ಗುರುಮಠಕಲ್: ರಾಜ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಚರಿಸುವಂತೆಯೇ ಸರ್ಕಾರ ಸಂಗೀತ ಸಮ್ಮೇಳನ ಆಯೋಜಿಸಬೇಕು ಮತ್ತು ಅನುದಾನ ಬಿಡುಗಡೆ ಮಾಡಿ ಸಂಗೀತ ಕಲೆ ಪ್ರೋತ್ಸಾಹಿಸಬೇಕು ಎಂದು ಗದುಗಿನ ಅಖೀಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ ರಾಜ್ಯಾಧ್ಯಕ್ಷ ವೇ.ಮೂ ಚನ್ನವೀರಸ್ವಾಮಿ ಹಿರೇಮಠ ಹೇಳಿದರು.
ಪಟ್ಟಣದ ಖಾಸಾಮಠ ಆವರಣದಲ್ಲಿ ಶುಕ್ರವಾರ ಅಖೀಲ ಕರ್ನಾಟಕ ಗಾನಯೋಗಿ ಪರಿಷತ್ ವತಿಯಿಂದ ಆಯೋಜಿಸಿದ್ದ ತಾಲೂಕು ಘಟಕದ ವಾರ್ಷಿಕ ಚಟುವಟಿಕೆಗಳ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜರು ತಮ್ಮ ಆಸ್ಥಾನದಲ್ಲಿ ಸಂಗೀತಕ್ಕೆ ಪೋಷಣೆ ನೀಡಿದ್ದರು. ಆ ಪರಂಪರೆಯನ್ನು ಸರ್ಕಾರವೂ ಪೋಷಿಸಬೇಕಿದೆ. ಶಾಲೆ- ಕಾಲೇಜುಗಳ ಪಠ್ಯೇತರ ಚಟುವಟಿಕೆಯಲ್ಲಿ ಸಂಗೀತ ಮತ್ತು ಸಾಹಿತ್ಯ ಕಲೆ ಆಳವಡಿಸಲು ಯೋಚಿಸಬೇಕಾಗಿದೆ ಎಂದರು.
ಖಾಸಾಮಠದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಸಂಗಿತದಿಂದ ಮನಸ್ಸು ಉಲ್ಲಾಸವಾಗುತ್ತದೆ. ಖನ್ನತೆ ದೂರ ಮಾಡಿ ಆತ್ಮವಿಶ್ವಾಸ ಮೂಡಿಸುವ ಅದ್ಭುತ ಶಕ್ತಿ ಅದರಲ್ಲಿ ಅಡಗಿದೆ ಎಂದರು.
ಸಂಘದ ತಾಲೂಕು ಅಧ್ಯಕ್ಷ ರಾಜಲಿಂಗಪ್ಪ ಸಜ್ಜನ್ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಪ್ರಶಾಂತ ದೇಶಮುಖ, ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ, ಮಲ್ಲಿಕಾರ್ಜುನ ಹಿರೇಮಠ, ಲಿಂಗಾನಂದ ಗೋಗಿ, ಬಸರೆಡ್ಡಿ ಎಂಟಿಹಳ್ಳಿ, ಅಯ್ಯಪ್ಪದಾಸ್ ರಾಠೊಡ್, ಶಾಂತವೀರ ಸ್ವಾಮಿ, ಅಕ್ಕನಬಳಗ ಭಜನಾ ಮಂಡಳಿ ತಾಲೂಕ ಅಧ್ಯಕ್ಷೆ ಸಿದ್ದಮ್ಮ ಗದ್ವಲ್ ಇದ್ದರು.