Advertisement

ರೋಗಬಾಧೆಯಿಂದ ದ್ರಾಕ್ಷಿ ಬೆಳೆ ಇಳುವರಿ ಕುಸಿತದ ಭೀತಿ

09:20 PM Jul 13, 2021 | Team Udayavani |

ಜಗದೀಶ ಖೋಬ್ರಿ

Advertisement

ತೆಲಸಂಗ: ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಿಂದಾಗಿ ದ್ರಾಕ್ಷಿ ಬೆಳೆಗೆ ಸುಶಿ, ದಾವನಿ ರೋಗ ಮತ್ತು ಕಾಂಡ ಕೊರೆಯುವ ಕೀಟ ಬಾಧೆ ಶುರುವಾಗಿದ್ದು, ದ್ರಾಕ್ಷಿ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ.

ತಾಲೂಕಿನ ಒಟ್ಟು 5 ಸಾವಿರ ಹೆಕ್ಟೇರ್‌ ಕ್ಷೇತ್ರದಲ್ಲಿ ದ್ರಾಕ್ಷಿ ಬೆಳೆಯಲಾಗಿದ್ದು, ತೆಲಸಂಗ ಭಾಗದಲ್ಲಿಯೇ 4 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ದ್ರಾಕ್ಷಿ ಹಚ್ಚಲಾಗಿದೆ. ಅದರಲ್ಲಿಯೇ ತೆಲಸಂಗ, ಕನ್ನಾಳ, ಬನ್ನೂರ ಸೇರಿದಂತೆ ಅಥಣಿ ಪೂರ್ವಭಾಗ ಮತ್ತು ಉತ್ತರ ಭಾಗದ ಹಲವು ಗ್ರಾಮಗಳಲ್ಲಿ ಹೆಚ್ಚಾಗಿ ದ್ರಾಕ್ಷಿ ಬೆಳೆಗೆ ಈ ರೋಗಗಳು ತಗಲಿರುವುದರಿಂದ ದ್ರಾಕ್ಷಿ ಬೆಳೆ ಇಳುವರಿ ಗಣನಿಯವಾಗಿ ಕುಸಿಯುವ ಭೀತಿಯ ಸಂಕಟ ರೈತನಿಗೆ ಬಂದೊದಗಿದೆ.

ಸಾಧಾರಣವಾಗಿ ಆಗಸ್ಟ್‌ ಮಧ್ಯದಿಂದ ಸೆಪ್ಟಂಬರ್‌ ತಿಂಗಳಲ್ಲಿ ಚಾಟಣಿ ಮಾಡಿದ ದ್ರಾಕ್ಷಿ ಬೆಳೆಯಲ್ಲಿ ವಿವಿಧ ಹಂತದಲ್ಲಿ ದಾವನಿ ರೋಗ ಕಾಣಿಸಿಕೊಳ್ಳುತ್ತಿತ್ತು. ಪ್ರಸಕ್ತ ವರ್ಷ ಕಡ್ಡಿ ತಯಾರಾಗುವ ದಿನಗಳಲ್ಲಿಯೇ ದಾವನಿ ರೋಗ ಕಾಣಿಸಿಕೊಂಡಿದೆ. ತಕ್ಷಣ ಔಷಧೋಪಚಾರ ಕೈಗೊಂಡರೆ ನಿಯಂತ್ರಣ ಸಾಧ್ಯವಿದೆ. ಇದರಿಂದ ಶೇ.40 ರಿಂದ 50ರಷ್ಟು ಬೆಳೆ ಹಾನಿ ಆಗುವ ಸಂಭವವಿದೆ. ರೈತರು ತಕ್ಷಣ ಸಮಗ್ರ ರೋಗ ನಿರ್ವಹಣೆ ಕ್ರಮ ಅನುಸರಿಸಿದರೆ ಉಳಿದ ಬೆಳೆಯನ್ನಾದರೂ ರಕ್ಷಿಸಿಕೊಳ್ಳಬಹುದಾಗಿದೆ.

ರೈತರು ಚಾಟಣಿ ಮಾಡಿದ ದ್ರಾಕ್ಷಿ ಬೆಳೆಯ ಎಲೆಗಳನ್ನು ಗೊಬ್ಬರ ಆಗುತ್ತದೆಂದು ಕ್ಷೇತ್ರದಲ್ಲಿ ಬಿಡುತ್ತಾರೆ. ರೋಗ ಇರುವ ಒಂದೇ ಎಲೆ ಇದ್ದರೆ ಸಾಕು. ಅದರಿಂದ ಇಡಿ ಬೆಳೆಗೆಲ್ಲ ರೋಗ ಆವರಿಸುತ್ತದೆ. ಹೀಗಾಗಿ ರೋಗದ ಎಲೆಯನ್ನು ಯಾವುದೇ ಕಾರಣಕ್ಕೂ ತೋಟದಲ್ಲಿ ಬಿಡಬಾರದು. ಒಂದೇ ಪ್ರದೇಶದಲ್ಲಿ ಹಲವಾರು ದ್ರಾಕ್ಷಿ ತಾಕುಗಳಿದ್ದಲ್ಲಿ ಸಮುದಾಯ ಆಧರಿತ ಸಮಗ್ರ ರೋಗ ನಿರ್ವಹಣೆ ಕ್ರಮಗಳಾದ, ಏಕಕಾಲದಲ್ಲಿ ಚಾಟನಿ, ಪೀಡೆನಾಶಕಗಳ ಸಿಂಪರಣೆ, ಸಮಗ್ರ ಪೋಷಕಾಂಶಗಳ ನಿರ್ವಹಣೆ ಅತಿ ಅವಶ್ಯಕವಾಗಿದೆ ಎಂಬುದು ಅನುಭವಿ ರೈತರ ಮತ್ತು ತಜ್ಞರ ಸಲಹೆ ಆಗಿದೆ. ಕೃಷಿ ಅಧಿಕಾರಿಗಳು ಸರ್ವೇ ಮಾಡಿ ಹಾನಿಗೆ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next