Advertisement

ಬೆಲೆ ಕುಸಿಯುವ ಭೀತಿಯಲ್ಲಿ ದ್ರಾಕ್ಷಿ ಬೆಳೆಗಾರರು

09:20 PM Mar 17, 2020 | Lakshmi GovindaRaj |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೊರೊನಾ ವೈರಸ್‌ ಭೀತಿಗೆ ಈಗಾಗಲೇ ಕುಕ್ಕುಟೋದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿರುವಾಗಲೇ ಜಿಲ್ಲೆಯ ದ್ರಾಕ್ಷಿ ಬೆಳೆಗಾರರಲ್ಲಿ ಕೊರೊನಾ ವೈರಸ್‌ ಬೆಲೆ ಕುಸಿತದ ಭೀತಿ ಸೃಷ್ಟಿಸಿದ್ದು, ಕಟಾವುಗೆ ಸಿದ್ಧವಾಗಿ ಈಗಷ್ಟೇ ಮಾರುಕಟ್ಟೆ ಪ್ರವೇಶಿಸುತ್ತಿರುವ ದ್ರಾಕ್ಷಿ ವಿದೇಶಕ್ಕೆ ರಫ್ತಾಗದೇ ಬೆಲೆ ಕುಸಿಯುವ ಆತಂಕ ಜಿಲ್ಲೆಯ ದ್ರಾಕ್ಷಿ ಬೆಳೆಗಾರರಲ್ಲಿ ಆವರಿಸಿದೆ.

Advertisement

ರಾಜ್ಯದಲ್ಲಿಯೇ ಅತ್ಯಧಿಕ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯುವುದಕ್ಕೆ ಖ್ಯಾತಿಯಾಗಿರುವ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಬರೋಬ್ಬರಿ 2,300 ಹೆಕ್ಟೇರ್‌ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಕೆಲವು ಕಡೆ ಕಟಾವು ಆರಂಭಗೊಂಡು ಮಾರುಕಟ್ಟೆಗೆ ಬರುತ್ತಿದ್ದೆ ಮತ್ತೆ ಕೆಲವು ಕಡೆ ಕಟಾವು ಆರಂಭಗೊಳ್ಳಲು ದಿನಗಣನೆ ಶುರುವಾಗಿದೆ. ಆದರೆ ರೈತರಿಗೆ ಮಾತ್ರ ನಿರೀಕ್ಷಿತ ಬೆಲೆ ಸಿಗುತ್ತಾ? ಹಾಕಿದ ಬಂಡವಾಳ ಕೈ ಸೇರುತ್ತಾ ಎನ್ನುವ ಆತಂಕ ಕೊರೊನಾ ವೈರಸ್‌ ಸೃಷ್ಟಿಸಿದೆ.

ರೈತರಲ್ಲಿ ಬೆಲೆ ಕುಸಿತದ ಆತಂಕ ಏಕೆ?: ಜಿಲ್ಲೆಯಲ್ಲಿ ಬೆಳೆಯುವ ಸೀಡ್‌ಲೆಸ್‌ ದ್ರಾಕ್ಷಿ, ದಿಲ್‌ಖುಷ್‌ ಹಾಗೂ ಅನಾಬಿ ಮತ್ತಿತರ ತರಹೇವಾರಿ ದ್ರಾಕ್ಷಿ ಅಂತಾರಾಷ್ಟ್ರೀಯ ಗಮನ ಸೆಳೆದಿದೆ. ವಿಶೇಷವಾಗಿ ನೆರೆಯ ಬಾಂಗ್ಲಾ ದೇಶಕ್ಕೆ ಜಿಲ್ಲೆಯ ದ್ರಾಕ್ಷಿ ವ್ಯಾಪಕ ಪ್ರಮಾಣದಲ್ಲಿ ರಫ್ತು ಆಗುತ್ತದೆ. ನೆರೆಯ ಕೇರಳ ರಾಜ್ಯಕ್ಕೂ ಜಿಲ್ಲೆಯ ದ್ರಾಕ್ಷಿ ಪೂರೈಕೆ ಆಗುತ್ತದೆ. ಆದರೆ ಹಲವು ತಿಂಗಳಿಂದ ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊರೊನಾ ವೈರಸ್‌ ಹರಡಿದ ಹಿನ್ನೆಲೆಯಲ್ಲಿ ಆತಂಕ ಸೃಷ್ಟಿಯಾಗಿ ಇಡೀ ಮಾರುಕಟ್ಟೆ ವ್ಯವಸ್ಥೆ ತಲ್ಲಣಗೊಂಡಿದೆ.

ಬೆಲೆ ಕುಸಿತ ಸಾಧ್ಯತೆ: ಹಲವು ರಾಷ್ಟ್ರಗಳು ಲಾಕ್‌ಔಟ್‌ ಘೋಷಿಸಿ ಶಟ್‌ಡೌನ್‌ಗೆ ಮುಂದಾಗಿರುವುದರಿಂದ ಜಿಲ್ಲೆಯ ದ್ರಾಕ್ಷಿ ಬಾಂಗ್ಲಾಗೆ ರಫ್ತು ಆಗುವುದು ಕುಸಿದರೆ ಏನು ಗತಿ ಎಂಬ ಆತಂಕ ಜಿಲ್ಲೆಯ ದ್ರಾಕ್ಷಿ ಬೆಳೆಗಾರರದ್ದಾಗಿದೆ. ಕಳೆದ ವರ್ಷ ಉತ್ತಮ ಫ‌ಸಲು ಬಂದರೂ ಅಕಾಲಿಕ ಮಳೆ, ಅಲಿಕಲ್ಲು ಮಳೆಗೆ ದ್ರಾಕ್ಷಿ ನೆಲಕಚ್ಚಿ ಕಚ್ಚಿ ರೈತರ ಪರಿಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬಾರದೇ ದ್ರಾಕ್ಷಿ ಬೆಳೆಗಾರರು ತೀವ್ರ ನಷ್ಟ ಅನುಭವಿಸಿದರು. ಆದರೆ ಈ ಬಾರಿ ಕೂಡ ಉತ್ತಮ ಇಳುವರಿ ಬಂದಿದ್ದು, ಉತ್ತಮ ಬೆಲೆ ನಿರೀಕ್ಷಿಸಿದ್ದರೂ ಕೊರೊನಾ ವೈರಸ್‌ನಿಂದ ಬೆಲೆ ಕೈಕೊಡುವ ಸಾಧ್ಯತೆ ದಟ್ಟವಾಗಿದೆ.

ರಫ್ತು ನಿಂತರೆ ಸಂಕಷ್ಟ: ದೇಶದಲ್ಲಿ ಮಹಾರಾಷ್ಟ್ರದ ಸಾಂಗ್ಲಿ ಹಾಗೂ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕು ಹಾಗೂ ರಾಜ್ಯದ ಬಾಗಲಕೋಟೆ, ವಿಜಾಪುರ ಜಿಲ್ಲೆಗಳಲ್ಲಿ ಮಾತ್ರ ದ್ರಾಕ್ಷಿ ಬೆಳೆಯಲಾಗುತ್ತಿದೆ. ಆದರೆ ಕೊರೊನಾ ವೈರಸ್‌ ಹರಡುತ್ತಿರುವ ಹಿನ್ನೆಲೆಯಲ್ಲಿ ಬಾಂಗ್ಲಾ ಮಾರುಕಟ್ಟೆಗೆ ರಫ್ತು ಆಗುವುದು ನಿಂತರೆ ದ್ರಾಕ್ಷಿ ಬೆಳೆಗಾರರ ಪರಿಸ್ಥಿತಿ ಏನು ಎಂಬ ಆತಂಕ ರೈತರದ್ದಾಗಿದೆ.

Advertisement

ಎರಡು ವರ್ಷಗಳಿಂದ ಬೆಲೆ ಕುಸಿತ, ಮತ್ತೂಂದೆಡೆ ಪ್ರಕೃತಿ ವಿಕೋಪಕ್ಕೆ ಸಿಲುಕಿ ದ್ರಾಕ್ಷಿ ನಾಶವಾಗಿ ರೈತರು ಸಂಕಷ್ಟ ಅನುಭವಿಸಿಕೊಂಡು ಬರುತ್ತಿದ್ದು, ಈ ವರ್ಷ ದ್ರಾಕ್ಷಿ ಹೇರಳವಾಗಿ ಬೆಳೆದಿದ್ದರೂ ಅದು ಹೊರ ದೇಶಗಳಿಗೆ ರಫ್ತು ಆಗುತ್ತಾ ಇಲ್ಲವೋ ಎನ್ನುವ ಆತಂಕದಲ್ಲಿ ಬೆಳೆಗಾರರಿದ್ದಾರೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳುವ ಪ್ರಕಾರ ಕೇರಳಕ್ಕೆ ದ್ರಾಕ್ಷಿ ಪೂರೈಕೆ ಕಡಿಮೆ ಆಗಲಿದೆ. ಜೊತೆಗೆ ಬಾಂಗ್ಲಾ ದೇಶ ಕೂಡ ವಿವಿಧ ವಸ್ತುಗಳ ಆಮದು ಮಾಡಿಕೊಳ್ಳುವುದು ಸ್ಥಗಿತಗೊಳಿಸಿದರೆ ಜಿಲ್ಲೆಯ ದ್ರಾಕ್ಷಿ ಬೆಳೆಗಾರರ ಮೇಲೆ ಸಾಕಷ್ಟು ಪರಿಣಾಮ ಬೀರುವುದು ನಿಶ್ಚಿತ.

ಕೊರೊನಾ ವೈರಸ್‌ ಭೀತಿ ಎಲ್ಲದರ ಮೇಲೆಯು ಪರಿಣಾಮ ಬೀರಿದೆ. ಜಿಲ್ಲೆಯಲ್ಲಿ ಬೆಳೆಯುವ ದ್ರಾಕ್ಷಿ ಏಪ್ರಿಲ್‌ ತಿಂಗಳಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ. ಜಿಲ್ಲೆಯ ದ್ರಾಕ್ಷಿ ಬಾಂಗ್ಲಾ ಹಾಗೂ ಕೇರಳಕ್ಕೆ ಹೆಚ್ಚು ರಫ್ತು ಆಗುವುದರಿಂದ ಕೊರೊನಾ ವೈರಸ್‌ ಹರಡುವ ಭೀತಿಯಿಂದ ಬಾಂಗ್ಲಾಗೆ ಜಿಲ್ಲೆಯಿಂದ ದ್ರಾಕ್ಷಿ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಆಗುವುದು ಅನುಮಾನ ಹಾಗೂ ಬೆಲೆ ಕುಸಿಯುವ ಸಾಧ್ಯತೆ ಇದೆ.
-ಕುಮಾರಸ್ವಾಮಿ, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ

ದ್ರಾಕ್ಷಿ ಸೇವನೆ ಮಾಡಿದರೆ ಕೊರೊನಾ ವೈರಸ್‌ ತಡೆಯುವ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಆದರೆ ಕೊರೊನಾ ಹರಡುವ ಭೀತಿಯಿಂದ ದ್ರಾಕ್ಷಿ ದೇಶದ ರಫ್ತು ಮಾರುಕಟ್ಟೆ ಮೇಲೆ ಪರಿಣಾಮ ಬೀರುವುದರಿಂದ ಜಿಲ್ಲೆಯಲ್ಲಿ ಬೆಳೆಯುವ ದ್ರಾಕ್ಷಿ ಸಾಗಾಟ ಹಾಗೂ ಮಾರಾಟವಾಗದೇ ಬೆಲೆ ಕುಸಿಯುವ ಸಾಧ್ಯತೆ ಇದೆ.
-ಆರ್‌.ಆಂಜನೇಯರೆಡ್ಡಿ, ದ್ರಾಕ್ಷಿ ಬೆಳೆಗಾರರು, ನಾಯನಹಳ್ಳಿ

ಎರಡು ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆದಿದ್ದೇವೆ. ಕಟಾವುಗೆ ಇನ್ನೂ 15, 20 ದಿನ ಹೋಗಬೇಕು. ಆದರೆ ನಮ್ಮ ದ್ರಾಕ್ಷಿ ಬಹುತೇಕ ಬಾಂಗ್ಲಾಗೆ ರಫ್ತು ಆಗುವುದರಿಂದ ಸದ್ಯ ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ದೇಶದಲ್ಲಿ ದ್ರಾಕ್ಷಿ ರಫ್ತು ಆಗುವ ಅನುಮಾನ ಇದೆ. ಹೀಗಾಗಿ ದ್ರಾಕ್ಷಿ ಬೆಳೆ ಕುಸಿದರೆ ನಮಗೆ ಸಾಕಷ್ಟು ಆರ್ಥಿಕ ನಷ್ಟ ಉಂಟಾಗುತ್ತದೆ. ಸರ್ಕಾರ ದ್ರಾಕ್ಷಿ ಬೆಳೆಗಾರರಿಗೆ ತೊಂದರೆ ಆಗದಂತೆ ರಫ್ತುಗೆ ಸೂಕ್ತ ಕ್ರಮ ವಹಿಸಬೇಕು
-ಚೆನ್ನಕೃಷ್ಣ, ಇಂಟಪ್ಪನಹಳ್ಳಿ, ದ್ರಾಕ್ಷಿ ಬೆಳೆಗಾರರು

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next