Advertisement

ಮಡಪ್ಪಾಡಿಗೆ 2 ಕೋ. ರೂ. ಮಂಜೂರು

11:56 PM Nov 05, 2020 | mahesh |

ಮಂಗಳೂರು: ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿದ್ದ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಅಭಿವೃದ್ಧಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ 2 ಕೋಟಿ ರೂ. ಮಂಜೂರು ಮಾಡಿದ್ದಾರೆ.

Advertisement

ಗುರುವಾರ ನಗರಕ್ಕೆ ಆಗಮಿಸಿದ ಸಚಿವರನ್ನು ಭೇಟಿಯಾದ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಯೋಗವು ಅನುದಾನ ಬಿಡುಗಡೆ ಮಾಡುವಂತೆ ಮನವಿ ಅರ್ಪಿಸಿದ್ದು, ಸಚಿವರು ಸ್ಥಳದಲ್ಲೇ ಅನುದಾನ ಮಂಜೂರು ಮಾಡಿದರು.

ನಿಯೋಗದಲ್ಲಿ ಸಂಘದ ಅಧ್ಯಕ್ಷ ಶ್ರೀನಿವಾಸ್‌ ನಾಯಕ್‌ ಇಂದಾಜೆ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಕಾರ್ಯಕಾರಿ ಸಮಿತಿ ಸದಸ್ಯರಾದ ಆರ್‌.ಸಿ. ಭಟ್‌, ಆತ್ಮಭೂಷಣ್‌, ಭಾಸ್ಕರ ರೈ ಕಟ್ಟ ಮತ್ತು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಇದ್ದರು.

ಮುಖ್ಯಮಂತ್ರಿಗೆ ಮನವಿ
ಇದೇ ಸಂದರ್ಭದಲ್ಲಿ ನಿಯೋಗವು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಕಂದಾಯ ಸಚಿವ ಆರ್‌. ಅಶೋಕ್‌ ಅವರನ್ನು ಭೇಟಿಯಾಗಿ ಮಡಪ್ಪಾಡಿ ಗ್ರಾಮದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ಬಿಡುಗಡೆಗೆ ಒತ್ತಾಯಿಸಿದೆ. ಅವರು ಪೂರಕ ಭರವಸೆ ನೀಡಿದ್ದಾರೆ.

ಮಡಪ್ಪಾಡಿಯಲ್ಲಿ ಜ. 5ರಂದು ನಡೆದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಗ್ರಾಮಸ್ಥರಿಂದ ಬಂದ ಅರ್ಜಿಗಳನ್ನು ಪರಿಶೀಲಿಸಿ ಗ್ರಾಮದ ಅಭಿವೃದ್ಧಿಗೆ 10 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತು.

Advertisement

ವರ್ಷಕ್ಕೊಂದು ಗ್ರಾಮ ಅಭಿವೃದ್ಧಿ ಗುರಿ
ಪತ್ರಕರ್ತರ ಗ್ರಾಮ ವಾಸ್ತವ್ಯ ಯೋಜನೆಯಲ್ಲಿ ಪ್ರತಿ ವರ್ಷ ಜಿಲ್ಲೆಯ ಹಿಂದುಳಿದ ಗ್ರಾಮವನ್ನು ಗುರುತಿಸಿ ಆ ಗ್ರಾಮಕ್ಕೆ ಸರಕಾರದ ಯೋಜನೆಗಳನ್ನು ದೊರಕಿಸಿ ಕೊಟ್ಟು ಅಭಿವೃದ್ಧಿ ಪಡಿಸುವ ಉದ್ದೇಶದಿಂದ 2019-20ನೇ ಸಾಲಿನಲ್ಲಿ ಮಡಪ್ಪಾಡಿಯನ್ನು ಆಯ್ಕೆ ಮಾಡಲಾಗಿತ್ತು. 2018-19ನೇ ಸಾಲಿನಲ್ಲಿ ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮವನ್ನು ಆಯ್ಕೆ ಮಾಡಿಕೊಂಡು 2018, ಡಿ. 24ರಂದು ಕುತ್ಲೂರು ಸರಕಾರಿ ಶಾಲೆಯಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಕೈಗೊಳ್ಳಲಾಗಿತ್ತು. ಬಳಿಕ ಆ ಗ್ರಾಮದಲ್ಲಿ ಆನೇಕ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಮುಚ್ಚುವ ಹಂತದಲ್ಲಿದ್ದ ಕುತ್ಲೂರು ಶಾಲೆ ಪತ್ರಕರ್ತರ ಪ್ರಯತ್ನದಿಂದ ಅಭಿವೃದ್ಧಿಯ ಪಥದಲ್ಲಿದೆ. ವಿದ್ಯಾರ್ಥಿಗಳ ಸಂಖ್ಯೆ 42ರಿಂದ 82ಕ್ಕೆ ಏರಿಕೆ ಆಗಿದೆ. ಮಡಪ್ಪಾಡಿ ಗ್ರಾಮವು ಅದೇ ರೀತಿಯಲ್ಲಿ ಅಭಿವೃದ್ಧಿಯಾಗಬೇಕಿದೆ ಎಂದು ಪತ್ರಕರ್ತರ ಸಂಘ ಮನವಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next