ಶಿವಮೊಗ್ಗ: ಜಿಲ್ಲೆಯಲ್ಲಿ ಸುಸಜ್ಜಿತವಾದ ಟ್ರಕ್ ಟರ್ಮಿನಲ್ ನಿರ್ಮಿಸುವುದು ಅವಶ್ಯಕವಾಗಿದ್ದು ಶಿವಮೊಗ್ಗ ಸುತ್ತಮುತ್ತ ಸೂಕ್ತ ಜಾಗ ಗುರುತಿಸಿದಲ್ಲಿ ಟರ್ಮಿನಲ್ ನಿರ್ಮಾಣ ಮತ್ತು ಅಭಿವೃದ್ಧಿಗೆ ಅನುದಾನ ಒದಗಿಸಲಾಗುವುದು. ನಿಮ್ಮ ಸಹಕಾರ ಇದ್ದರೆ ಮಾತ್ರ ಇದು ಸಾಧ್ಯ ಎಂದು ಡಿ. ದೇವರಾಜ ಅರಸ್ ಟ್ರಕ್ ಟರ್ಮಿನಲ್ ಅಧ್ಯಕ್ಷ ಡಿ.ಎಸ್. ವೀರಯ್ಯ ಅಧಿ ಕಾರಿಗಳಿಗೆ ತಿಳಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಲು ಅನುವಾಗುವಂತೆ ಯೋಗ್ಯ ಜಮೀನನ್ನು ಪಶಪಡಿಸಿಕೊಳ್ಳುವ ಕುರಿತು ಜಿಲ್ಲಾಧಿ ಕಾರಿಗಳು, ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿ ಕಾರದ ಅಧಿ ಕಾರಿಗಳು, ಕೆಐಎಡಿಬಿ ಹಾಗೂ ಕಂದಾಯ ಅಧಿ ಕಾರಿಗಳೊಂದಿಗೆ ಜಿಲ್ಲಾಧಿ ಕಾರಿಗಳ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕೆಲವೆಡೆ ಸುಸಜ್ಜಿತವಾದ ಟ್ರಕ್ ಟರ್ಮಿನಲ್‌ಗಳ ಸ್ಥಾಪನೆಯಾಗಿದೆ. ಹಲವೆಡೆ ಇನ್ನೂ ಆಗಬೇಕಿದೆ. ಟ್ರಕ್ ಟರ್ಮಿನಲ್‌ಗಳ ಸ್ಥಾಪನೆಯಿಂದ ಅಪಘಾತಗಳು ಕಡಿಮೆಯಾಗುತ್ತವೆ ಹಾಗೂ ವಾಯು ಮಾಲಿನ್ಯ ಮತ್ತು ದಟ್ಟಣೆ ಕೂಡ ಕಡಿಮೆ ಆಗುತ್ತದೆ. ಜೊತೆಗೆ ಉದ್ಯೋಗಾವಕಾಶದೊಂದಿಗೆ ಮಿನಿ ಟೌನ್ ಶಿಪ್ ನಿರ್ಮಾಣವಾದಂತೆ ಆಗುತ್ತದೆ. ಇಲ್ಲಿ ಲಾರಿ ಏಜೆಂಟರಿಗೆ ಕಚೇರಿ ನೀಡಬಹುದು. ಹೀಗೆ ಟ್ರಕ್ ಟರ್ಮಿನಲ್‌ನಿಂದ ಅನೇಕ ಅನುಕೂಲತೆಗಳು ಇವೆ ಎಂದರು. ಟರ್ಮಿನಲ್ ಇಲ್ಲದಿದ್ದರೆ ರಸ್ತೆ ಬದಿ ಲಾರಿಗಳನ್ನು ನಿಲ್ಲಿಸಲಾಗುತ್ತದೆ. ಮುಂಜಾವಿನಲ್ಲಿ ಟ್ರಕ್ ತೆರವುಗೊಳಿಸುವ ಅನಿವಾರ್ಯತೆಯಿಂದ ಬೇಗ ಹೊರಡುವುದರಿಂದ ಅಪಘಾತಗಳ ಸಂಖ್ಯೆ ಸಹ ಹೆಚ್ಚುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ಟ್ರಕ್ ಟರ್ಮಿನಲ್ ನಮ್ಮ ಅವ ಧಿಯಲ್ಲೇ ಆಗಬೇಕೆಂದು ಆಶಯ ವ್ಯಕ್ತಪಡಿಸಿದ ಅವರು ಜಿಲ್ಲಾ ಧಿಕಾರಿಗಳು ಆರ್‌ಐ, ಗ್ರಾಮ ಲೆಕ್ಕಿಗರು ಸೇರಿದಂತೆ ತಳಮಟ್ಟದ ಅ ಧಿಕಾರಿಗಳ ಸಭೆ ಕರೆದು ಶಿವಮೊಗ್ಗ ಸುತ್ತಮುತ್ತ ಜಾಗ ಇದೆಯಾ ಎಂದು ಪರಿಶೀಲಿಸಬೇಕೆಂದು ಸೂಚಿಸಿದರು.
ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಕನಿಷ್ಠ 15 ರಿಂದ 20 ಎಕರೆಯಿಂದ ಗರಿಷ್ಟ 50 ಎಕರೆವರೆಗೆ ಜಾಗ ಗುರಿತಿಸಿದರೆ ಒಳ್ಳೆಯದು. ಇಲ್ಲಿ ವೇರ್‌ಹೌಸ್ ಕೂಡ ನಿರ್ಮಿಸಬಹುದು. ಹೊಸಪೇಟೆ, ಹುಬ್ಬಳ್ಳಿ, ಧಾರವಾಡ, ಯಶವಂತಪುರ ಇಲ್ಲಿ ಸುಸಜ್ಜಿತ ಟರ್ಮಿನಲ್‌ಗಳು ಇವೆ. ಮೊದಲನೇ ಆದ್ಯತೆಯಲ್ಲಿ ಸರ್ಕಾರಿ ಜಮೀನು ಗುರುತಿಸುವುದು ಒಳ್ಳೆಯದು. ಅದು ಲಭ್ಯವಿಲ್ಲದಿದ್ದರೆ ನಗರೋತ್ಥಾನ ಅಥವಾ ಕೆಐಎಡಿಬಿ ಜಾಗವನ್ನು ಗುರುತಿಸಬೇಕು. ರಾಷ್ಟ್ರೀಯ ಹೆದ್ದಾರಿ ಸುತ್ತಮುತ್ತ 2 ರಿಂದ 5 ಕಿ.ಮೀ ಒಳಗೆ ಜಾಗ ಗುರುತಿಸಬೇಕು. ತಹಶೀಲ್ದಾರರು, ನಗರಾಭಿವೃದ್ದಿ ಮತ್ತು ಕೆಎಐಡಿಬಿ ಅ ಧಿಕಾರಿಗಳು ಜಾಗ ಗುರುತಿಸಲು ಜಿಲ್ಲಾ ಧಿಕಾರಿಗಳಿಗೆ ಸಹಕರಿಸಬೇಕೆಂದು ಹೇಳಿದರು. ಜಿಲ್ಲಾ ಧಿಕಾರಿಗಳು ಮಾತನಾಡಿ, ತಾಲೂಕು ಅ ಧಿಕಾರಿಗಳು ಮತ್ತು ಆರ್‌ಐ, ವಿಎಗಳ ಸಭೆ ಕರೆದು ಜಾಗ ಲಭ್ಯತೆ ಬಗ್ಗೆ ಪರಿಶೀಲಿಸುತ್ತೇನೆ.
ಎನ್ ಎಚ್ ಬಳಿ ಅದರಲ್ಲೂ ಶಿವಮೊಗ್ಗ ಸುತ್ತಮುತ್ತ ಜಾಗ ನೋಡುತ್ತೇವೆ. ಭೂಮಿ ಖರೀದಿಗೆ ಅವಕಾಶ ಮಾಡಿಕೊಟ್ಟರೆ ಒಳಿತಾಗುತ್ತದೆ ಎಂದರು. ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್ ಮಾತನಾಡಿ, ಹರಿಗೆ ಬಳಿ ಇರುವ ಶುಗರ್ ಫ್ಯಾಕ್ಟರಿ ಜಾಗ ಅಥವಾ ಹರಿಗೆ ಬಳಿ ಇರುವ ಜಾಗವನ್ನು ನೋಡಬಹುದೆಂದು ಸಲಹೆ ನೀಡಿದರು. ಕೆಐಎಡಿಬಿ ಕಾರ್ಯಪಾಲಕ ಅಭಿಯಂತರ ನಾರಾಯಣಪ್ಪ ವಿಮಾನ ನಿಲ್ದಾಣದ ಬಳಿ ಜಾಗ ಪರಿಶೀಲಿಸಬಹುದೆಂದು ಸಲಹೆ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿ ಕಾರಿ ನಾಗೇಂದ್ರ ಎಫ್ ಹೊನ್ನಳ್ಳಿ, ಸೂಡಾ ಆಯುಕ್ತ ಕೊಟ್ರೇಶ್, ಶಿವಮೊಗ್ಗ ತಹಶೀಲ್ದಾರ್ ನಾಗರಾಜ್, ಇತರೆ ಅ ಧಿಕಾರಿಗಳು ಇದ್ದರು.