ಕಲಬುರಗಿ: ಜಿಲ್ಲೆಯಲ್ಲಿರುವ ಎಲ್ಲ ಗರ್ಭಿಣಿಯರ ಮನೆಯವರು ಶೌಚಾಲಯ ನಿರ್ಮಿಸಿ ಅನುಕೂಲ ಮಾಡಿಕೊಟ್ಟಲ್ಲಿ ಅಂಥ ಗರ್ಭಿಣಿಯರಿಗೆ ಗ್ರಾಪಂನಿಂದ ಸೀಮಂತ ಕಾರ್ಯ ಮಾಡಲಾಗುವುದು. ಈ ನಿಟ್ಟಿನಲ್ಲಿ ಎಲ್ಲ ಗ್ರಾಪಂಗಳಿಗೆ ನಿರ್ದೇಶನ ನೀಡಲಾಗುವುದು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹೇಳಿದರು.
ಚಿತ್ತಾಪುರ ತಾಲೂಕು ಗುಂಡಗುರ್ತಿ ಗ್ರಾಮದಲ್ಲಿ ಎರಡೇ ದಿನಗಳಲ್ಲಿ ಶೌಚಾಲಯ ನಿರ್ಮಿಸಿಕೊಟ್ಟ ಆಶಾ ಕಾರ್ಯಕರ್ತೆ ಇಂದಿರಾಬಾಯಿ ಅವರ ಗರ್ಭಿಣಿ ಮಗಳು ಭಾಗ್ಯಶ್ರೀಗೆ ಸೀಮಂತ ಕಾರ್ಯ ನೆರವೇರಿಸಿ ಅವರು ಮಾತನಾಡಿದರು. ಜಿಲ್ಲೆಯ ಎಲ್ಲ ಆಶಾ ಕಾರ್ಯಕರ್ತೆಯರು ಎಲ್ಲ ಗರ್ಭಿಣಿಯರ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು.
ಮನೆಯವರಿಗೆ ಆರೋಗ್ಯದ ಕುರಿತು ತಿಳಿಹೇಳಬೇಕು. ಗರ್ಭೀಣಿಯರ ಮನೆಯಲ್ಲಿ ನಿರ್ಮಿಸಲಾಗುವ ಶೌಚಾಲಯದ ಗೋಡೆ ಮೇಲೆ ಅಂದವಾದ ಮಗುವಿನ ಮತ್ತು ತಾಯಿ ಹಾಲುಣಿಸುವ ಚಿತ್ರ ಬಿಡಿಸಬೇಕು ಎಂದು ಹೇಳಿದರು. ಗರ್ಭಿಣಿಯರು ಪದೇ ಪದೇ ಶೌಚಕ್ಕೆ ಹೋಗಬೇಕಾಗುತ್ತದೆ ಎಂಬ ಉದ್ದೇಶದಿಂದ ಹೆಚ್ಚಿಗೆ ನೀರು ಮತ್ತು ಆಹಾರ ಸೇವಿಸುವುದಿಲ್ಲ.
ಇದರಿಂದ ಅಪೌಷ್ಟಿಕತೆಯುಂಟಾಗಿ ತಾಯಿ ಮತ್ತು ಮಗುವಿನ ಮೇಲೆ ಭೀಕರ ಪರಿಣಾಮ ಉಂಟಾಗುತ್ತದೆ. ಹುಟ್ಟುವ ಮಗುವೂ ಸಹ ಬೆಳೆದು ಬಯಲಿನಲ್ಲಿ ಶೌಚ ಮಾಡುವುದನ್ನು ರೂಢಿಸಿಕೊಳ್ಳುತ್ತದೆ. ಮುಂದಿನ ಪೀಳಿಗೆ ಅಂದರೆ ದೇಶದ ಭವಿಷ್ಯ ರೂಪಿಸುವವರಿಗೆ ಶೌಚಾಲಯದ ಮಹತ್ವ ಹುಟ್ಟಿನಿಂದಲೇ ತಿಳಿಸಬೇಕು.
ಇದಕ್ಕಾಗಿ ಮುಂದಿನ ಒಂದು ವಾರದಲ್ಲಿ ಪ್ರತಿ ಗ್ರಾಪಂನಲ್ಲಿ 10 ಶೌಚಾಲಯ ನಿರ್ಮಿಸಲು ಗುರಿ ನೀಡಿ “ಕೂಸು’ ಎಂಬ ಧ್ಯೇಯದ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಹೇಳಿದರು. ಜಿಪಂ ಮುಖ್ಯ ಯೋಜನಾಧಿಧಿಕಾರಿ ಪ್ರವೀಣ ಪ್ರಿಯಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಶಿವರಾಜ ಸಜ್ಜನಶೆಟ್ಟಿ, ಸ್ವತ್ಛ ಭಾರತ ಅಭಿಯಾನದ ಜಿಲ್ಲಾ ಸಮನ್ವಯಾಧಿ ಧಿಕಾರಿಗಳಾದ ಅನ್ನಪೂರ್ಣ ಗುರುಬಾಯಿ, ಗುಂಡಗುರ್ತಿ ಗ್ರಾಪಂ ಅಧ್ಯಕ್ಷ ರೋಹಿತ ಎಂ. ಗಂಜಿಗೇರಿ, ಪಿಡಿಒ ಡಾ| ಪಲ್ಲವಿ ಹಾಜರಿದ್ದರು.