Advertisement

Govt., ಕಂಬಳಕ್ಕೆ ಸಿಗದ ಅನುದಾನ: ಇಂದು ಸಿಎಂ ಭೇಟಿ

11:49 PM Jul 21, 2024 | Team Udayavani |

ಮಂಗಳೂರು: ಕಂಬಳಕ್ಕೆ ಸಿಗುತ್ತಿದ್ದ ಸರಕಾರದ ಅನುದಾನ ಕೈತಪ್ಪಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕಂಬಳ ಸಮಿತಿ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಜು.22ರಂದು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಧರಿಸಿದೆ.

Advertisement

ಡಿ.ವಿ.ಸದಾನಂದ ಗೌಡ ಅವರು ಸಿಎಂ ಆಗಿದ್ದ ಸಮಯದಲ್ಲಿ ಘೋಷಿಸಿದಂತೆ ಪ್ರತಿಯೊಂದು ಕಂಬಳಕ್ಕೂ ತಲಾ 5 ಲಕ್ಷ ರೂ.ಗಳಂತೆ ಅನುದಾನ ಲಭಿಸುತ್ತಿತ್ತು. ಆದರೆ 2023-24ನೇ ಸಾಲಿನಲ್ಲಿ ನಡೆದ ಕಂಬಳಕ್ಕೆ ಸರಕಾರ ಅನುದಾನ ಬಿಡುಗಡೆ ಮಾಡಿರಲಿಲ್ಲ.

2 ಕಂಬಳಗಳ ಬಿಲ್‌ ಬಾಕಿ!
ಪುತ್ತೂರಿನ ಕೋಟಿ ಚೆನ್ನಯ ಜೋಡುಕೆರೆ ಕಂಬಳಕ್ಕೆ 5 ಲಕ್ಷ ರೂ. ಹಾಗೂ ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕೆರೆ ಕಂಬಳಕ್ಕೆ 10 ಲಕ್ಷ ರೂ. ಪ್ರಾಯೋಜಕತ್ವವಾಗಿ ಸರಕಾರ ಮಾ.13ರಂದು ಅನುದಾನ ಮಂಜೂರು ಆದೇಶ ಹೊರಡಿಸಿತ್ತು. ನಿಯಮಾನುಸಾರ ಬಿಲ್‌ ತಯಾರಿಸಿ ದ.ಕ. ಜಿಲ್ಲಾಧಿಕಾರಿಯವರು ಮಾ.23ರಂದು ಜಿಲ್ಲಾ ಖಜಾನೆಗೆ ಸಲ್ಲಿಸಿದ್ದಾರೆ. ಆದರೆ ಖಜಾನೆಯಲ್ಲಿ ಬಿಲ್‌ ಸ್ವೀಕೃತಿಯ ಕೊನೆಯ ದಿನಾಂಕ ಮಾ.20 ಆಗಿತ್ತು. ಹೀಗಾಗಿ ತಂತ್ರಾಂಶದಲ್ಲಿ ಬಿಲ್‌ ಸ್ವೀಕೃತವಾಗಿರಲಿಲ್ಲ.

ಪರಿಣಾಮವಾಗಿ ಪ್ರವಾಸೋದ್ಯಮ ಇಲಾಖೆಯಿಂದ ಬಿಡುಗಡೆ ಮಾಡಿದ ಈ ಅನುದಾನವನ್ನು ಪಾವತಿಸಲು ಸಾಧ್ಯವಾಗಿಲ್ಲ. ಮರು ಬಿಡುಗಡೆ ಮಾಡಲು ಪ್ರಸ್ತಾವನೆ ಪರಿಶೀಲನೆ ಹಂತದಲ್ಲಿದೆ ಎಂದು ಸರಕಾರ ತಿಳಿಸಿದೆ.

5ಕ್ಕಲ್ಲ, ಎಲ್ಲ ಕಂಬಳಗಳಿಗೂ ಅನುದಾನ ಬೇಕು
“ಉದಯವಾಣಿ’ ಜತೆಗೆ ಮಾತನಾಡಿದ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್‌ ಶೆಟ್ಟಿ ಅವರು, 2024-25ನೇ ಸಾಲಿನಲ್ಲಿ ಕನಿಷ್ಠ 5 ಕಂಬಳಗಳಿಗೆ ರಾಜ್ಯ ಸರಕಾರ ಅನುದಾನ ನೀಡಲಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ್‌ ತಿಳಿಸಿದ್ದಾರೆ. ಪ್ರತಿವರ್ಷ ಎಲ್ಲ ಕಂಬಳಗಳಿಗೆ ತಲಾ 5 ಲಕ್ಷ ರೂ. ಸಿಗುತ್ತಿತ್ತು. ಆದರೆ ಕಳೆದ ಸಾಲಿನದ್ದು ಸಿಗಲಿಲ್ಲ. ಮುಂದಿನ ವರ್ಷಕ್ಕೆ 5 ಕಂಬಳಕ್ಕೆ ಮಾತ್ರ ಎಂಬ ನಿಯಮ ತಾರತಮ್ಯ ಮಾಡಿದಂತಾಗುತ್ತದೆ. ಕರಾವಳಿಯ ಮಣ್ಣಿನ ಅತ್ಯಂತ ಪ್ರೀತಿಯ ಜಾನಪದ ಕ್ರೀಡೆಯ ಮೇಲಿನ ಗೌರವದಿಂದ ಒಂದೊಂದು ಕಂಬಳಕ್ಕೆ ಕನಿಷ್ಠ 50 ಲಕ್ಷ ರೂ.ಗಳವರೆಗೆ ಖರ್ಚು ಮಾಡುತ್ತಾರೆ. ಹೀಗಾಗಿ ಎಲ್ಲ ಕಂಬಳಗಳಿಗೂ ಇದುವರೆಗೆ ನೀಡುತ್ತಿದ್ದಂತೆ ಅನುದಾನವನ್ನು ನೀಡಬೇಕು ಎಂದು ಆಗ್ರಹಿಸಿ ಸಿಎಂ ಅವರನ್ನು ಸ್ಪೀಕರ್‌ ಯು.ಟಿ.ಖಾದರ್‌ ನೇತೃತ್ವದಲ್ಲಿ ಕರಾವಳಿಯ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸೋಮವಾರ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next