ಬೆಳಗಾವಿ: ಜಿಲ್ಲೆಯ 506 ಗ್ರಾಮ ಪಂಚಾಯತಿಗಳಿಗೆ ಕೋವಿಡ್ 19 ವೈರಸ್ ವ್ಯಾಪಕತೆಯನ್ನು ತಡೆಯಲು ಗ್ರಾಮ ಪಂಚಾಯತಿ ಮತ್ತು ಗ್ರಾಮ ಮಟ್ಟದಲ್ಲಿ ರಚಿಸಿರುವ ಕಾರ್ಯಪಡೆಗಳ ಅಭಿವೃದ್ಧಿ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರತಿ ಗ್ರಾಮ ಪಂಚಾಯತಿಗೆ ತಲಾ 20 ಸಾವಿರ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಪಂಚಾಯತ ಸಿ.ಇ.ಓ ಡಾ. ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.
ಕೋವಿಡ್ 19 ಸೊಂಕು ತಡೆಗಟ್ಟುವ ಸಲುವಾಗಿ ಗ್ರಾಮ ಸಭೆಯ ಸದಸ್ಯರಿಗೆ ಸಮುದಾಯ ಸಂಘಟನೆ ಮತ್ತು ಅರಿವು ಮೂಡಿಸಲು ಹಾಗೂ ತರಬೇತಿ ನೀಡುವ ಸಲುವಾಗಿ ಈ ಅನುದಾನ ಉಪಯೋಗಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು, ಕೈಗಳನ್ನು ತೊಳೆದುಕೊಂಡು ಶುಚಿತ್ವ ಖಚಿತಪಡಿಸುವ ಬಗ್ಗೆ ಅರಿವು ಮೂಡಿಸುವುದು, ಕಡ್ಡಾಯವಾಗಿ ಜನರು ಮಾಸ್ಕ್ ಧರಿಸುವಂತೆ ಪ್ರೇರೇಪಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಅಬ್ದುಲ್ ನಜೀರಸಾಬ್ ಗ್ರಾಮೀಣ ಮತ್ತು ಪಂಚಾಯತ್ ರಾಜ್ ಸಂಸ್ಥೆಯು ಕಾಲ-ಕಾಲಕ್ಕೆ ನೀಡುವ ಮಾರ್ಗಸೂಚಿಗಳನ್ವಯ ವೆಚ್ಚ ಮಾಡುವಂತೆ ತಾಲೂಕ ಪಂಚಾಯತಿಗಳು ಕಡ್ಡಾಯವಾಗಿ ಖಾತರಿಪಡಿಸಕೊಳ್ಳಬೇಕು. ಗ್ರಾಮ ಪಂಚಾಯತಿಗಳು ತಮ್ಮ ವ್ಯಾಪ್ತಿಯಲ್ಲಿ ಕೈಗೊಳ್ಳಲು ಯೋಜಿಸಿರುವ ವಿವಿಧ ಸಮುದಾಯ ಸಂಘಟನೆ, ಅರಿವು ಮೂಡಿಸುವ ಹಾಗೂ
ತರಬೇತಿ ಚಟುವಟಿಕೆಗಳ ವಿವರಗಳನ್ನು ಅನುಷ್ಠಾನ ಮಾಡಬೇಕು ಎಂದು ಅವರು ಸೂಚಿಸಿದ್ದಾರೆ.
ಗ್ರಾಮ ಪಂಚಾಯತಿಯು ಕೈಗೊಳ್ಳುವ ಈ ಎಲ್ಲ ಚಟುವಟಿಕೆಗಳ ವಿವರಗಳನ್ನು ತಾಲೂಕ ಪಂಚಾಯತಿಗಳು ಕ್ರೋಢಿಕರಿಸಿ ಜಿಲ್ಲಾ ಪಂಚಾಯತ್ ಕಚೇರಿಗೆ ಸಲ್ಲಿಸಬೇಕು. ಈ ಅನುದಾನದಿಂದ ಪ್ರತಿ ಗ್ರಾಮ ಪಂಚಾಯತಿ ಒಟ್ಟಾರೆ ಕನಿಷ್ಟ 250 ವ್ಯಕ್ತಿಗಳಿಗೆ ತರಬೇತಿ ಅಥವಾ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕಡ್ಡಾಯವಾಗಿ ಕೈಗೊಳ್ಳುವಂತೆ ಗ್ರಾಮ ಪಂಚಾಯತಿಗಳಿಗೆ ಸಿ.ಇ.ಓ ಡಾ. ರಾಜೇಂದ್ರ ಕೆ.ವಿ ಅವರು ಪ್ರಕಟಣೆಯ ಮೂಲಕ ಸೂಚನೆ ನೀಡಿದ್ದಾರೆ.