದ ವಿಕೋಪಗಳ ವೇಳೆ ಸರ್ಕಾರ ಸಮಯ ವ್ಯರ್ಥ ಮಾಡದೆ ತಕ್ಷಣ ಕ್ರಮ ಕೈಗೊಂಡಿದ್ದು ಇದು ಜನತೆಯಲ್ಲಿ ವಿಶ್ವಾಸ ಮೂಡಿಸಿದೆ’ ಎಂದರು.
‘ಸರ್ಕಾರಕ್ಕೆ ಸಂಪೂರ್ಣ ರಕ್ಷಣೆ ಇದೆ. ಯಾರ ವಿರುದ್ಧವೂ ನಾನು ದೂರು ನೀಡಿಲ್ಲ.ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದೆ’ ಎಂದರು.
ಸಂಪುಟ ವಿಸ್ತರಣೆ,ನಿಗಮ ಮಂಡಳಿಗೆ ನೇಮಕ ಮಾಡುವ ಕುರಿತು ಮನವಿ ಮಾಡಿರುವುದಾಗಿ ಸಿಎಂ ತಿಳಿಸಿದರು.