ಗುಳೇದಗುಡ್ಡ: ಪಟ್ಟಣಕ್ಕೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಡೆಗೂ ಮಂಜೂರಿಯಾಗಿದ್ದು, ಈ ಮೂಲಕ ಗುಳೇದಗುಡ್ಡ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮಗಳ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.
ಮೇ 3ರಂದು ಉದಯವಾಣಿ ದಿನಪತ್ರಿಕೆ ಇನ್ನೂ ಆರಂಭವಾಗದ ಡಿಗ್ರಿ ಕಾಲೇಜು ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಮಾಜಿ ಮುಖ್ಯಮಂತ್ರಿ, ಶಾಸಕ ಸಿದ್ದರಾಮಯ್ಯನವರ ಪ್ರಯತ್ನ, ಸರಕಾರದ ಮೇಲೆ ಅವರ ಸತತ ಒತ್ತಡದಿಂದ ಸದ್ಯ ಗುಳೇದಗುಡ್ಡಕ್ಕೆ ಉನ್ನತ ಶಿಕ್ಷಣ ಇಲಾಖೆ ಉಪಕಾರ್ಯದರ್ಶಿ ಎನ್.ಆರ್. ಎರೆಕುಪ್ಪಿ ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡಿ ಆದೇಶಿಸಿದ್ದಾರೆ. (ಸರಕಾರದ ಆದೇಶ ಸಂಖ್ಯೆ ಇಡಿ113 ಎಚ್ಪಿಸಿ,2018, ಬೆಂಗಳೂರು ದಿನಾಂಕ 20.05.2019)
ಕಳೆದ ಹಲವು ವರ್ಷಗಳಿಂದ ಗುಳೇದಗುಡ್ಡದಲ್ಲಿ ಪದವಿ ಕಾಲೇಜು ಆರಂಭಿಸುವ ಬಗ್ಗೆ ಬೇಡಿಕೆಯಿತ್ತು. ಪದವಿ ಕಾಲೇಜು ಇಲ್ಲದಿರುವುದರಿಂದ ಸಾಕಷ್ಟು ವಿದ್ಯಾರ್ಥಿಗಳು ಪದವಿ ಶಿಕ್ಷಣ ಪಡೆಯಲು ಪರದಾಡುವಂತಾಗಿತ್ತು. ಬಾದಾಮಿ, ಬಾಗಲಕೋಟೆಗೆ ತೆರಳಿ ಶಿಕ್ಷಣ ಪಡೆಯುವಂತಹ ಸ್ಥಿತಿಯಿತ್ತು. ಸದ್ಯ ಕಾಲೇಜು ಮಂಜೂರಿಯಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೊಸ ಆಶಾಕಿರಣ ಮೂಡಿದಂತಾಗಿದೆ.
ಉನ್ನತ ಶಿಕ್ಷಣ ಇಲಾಖೆ ಉಪಕಾರ್ಯದರ್ಶಿ ಅವರು ಗದಗ ಜಿಲ್ಲೆಯ ರೋಣ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸತತ ಮೂರು ವರ್ಷಗಳ ವಿದ್ಯಾರ್ಥಿಗಳ ಪ್ರವೇಶಾತಿ ಕೊರತೆಯಿರುವುದರಿಂದ ರೋಣದ ಕಾಲೇಜನ್ನು ಗುಳೇದಗುಡ್ಡಕ್ಕೆ ಸ್ಥಳಾಂತರಿಸುವ ಮೂಲಕ ಪಟ್ಟಣಕ್ಕೆ ಪದವಿ ಕಾಲೇಜು ಮಂಜೂರು ಮಾಡಿದ್ದಾರೆ.
ಬಡ ವಿದ್ಯಾರ್ಥಿಗಳಿಗೆ ಅನುಕೂಲ: ಪಟ್ಟಣದಲ್ಲಿಯೇ ಸುಮಾರು ಐದು ಪಿಯು ಕಾಲೇಜುಗಳಿವೆ. ವರ್ಷಕ್ಕೆ ಏನಿಲ್ಲ ಅಂದರೂ ಸುಮಾರು 300-400 ವಿದ್ಯಾರ್ಥಿಗಳು ಪಿಯುಸಿ ತೇರ್ಗೆಡೆ ಹೊಂದಿ ಪದವಿ ಕಲಿಯಲು ಬರುತ್ತಾರೆ. ಅವರೆಲ್ಲರಿಗೂ ಇರುವ ಒಂದೇ ಕಾಲೇಜಿನಲ್ಲಿ ಪ್ರವೇಶ ದೊರೆಯುವುದು ಕಷ್ಟವಾಗಿತ್ತು. ಹೆಚ್ಚಿನ ಡೊನೇಶನ್ ಕೊಟ್ಟು ಶಿಕ್ಷಣ ಪಡೆಯುವುದು ಕಷ್ಟವಾಗಿತ್ತು. ಸದ್ಯ ಗುಳೇದಗುಡ್ಡಕ್ಕೆ ಪದವಿ ಕಾಲೇಜು ಮಂಜೂರಿಯಾಗಿರುವುದರಿಂದ ಪಟ್ಟಣದ ಬಡ ನೇಕಾರರ ಹಾಗೂ ಪರ್ವತಿ, ಹಾನಾಪೂರ, ಹಾನಾಪೂರ ಎಸ್.ಪಿ, ತೆಗ್ಗಿ, ತಿಮ್ಮಸಾಗರ ಖಾಜಿಬೂದಿಹಾಳ, ಹಂಗರಗಿ, ಮುರುಡಿ, ಕಟಗಿನಹಳ್ಳಿ, ಪಾದನಕಟ್ಟಿ, ಲಾಯದಗುಂದಿ, ತೋಗುಣಸಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಬಡ ರೈತರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲಿದೆ.
ಮೂರು ಷರತ್ತು: ತಾತ್ಕಾಲಿಕವಾಗಿ ಗುಳೇದಗುಡ್ಡದ ಪಪೂ ಕಾಲೇಜಿನ ಕಟ್ಟದಲ್ಲಿ ಪದವಿ ಕಾಲೇಜು ಪ್ರಾರಂಭಿಸುವುದು, 2019-20ನೇ ಸಾಲಿನಲ್ಲಿ ಬಂಡವಾಳ ಲೆಕ್ಕ ಶೀರ್ಷಿಕೆಯಡಿ ಹಂಚಿಕೆಯಾಗಿರುವ ಆಯವ್ಯಯದಲ್ಲಿ ಕಟ್ಟಡ ಹಾಗೂ ಇತರೆ ಅಗತ್ಯ ಮೂಲ ಸೌಕರ್ಯಗಳ ನಕ್ಷೆ, ಅಂದಾಜು ಪ್ರತಿ ಸಿದ್ಧಪಡಿಸಿ ಸಲ್ಲಿಸುವುದು. ರೋಣ ಕಾಲೇಜಿಗೆ ಮಂಜೂರಾಗಿರುವ ಕೋರ್ಸ್, ಸಂಯೋಜನೆ, ಹುದ್ದೆಗಳನ್ನು ಸ್ಥಳಾಂತರಿಸಿರುವ ಗುಳೇದಗುಡ್ಡ ಪ್ರಥಮ ದರ್ಜೆ ಕಾಲೇಜಿಗೆ ಸ್ಥಳಾಂತರಿಸಿ ಮುಂದುವರಿಸುವುದು ಈ ಮೂರು ಷರತ್ತುಗಳನ್ನು ಹಾಕಿ ಗುಳೇದಗುಡ್ಡಕ್ಕೆ ಡಿಗ್ರಿ ಕಾಲೇಜನ್ನು ಮಂಜೂರಿ ನೀಡಲಾಗಿದೆ.