Advertisement

ಅಭಿವೃದ್ಧಿ ಯೋಜನೆಗಳಿಗೆ ಅನುದಾನ ತಡೆ: ಪ್ರತಿಭಟನೆಗೆ ನಿರ್ಧಾರ

09:02 PM Feb 03, 2020 | Lakshmi GovindaRaj |

ಹಾಸನ: ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅಧಿಕಾರವಧಿಯಲ್ಲಿ ಹಾಸನ ಜಿಲ್ಲೆಗೆ ಮಂಜೂರಾಗಿದ್ದ ಅಭಿವೃದ್ಧಿ ಯೋಜನೆಗಳನ್ನು ಬಿಜೆಪಿ ಸರ್ಕಾರ ತಡೆ ಹಿಡಿದಿರುವುನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಜೆಡಿಎಸ್‌ ಮುಖಂಡ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರದ ಅಧಿಕಾವಧಿಯಲ್ಲಿ ಹಾಸನ ಜಿಲ್ಲೆಗೆ ಮಂಜೂರಾಗಿದ್ದ ಅಭಿವೃದ್ಧಿ ಯೋಜನೆಗಳ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯನ್ನು ಯಡಿಯೂರಪ್ಪ ನೇತೃತ್ವದ ಸರ್ಕಾರ ತಡೆ ಹಿಡಿದಿದೆ.

ಈ ಸಂಬಂಧ ಹಾಸನ ಜಿಲ್ಲೆಯ ಎಲ್ಲಾ ಜೆಡಿಎಸ್‌ ಶಾಸಕರು ಮುಖ್ಯಮಂತ್ರಿಯವರಿಗೆ ಎರಡು ಬಾರಿ ಪತ್ರ ಬರೆದು ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರೂ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸುಧೀರ್ಘ‌ ಪತ್ರ ಬರೆದು ಹಾಸನ ಜಿಲ್ಲೆಗೆ ಅನ್ಯಾಯ ಮಾಡಬೇಡಿ, ಅನುದಾನ ಬಿಡುಗಡೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಆದರೂ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಹೇಳಿದರು.

ರಾಜಕೀಯ ದ್ವೇಷ ಸಾಧನೆ: ಅಭಿವೃದ್ಧಿ ಯೋಜನೆಗಳಿಗೆ ತಾಂತ್ರಿಕ, ಆಡಳಿತಾತ್ಮಕ ಮಂಜೂರಾತಿ ನೀಡಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ಅನುಷ್ಠಾನ ಹಂತದಲ್ಲಿರುವ ಕಾಮಗಾರಿಗಳಿಗೂ ತಡೆ ನೀಡಿ ರಾಜಕೀಯ ದ್ವೇಷ ಸಾಧನೆ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಭಿವೃದ್ಧಿ ವಿಷಯದಲ್ಲಿ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳುತ್ತಲೇ ಹಾಸನ ಜಿಲ್ಲೆಯ ಅಭಿವೃದ್ಧಿ ಯೋಜನೆಗಳಿಗೆ ತಡೆ ನೀಡಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಡೀಸಿ ಕಚೇರಿ ಮುಂದೆ ಪ್ರತಿಭಟನೆ: ದ್ವೇಷದ ರಾಜಕಾರಣವನ್ನು ಖಂಡಿಸಿ ಇನ್ನೊಂದು ವಾರದಲ್ಲಿ ಹಾಸನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು ಮತ್ತು ಎಲ್ಲಾ ಚುನಾಯಿತ ಜನಪ್ರತಿನಿಧಿಗಳ ನೇತೃತ್ವದಲ್ಲಿ ಜೆಡಿಎಸ್‌ ಕಾರ್ಯಕರ್ತರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಆಗಲೂ ಸರ್ಕಾರ ಸ್ಪಂದಿಸದೇ ದ್ವೇಷದ ರಾಜಕಾರಣ ಮುಂದುವರಿಸಿದರೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ನಿವಾಸದ ಬಳಿಯೇ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ನೇತೃತ್ವದಲ್ಲಿ ಜಿಲ್ಲೆಯ ಸಂಸದರು, ಶಾಸಕರು, ಜನಪ್ರತಿನಿಧಿಗಳು ಧರಣಿ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.

Advertisement

42 ಕಾಮಗಾರಿ ತಡೆಹಿಡಿದ ಸರ್ಕಾರ: ಹಾಸನ ಜಿಲ್ಲೆಯ ಒಟ್ಟು 42 ಕಾಮಗಾರಿಗಗಳು ಅನುಮೋದನೆಗೊಂಡು ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡ ಕಾಮಗಾರಿಗಳನ್ನೂ ತಡೆ ಹಿಡಿಯಲಾಗಿದೆ. ಹಾಸನದ ಚನ್ನಪಟ್ಟಣ ಕೆರೆ ಅಭಿವೃದ್ಧಿಯ 144 ಕೋಟಿ ರೂ. ಯೋಜನೆ, ಹಾಸನದ ಮಹಿಳಾ ಪಾಲಿಟೆಕ್ನಿಕ್‌ನ 3 ನೇ ಹಂತದ ಕಾಮಗಾರಿ, ಹಾಸನ ತಾಲೂಕು ಸೋಮನಹಳ್ಳಿ ಕಾವಲ್‌ನಲ್ಲಿ ತೋಟಗಾರಿಕೆ ಕಾಲೇಜು ನಿರ್ಮಾಣದ 65 ಕೋಟಿ ರೂ. ಕಾಮಗಾರಿ, ಮೊಸಳೆ ಹೊಸಹಳ್ಳಿಯ ಸರ್ಕಾರಿ ಪಾಲಿಟೆಕ್ನಿಕ್‌ನ 2ನೇ ಹಂತದ ಕಾಮಗಾರಿ, ಹಾಸನ ನಗರಸಭೆ ವ್ಯಾಪ್ತಿಯ ನಗರೋತ್ಥಾನ ಯೋಜನೆಯಡಿ 10.90 ಕೋಟಿ ರೂ. ಕಾಮಗಾರಿ ತಡೆಹಿಡಿಯಾಗಿದೆ ಎಂದು ವಿವರ ನೀಡಿದರು.

ಹಾಸನ ವಿಮಾನ ನಿಲ್ದಾಣ ಕಾಮಗಾರಿ ಆರಂಭಿಸಿ: ಹಾಸನ ವಿಮಾನ ನಿಲ್ದಾಣ ಕಾಮಗಾರಿಯನ್ನೂ ಆರಂಭಿಸಬೇಕು ಎಂದು ಹೇಳಿದ ರೇವಣ್ಣ ಅವರು, ಲೋಕೋಪಯೋಗಿ ಇಲಾಖೆ, ವಸತಿ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಹಲವು ಇಲಾಖೆಗಳಿಂದ ಮಂಜೂರಾಗಿದ್ದ ನುರಾರು ಕೋಟಿ ರೂ. ಕಾಮಗಾರಿಗಳನ್ನು ಬಿಜೆಪಿ ಸರ್ಕಾರ ತಡೆಹಿಡಿದೆ ಎಂದು ಆಪಾದಿಸಿದರು.

ಜಿಲ್ಲೆಯ ಹಿತ ಕಾಪಾಡುತ್ತೇವೆ: ಈ ಹಿಂದೆ 2008 ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಹಾಸನ ಜಿಲ್ಲೆಯ ಅಭಿವೃದ್ಧಿ ಯೋಜನೆಗಳಿಗೆ ತಡೆ ನೀಡಿ ರಾಜಕೀಯ ದ್ವೇಷ ಸಾಧಿಸಿದ್ದರು. ಅಂದೂ ಕೂಡ ನಾವು ಪ್ರತಿಭಟನೆ ನಡೆಸಿದ್ದೆವು. ದೇವೇಗೌಡರು ಅಂದು ಮುಖ್ಯಮಂತ್ರಿ ನಿವಾಸದೆದುರು ಧರಣಿ ನಡೆಸಿದ್ದರು ಎಂದು ನೆನಪಿಸಿದ ರೇವಣ್ಣ ಅವರು, ಹೋರಾಟ ಮಾಡಿಯಾದರೂ ಸರಿ ಹಾಸನ ಜಿಲ್ಲೆಯ ಹಿತಾಸಕ್ತಿ ಕಾಯುವುದು ಜೆಡಿಎಸ್‌ನ ಕರ್ತವ್ಯವಾಗಿದೆ. ಈ ಸರ್ಕಾರ ಹಾಸನ ಜಿಲ್ಲೆಯ ಮೇಲೆ ಎಷ್ಟು ದಿನ ದ್ವೇಷ ಸಾಧಿಸುತ್ತದೆಯೋ ನೋಡೋಣ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next