Advertisement

ಮಿಡತೆ ಅಟ್ಯಾಕ್‌; ಗದ್ದೆಗಳ ಮೇಲೆ ಮಿಡತೆಗಳ ಕಾರ್ಮೋಡ

07:43 PM Feb 23, 2020 | Sriram |

26 ಡಿಸೆಂಬರ್‌ 2019ರಂದು ರಾಜಸ್ಥಾನದ ಬಾರ್ಮೆರಿನ ರೈತ ಜುಗ್ತಾ ರಾಮ್‌ ಆಕಾಶದಲ್ಲಿ ಮಿಡತೆಗಳ ಬೃಹತ್‌ ಸೈನ್ಯ ಕಂಡು ಬೆಕ್ಕಸ ಬೆರಗಾದ. ಅದು ಲಕ್ಷಾಂತರ ಮಿಡತೆಗಳ ಹಿಂಡು. ಮಳೆಮೋಡದಂತಿದ್ದ ಆ ಹಿಂಡಿನಿಂದಾಗಿ 10 ಕಿ.ಮೀ. ಉದ್ದ ಮತ್ತು 5 ಕಿ.ಮೀ. ಅಗಲದ ಭೂಪ್ರದೇಶದಲ್ಲಿ ನೆರಳು ಕವಿಯಿತು; ಹಾಗಾಗಿ ಚಳಿಗಾಲದ ಸೂರ್ಯ ಕಾಣಿಸಲೇ ಇಲ್ಲ ಎಂದು ನೆನಪು ಮಾಡಿಕೊಳ್ಳುತ್ತಾನೆ ರೈತ ಜುಗ್ತಾ ರಾಮ….

Advertisement

ಆ ಮಿಡತೆ ಸೈನ್ಯ ಕ್ಷಣಾರ್ಧದಲ್ಲಿ ತಾರ್ಡೊ-ಕಾ-ತಾಲ್‌ ಗ್ರಾಮದಲ್ಲಿರುವ ಆತನ 12 ಹೆಕ್ಟೇರ್‌ ಹೊಲಕ್ಕಿಳಿದು, ಅಲ್ಲಿ ಬೆಳೆದು ನಿಂತಿದ್ದ ಜೀರಿಗೆ ಗಿಡಗಳನ್ನು ಕಬಳಿಸತೊಡಗಿತು. ಅವನ್ನು ಓಡಿಸಲು ಮಾಡಿದ ಎಲ್ಲ ಪ್ರಯತ್ನಗಳೂ ವಿಫ‌ಲವಾದವು. ಒಂದೇ ದಿನದಲ್ಲಿ ಆತ ನಾಲ್ಕು ಲಕ್ಷ ರೂಪಾಯಿ ಬೆಲೆಯಷ್ಟು ಜೀರಿಗೆ ಮತ್ತು ಹರಳು ಬೆಳೆ ಕಳೆದುಕೊಂಡ. ಅದೇ ದಿನ ಸುತ್ತಮುತ್ತಲ ಎರಡು ಮೂರು ಹಳ್ಳಿಗಳ ರೈತರ ಬೆಳೆಗಳೂ ಮಿಡತೆ ದಾಳಿಯಿಂದಾಗಿ ನಾಶವಾದವು. ಅಚ್ಚರಿಯೆಂದರೆ, ಮಿಡತೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗಿದ್ದು!

ಸಂಖ್ಯಾಸ್ಫೋಟಕ್ಕೆ ಎರಡು ಕಾರಣಗಳು
ಮೊದಲನೆಯದಾಗಿ, 2019ರಲ್ಲಿ ಮುಂಗಾರು ಮಳೆ ರಾಜಸ್ತಾನಕ್ಕೆ ಒಂದೂವರೆ ತಿಂಗಳು ಮುಂಚಿತವಾಗಿ ಆಗಮಿಸಿತು. ಇದರಿಂದಾಗಿ ಮಿಡತೆಗಳಿಗೆ ಆಹಾರ ಮತ್ತು ಸಂತಾನೋತ್ಪತ್ತಿಗೆ ಸೂಕ್ತ ಪರಿಸರ ಬೇಗನೆ ಲಭ್ಯವಾಯಿತು. ಎರಡನೆಯದಾಗಿ, ಮೇ ತಿಂಗಳಿನಿಂದ ನವೆಂಬರ್‌ ತನಕ ಆಗಾಗ ಮಳೆ ಬರುತ್ತಲೇ ಇತ್ತು. ಹಾಗಾಗಿ, ಮಿಡತೆಗಳಿಗೆ ಆಹಾರ ಸಿಗುತ್ತಲೇ ಇತ್ತು. ಆದ್ದರಿಂದ ಅವು ಹಿಂದಿನ ವರ್ಷಗಳಂತೆ ಅಕ್ಟೋಬರಿನಲ್ಲಿ ವಾಪಸ್‌ ವಲಸೆ ಹೋಗದೆ, ನವೆಂಬರ್‌ ತನಕವೂ ಹಾವಳಿ ಮುಂದುವರಿಸಿದವು. ಅವುಗಳ ವಾಸ ವಿಸ್ತರಣೆಯಾಗಿದ್ದರಿಂದ ಅವು ಹಲವು ಬಾರಿ ಸಂತಾನೋತ್ಪತ್ತಿಯಲ್ಲಿ ತೊಡಗಿದವು. ಹೀಗಾಗಿ ಅವುಗಳ ಸೈನ್ಯದ ಗಾತ್ರ ಹಿಗ್ಗುತ್ತಲೇ ಹೋಯಿತು.

ಒಂದು ಮಿಡತೆ, ಒಂದು ದಿನದಲ್ಲಿ ತನ್ನ ದೇಹತೂಕಕ್ಕೆ ಸಮಾನ ತೂಕದ ಆಹಾರವನ್ನು ತಿನ್ನುತ್ತದೆ. ಒಂದು ಸೈನ್ಯದಲ್ಲಿ ಸುಮಾರು 80 ಲಕ್ಷದಷ್ಟು ಮಿಡತೆಗಳಿರುತ್ತವೆ ಎಂಬ ಅಂದಾಜಿದೆ. ಇವು ಒಂದೇ ದಿನದಲ್ಲಿ 2,500 ಜನರು ಸೇವಿಸುವಷ್ಟು ಆಹಾರ ಕಬಳಿಸುತ್ತವೆ. ಗುಜರಾತಿನಲ್ಲಿ 285 ಹಳ್ಳಿಗಳ ಮಿಡತೆ ಹಾವಳಿ ಸಂತ್ರಸ್ತ 11,000 ರೈತರಿಗೆ 31 ಕೋಟಿ ರೂ. ಪರಿಹಾರ ವಿತರಿಸಲಾಗಿದೆ.

ವಿದೇಶಿ ಮೂಲದ ಮಿಡತೆಗಳು
ಮಿಡತೆ ಸೈನ್ಯದ ದಾಳಿ ಸಮಸ್ಯೆಯ ಮೂಲ ಎಲ್ಲಿದೆ? ಜಗತ್ತಿನಲ್ಲಿ ಎರಡು ಪ್ರದೇಶಗಳನ್ನು ಮಿಡತೆಗಳ ಶಾಶ್ವತ ಆವಾಸ ಸ್ಥಾನಗಳೆಂದು ಗುರುತಿಸುತ್ತಾರೆ: ಕೆಂಪು ಸಮುದ್ರದ ದಡದ ಸುತ್ತಲಿನ ಪ್ರದೇಶ ಮತ್ತು ಪಾಕಿಸ್ತಾನ- ಇರಾನ್‌ ಗಡಿಪ್ರದೇಶ. ಎರಡು ವರ್ಷಗಳ ಹಿಂದೆ ಅಪ್ಪಳಿಸಿದ ಎರಡು ಚಂಡಮಾರುತಗಳಿಂದಾಗಿ ವಿಪರೀತ ಮಳೆಯಾಗಿ, ಮಿಡತೆಗಳ ಸಂಖ್ಯಾಸ್ಫೋಟವಾಗಿತ್ತು. ಅಲ್ಲಿನ ಆಹಾರ ಕೋಟಿಗಟ್ಟಲೆ ಮಿಡತೆಗಳಿಗೆ ಸಾಕಾಗದ ಕಾರಣ, ಏಪ್ರಿಲ್‌ 2019ರಲ್ಲಿ ಅವು ಇರಾನಿನಿಂದ ಪಾಕಿಸ್ತಾನಕ್ಕೆ ವಲಸೆ ಹೊರಟವು. ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿ ಗೋಧಿ, ಹತ್ತಿ ಮತ್ತು ಟೊಮೆಟೊ ಬೆಳೆಗಳನ್ನು ಧ್ವಂಸ ಮಾಡಿದವು. ರಾಜಸ್ತಾನ ಮತ್ತು ಗುಜರಾತಿನ ಸರಕಾರಿ ಅಧಿಕಾರಿಗಳಿಗೆ ಈ ಅನಾಹುತದ ಸುಳಿವು ಸಿಕ್ಕಿತ್ತು. ಆದರೂ, ಅವರು ನಿರ್ಲಕ್ಷಿಸಿದರು. ಕೊನೆಗೆ ಬೆಳೆಸಿದ ಬೆಳೆಯೆಲ್ಲ ಕಳೆದು ನಷ್ಟ ಅನುಭವಿಸಿದವರು ಅಸಹಾಯಕ ರೈತರು.
ಮಿಡತೆ ಸೈನ್ಯದ ದಾಳಿಯ ಅಪಾಯ ಇಲ್ಲಿಗೆ ಮುಗಿದಿಲ್ಲ. ಮಿಡತೆಗಳು ಇರಾನ್‌- ಪಾಕಿಸ್ತಾನ ಗಡಿಯತ್ತ ಮರುವಲಸೆ ಆರಂಭಿಸಿವೆ. ಈ ವರ್ಷದ ಜನವರಿ ತಿಂಗಳಲ್ಲಿ ಇರಾನಿನಲ್ಲಿ ಭರ್ಜರಿ ಮಳೆಯಾಗಿದೆ. ಹಾಗಾಗಿ ಅಲ್ಲಿ ಮಿಡತೆಗಳಿಗೆ ಸಂತಾನೋತ್ಪತ್ತಿಯ ಸುಗ್ಗಿ ಕಾದಿದೆ. ಭಾರತದಲ್ಲಿ ಮುಂಗಾರು ಮಳೆ ಬೇಗನೆ ಶುರುವಾದರೆ, ಈ ವರ್ಷವೂ ಮಿಡತೆ ಸೈನ್ಯದ ದಾಳಿ ಆಗಲಿದೆ. ಆದ್ದರಿಂದ ಈಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.

Advertisement

200 ದಾಳಿಗಳು
ರಾಜಸ್ತಾನ ಮತ್ತು ಗುಜರಾತಿನ ಜನರಿಗೆ ಮಿಡತೆ ದಾಳಿ ಹೊಸತೇನಲ್ಲ. ಪಾಕಿಸ್ತಾನದಿಂದ ನುಗ್ಗಿ ಬರುವ ಈ ಮಿಡತೆಗಳ ಜೀವಿತಾವಧಿ 90 ದಿನಗಳು. ಜುಲೈ ತಿಂಗಳಿನಲ್ಲಿ ಗದ್ದೆಗಳಿಗೆ ಲಗ್ಗೆಯಿಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ನಂತರ ಬರುವ ಹೊಸ ತಲೆಮಾರು, ಅಕ್ಟೋಬರಿನಲ್ಲಿ ಪಾಕಿಸ್ತಾನ ಮತ್ತು ಇರಾನ್‌ ದೇಶಗಳಿಗೆ ಮರುವಲಸೆ ಹೋಗುತ್ತದೆ. ಅಲ್ಲೆಲ್ಲಾ ವರ್ಷಕ್ಕೆ 10 ಸಲವಾದರೂ ಮಿಡತೆ ದಾಳಿ ಸಾಮಾನ್ಯ. ಆದರೆ 2019ರಲ್ಲಿ ಮಿಡತೆ ಸೈನ್ಯಗಳು 200 ದಾಳಿಗಳನ್ನು ಮಾಡಿದ್ದವು ಎಂಬ ಆತಂಕಕಾರಿ ಮಾಹಿತಿಯನ್ನು ಜೋಧಪುರದಲ್ಲಿರುವ ಕೇಂದ್ರ ಸರಕಾರದ ಮಿಡತೆ ಕಾವಲು ಕೇಂದ್ರದ ವಿಜ್ಞಾನಿಯೊಬ್ಬರು ನೀಡಿದ್ದಾರೆ.

ಅಡ್ಡೂರುಕೃಷ್ಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next