ಬೆಂಗಳೂರು: ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ ದ್ರಾಕ್ಷಿಗೆ ಉತ್ತೇಜನ ನೀಡಲು ಹಾಗೂ ದ್ರಾಕ್ಷಿ ಹಣ್ಣಿನಿಂದ ತಯಾರಿಸುವ “ವೈನ್’ನ್ನು ಜನಪ್ರಿಯಗೊಳಿಸಿ ಮಾರುಕಟ್ಟೆ ವಿಸ್ತರಿಸುವ ಉದ್ದೇಶ ಹೊಂದಿದ “ವೈನ್ ಪಾರ್ಕ್’ ಉತ್ತರ ಕರ್ನಾಟಕದ ವಿಜಯಪುರದಲ್ಲಿ ಅಸ್ತಿತ್ವಕ್ಕೆ ಬರಲಿದೆ.
ಖಾಸಗಿ ಸಹಭಾಗಿತ್ವದಲ್ಲಿ ವೈನ್‌ಪಾರ್ಕ್ ಸ್ಥಾಪನೆಗೆ ಮುಂದಾಗಿರುವ ರಾಜ್ಯ ಸರ್ಕಾರ ವಿಜಯಪುರದ ತೊರವಿ ಹಳ್ಳಿಯಲ್ಲಿ ಸುಮಾರು 141 ಎಕರೆ ಜಾಗವನ್ನು ಕರ್ನಾಟಕ ದ್ರಾಕ್ಷಾ ರಸ ಮಂಡಳಿಗೆ ನೀಡಿದೆ. ಜತೆಗೆ ಈಗಾಗಲೇ ಮೂಲ ಸೌಕರ್ಯ ಒದಗಿಸಲು 2 ಕೋಟಿ ರೂ. ಅನುದಾನ ಬಿಡುಗಡೆ
ಮಾಡಿದೆ.ರಾಜ್ಯ ದ್ರಾಕ್ಷಾ ರಸ ಅಭಿವೃದ್ಧಿ ಮಂಡಳಿ ಜಾಗವನ್ನು ತನ್ನ ಸುಪರ್ದಿಗೆ ಪಡೆದಿದ್ದು, ಅದನ್ನು ಸಂರಕ್ಷಿಸಲು ತಂತಿಬೇಲಿ ಅಳವಡಿಸಿದೆ.
ಜತೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕಾರ್ಯಕ್ಕೆ ಚಾಲನೆ ನೀಡಿದೆ. ವೈನ್ ಪಾರ್ಕ್ ನಿರ್ಮಾಣಕ್ಕಾಗಿ ಸುಮಾರು 10 ಕೊಳವೆ ಬಾವಿ ತೆಗೆಯುವ ಕಾರ್ಯಕ್ಕೆ ಶೀಘ್ರವೇ ಚಾಲನೆ ಸಿಗಲಿದ್ದು, ನೀರು ಇರುವ ಜಾಗಗಳನ್ನು ಗುರುತಿಸಲಾಗಿದೆ. ಜತೆಗೆ ಮಳೆ ನೀರು ಕೊಯ್ಲಿಗೂ ಸುಮಾರು 2 ಎಕರೆ ಮೀಸಲಿಡಲಾಗಿದೆ. ಇದರೊಂದಿಗೆ ರಸ್ತೆ ನಿರ್ಮಾಣದ ಕೆಲಸ ಬಾಕಿ ಉಳಿದಿದ್ದು, ಮೇ ಅಂತ್ಯದೊಳಗೆ ಟೆಂಡರ್ ಪ್ರಕ್ರಿಯೆಗೆ ತೋಟಗಾರಿಕೆ ಇಲಾಖೆ ನೇತೃತ್ವದಲ್ಲಿ ದ್ರಾಕ್ಷಾರಸ ಮಂಡಳಿ ಚಾಲನೆ ನೀಡಲಿದೆ.
ಬೋಟಿಕ್ ವೈನರಿ: ವೈನ್ ಪಾರ್ಕ್‌ನಲ್ಲಿ ಬೆಳೆಯಲಾದ ದ್ರಾಕ್ಷಿಹಣ್ಣುಗಳನ್ನು ಬಳಸಿಕೊಂಡು ವೈನ್ ತಯಾರಿಸಲು ತೀರ್ಮಾನಿಸಲಾಗಿದೆ. ಅದಕ್ಕಾಗಿ ಸುಮಾರು 5 ಎಕರೆ ಪ್ರದೇಶದಲ್ಲಿ ವೈನರಿ ನಿರ್ಮಾಣಗೊಳ್ಳಲಿದೆ. ಇದೊಂದು ಮಾದರಿ ವೈನರಿಯಾಗಿದ್ದು, ವರ್ಷಕ್ಕೆ 1 ಲಕ್ಷ ಲೀಟರ್ ವೈನ್ ಉತ್ಪಾದಿಸುವ ಸಾಮರ್ಥ್ಯದ್ದಾಗಲಿದೆ. ಮುಖ್ಯವಾಗಿ ವೈನ್ ತಂತ್ರಜ್ಞಾನದ ಪ್ರಾತ್ಯಕ್ಷಿಕೆ ಉದ್ದೇಶದಿಂದ ಈ ವೈನ್‌ಪಾರ್ಕ್ ಕಾರ್ಯನಿರ್ವಹಿಸಲಿದೆ.
ವೈನ್ ಪ್ರವಾಸೋದ್ಯಮ: ವಿಜಯಪುರದ ಸುತ್ತಮುತ್ತ ಐತಿಹಾಸಿಕ ಪ್ರವಾಸಿ ತಾಣಗಳಿದ್ದು, ವೈನ್ ಪ್ರಿಯ ಪ್ರವಾಸಿಗರನ್ನು ಸೆಳೆಯುವ ಉದ್ದೇಶ ದ್ರಾಕ್ಷಾ ರಸ ಮಂಡಳಿಯದ್ದು. ಗೋಲ್‌ಗುಮ್ಮಟ, ಐಹೊಳೆ, ಪಟ್ಟದಕಲ್ಲು, ಬಾದಾಮಿ, ಆಲಮಟ್ಟಿ ಅಣೆಕಟ್ಟು ಸೇರಿ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರನ್ನು ಈ ವೈನ್ ಪಾರ್ಕ್‌ಗೆ ಸೆಳೆಯಲು ಯೋಜಿಸಲಾಗಿದೆ. ವೈನ್ ದ್ರಾಕ್ಷಿ ಬೇಸಾಯದ ತೋಟಕ್ಕೆ ಭೇಟಿ ನೀಡಿ, ವಿವಿಧ ತಳಿಯ ವೈನ್ ದ್ರಾಕ್ಷಿ ವೀಕ್ಷಣೆ, ವೈನ್ ತಯಾರಿಸುವುದು ಹೇಗೆ ಎಂಬುದನ್ನು ಅರಿಯಲು ವೈನರಿಗೆ ಭೇಟಿ ಮಾಡಿಸುವುದು. ಜತೆಗೆ ವಿವಿಧ ಬ್ರಾಂಡ್‌ಗಳ ವೈನ್‌ಗಳ ರುಚಿ ಸವಿಯಲು ಅವಕಾಶ ಕಲ್ಪಿಸುವ ಚಿಂತನೆ ನಡೆಸಲಾಗಿದೆ. ಅದಕ್ಕಾಗಿ ವೈನ್ ರೆಸ್ಟೋರೆಂಟ್ ವೊಂದನ್ನು ನಿರ್ಮಿಸಲಿದೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಗೆಸ್ಟ್‌ಹೌಸ್ ಮಾದರಿಯಲ್ಲಿ ಸುಮಾರು 50 ಅತಿಥಿ ಗೃಹಗಳನ್ನು ವೈನ್ ಪಾರ್ಕ್‌ನಲ್ಲಿ ನಿರ್ಮಾಣಗೊಳ್ಳಲಿವೆ. ಹಾಗೆಯೇ 2 ಎಕರೆಯಲ್ಲಿ ಹೈಟೆಕ್ ನರ್ಸರಿ, 3 ಎಕರೆ ಪ್ರದೇಶದಲ್ಲಿ ವಿವಿಧ ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮ ನಡೆಸಲು ಬಯಲು ರಂಗಮಂದಿರ, 10 ಎಕರೆ ಪ್ರದೇಶದಲ್ಲಿ ನೀರು ಸಂಗ್ರಹಣೆ ವ್ಯವಸ್ಥೆ. ಹೀಗೆ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಯೋಜನೆ ರೂಪಿಸಲಾಗಿದೆ. ಅದಕ್ಕಾಗಿ ಸುಮಾರು 10 ಕೋಟಿ ರೂ. ಅಂದಾಜಿಸಲಾಗಿದೆ.
ವೈನ್ ಪಾರ್ಕ್‌ನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. 141 ಎಕರೆ ಪ್ರದೇಶವಿರುವ ಈ ಪಾರ್ಕ್‌ನ ಭೂಮಾಲಿಕತ್ವ ರಾಜ್ಯ ದ್ರಾಕ್ಷಾ ಮಂಡಳಿ ಮಾಲೀಕತ್ವದಲ್ಲಿ ಇರಲಿದೆ. ಉಳಿದಂತೆ ವೈನರಿ, ದ್ರಾಕ್ಷಾ ತೋಟ ಅಭಿವೃದ್ಧಿ ಇತ್ಯಾದಿಗಳು ಖಾಸಗಿ ಸಂಸ್ಥೆಗೆ ವಹಿಸಲಾಗುವುದು. ಈ ಕುರಿತು ಮುಂದಿನ ತಿಂಗಳು ಟೆಂಡರ್ ಪ್ರಕ್ರಿಯೆ ನಡೆಯಲಿದೆ. ವೈನ್ ಉದ್ಯಮ ಅಭಿವೃದ್ಧಿ ಮತ್ತು ದ್ರಾಕ್ಷಾ ರಸ ಮಂಡಳಿ ಪ್ರಗತಿಗಾಗಿ ಈ ಯೋಜನೆ ರೂಪಿಸಲಾಗಿದೆ.
– ಟಿ.ಸೋಮು, ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ದ್ರಾಕ್ಷಾ ರಸ ಮಂಡಳಿ
– ಸಂಪತ್ ತರೀಕೆರೆ