Advertisement

ಜಲ ಪ್ರವಾಸೋದ್ಯಮ ಉತ್ತೇಜನಕ್ಕೆ ಅನುದಾನ

04:01 AM Jan 13, 2019 | Team Udayavani |

ಮಂಗಳೂರು: ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ತರ ಕೊಡುಗೆ ನೀಡಬಲ್ಲ ನದಿಗಳಲ್ಲಿ ನದಿ ಉತ್ಸವ ಸೇರಿದಂತೆ ಜಲ ಪ್ರವಾಸೋದ್ಯಮಕ್ಕೆ ವಿಶೇಷ ಅನುದಾನ ಒದಗಿಸಲು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಚಿವ ಯು.ಟಿ. ಖಾದರ್‌ ಹೇಳಿದರು.

Advertisement

ದ.ಕ. ಜಿಲ್ಲಾಡಳಿತ ಪ್ರವಾಸೋದ್ಯಮ ಇಲಾಖೆಯ ಸಹಭಾಗಿತ್ವದೊಂದಿಗೆ ಫಲ್ಗುಣಿ ನದಿಯಲ್ಲಿ ಬಂಗ್ರ ಕೂಳೂರಿನಿಂದ ಸುಲ್ತಾನ್‌ಬತ್ತೇರಿವರೆಗೆ ಹಮ್ಮಿಕೊಂಡಿರುವ ಎರಡು ದಿನಗಳ ನದಿ ಉತ್ಸವವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೇರಳ, ಗೋವಾ ಜಲ ಪ್ರವಾಸೋದ್ಯಮದಲ್ಲಿ ಮುಂದಿವೆ. ನಮ್ಮ ಜಿಲ್ಲೆಯಲ್ಲೂ ವಿಪುಲ ಅವಕಾಶಗಳಿವೆ. ಪ್ರವಾಸಿಗರನ್ನು ಆಕರ್ಷಿಸುವ ಚಟುಟಿಕೆಗಳನ್ನು ಉತ್ತೇಜಿಸಲು ಮಾರ್ಗ ಸೂಚಿ ರೂಪಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್‌ ನದಿ ಉತ್ಸವಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದರು. ಮೇಯರ್‌ ಭಾಸ್ಕರ್‌ ಕೆ. ಮಾತನಾಡಿ, ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಮಂಗಳೂರಿನಲ್ಲಿ ನದಿಪಾತ್ರಗಳನ್ನು ಪ್ರವಾಸೋದ್ಯಮ ತಾಣಗಳಾಗಿ ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಿದ್ದು ಇದಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ. ನದಿ ಉತ್ಸವ ಇದಕ್ಕೆ ಪೂರಕ ಎಂದರು.

13 ಕಡೆಗಳಲ್ಲಿ  ಜೆಟ್ಟಿ
ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಸ್ವಾಗತಿಸಿ, ನದಿಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮತ್ತು ಪ್ರವಾಸೋದ್ಯಮ ತಾಣಗಳಾಗಿ ಅವುಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿಪ್ರಥಮ ಬಾರಿಗೆ ನದಿ ಉತ್ಸವ ಆಯೋಜನೆಗೊಂಡಿದೆ. ಮುಂದೆ ಫಲ್ಗುಣಿ ಯಿಂದ ನೇತ್ರಾವತಿ ನದಿವರೆಗಿನ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗೆ ಪೂರಕವಾಗಿ 13 ಕಡೆಗಳಲ್ಲಿ ಜೆಟ್ಟಿ ನಿರ್ಮಿಸಲಾಗುವುದು ಎಂದರು. ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌, ಅಪರ ಜಿಲ್ಲಾಧಿಕಾರಿ ಕುಮಾರ್‌, ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಉಪಸ್ಥಿತರಿದ್ದರು.

ಹರಿದುಬಂದ  ಜನಸಾಗರ 
ರಾಜ್ಯದಲ್ಲೇ ಪ್ರಥಮವಾಗಿ ಮಂಗಳೂರಿನಲ್ಲಿ ಆಯೋಜನೆಗೊಂಡಿರುವ ನದಿ ಉತ್ಸವಕ್ಕೆ ಭಾರೀ ಜನಸ್ಪಂದನೆ ವ್ಯಕ್ತವಾಗಿದ್ದು ಪ್ರಥಮ ದಿನವಾದ ಶನಿವಾರ ಜನಸಾಗರ ಹರಿದು ಬಂದಿದೆ. ಸಂಜೆಯ ವೇಳೆ ದೋಣಿ ವಿಹಾರಕ್ಕೆ ಜನರು ಕ್ಯೂ ನಿಲ್ಲಬೇಕಾಯಿತು. ಮಕ್ಕಳು ಗಾಳಿಪಟ ಹಾರಾಟ ನಡೆಸಿ ಸಂತಸ ಪಟ್ಟರು. ರವಿವಾರವೂ ನದಿ ಉತ್ಸವ ನಡೆಯಲಿದೆ.

Advertisement

ನಿರೀಕ್ಷೆಗೂ ಮೀರಿ ಸ್ಪಂದನೆ
ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಆನಂದಿಸಿದ್ದಾರೆ. ದೋಣಿಗಳಲ್ಲಿ ಹೆಚ್ಚಿನ ಜನಸಂದಣಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ರವಿವಾರ ಇನ್ನಷ್ಟು  ದೋಣಿಗಳನ್ನು ವ್ಯವಸ್ಥೆ ಮಾಡಲಾಗುವುದು.
ಶಶಿಕಾಂತ ಸೆಂಥಿಲ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next