Advertisement

ಪುತ್ತೂರು ಅಂಬೇಡ್ಕರ್‌ ಶಾಲೆಗೆ ಅನುದಾನ: ಸಚಿವ ಕೋಟ ಶ್ರೀನಿವಾಸ ಪೂಜಾರಿ

08:16 PM Dec 28, 2022 | Team Udayavani |

ಸುವರ್ಣ ವಿಧಾನಸೌಧ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಡಾ|ಬಿ.ಆರ್‌.ಅಂಬೇಡ್ಕರ್‌ ವಸತಿ ಶಾಲೆಗೆ ಬರುವ ಆರ್ಥಿಕ ವರ್ಷದಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಮಂಜೂರು ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Advertisement

ಬುಧವಾರ ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಅವರು ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಪ್ರಶ್ನೆಗೆ ಉತ್ತರಿಸಿದರು.

2016-17ರಲ್ಲಿ ಮಂಜೂರಾದ ಈ ವಸತಿ ಶಾಲೆಯು ಅದೇ ವರ್ಷದಿಂದ ಬಾಡಿಗೆ ಕಟ್ಟಡದಲ್ಲಿ ಕಾರ್ಯಾರಂಭಿಸಿದೆ, ವಸತಿ ಶಾಲೆಯ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಬಜತ್ತೂರು ಗ್ರಾಮದಲ್ಲಿ 6.20 ಎಕ್ರೆ ಜಮೀನು ಮಂಜೂರಾಗಿದೆ. ಆದರೆ ಶಾಲಾ ಕಟ್ಟಡ ನಿರ್ಮಾಣಕ್ಕೆ 25 ಕೋಟಿ ರೂ. ಅಂದಾಜು ಪಟ್ಟಿಗೆ ಅನುದಾನ ಬಿಡುಗಡೆ ಮಾಡಲು ಕೋರಲಾಗಿತ್ತು.

ಆರ್ಥಿಕ ಇಲಾಖೆಯು ಪ್ರಸ್ತುತ ಆರ್ಥಿಕ ಸಂದಿಗ್ಧ ಪರಿಸ್ಥಿತಿಯಲ್ಲಿ ಅನುದಾನ ಒದಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ, ಹಾಗಾಗಿ ಮುಂದಿನ ಸಾಲಿಗೆ ಇದನ್ನು ಒದಗಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಹಾವೇರಿಯಲ್ಲಿ ಈ ಬಾರಿ ಕುಸ್ತಿಹಬ್ಬ: ಕೋಟ
ಬೆಳಗಾವಿ: ಕೆಲವು ವರ್ಷಗಳಿಂದ ನಿಂತು ಹೋಗಿರುವ ಕುಸ್ತಿ ಹಬ್ಬವನ್ನು ಮತ್ತೆ ಆರಂಭಿಸಲಾಗುವುದು ಹಾಗೂ ಈ ಬಾರಿ ಹಾವೇರಿಯಲ್ಲಿ ನಡೆಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Advertisement

ವಿಧಾನಸಭೆಯಲ್ಲಿ ಬುಧವಾರ ಕಲಘಟಗಿ ಶಾಸಕ ನಿಂಬಣ್ಣನವರ್‌ ಪ್ರಶ್ನೆಗೆ ಕ್ರೀಡಾ ಸಚಿವರ ಪರವಾಗಿ ಉತ್ತರಿಸಿದ ಅವರು, ಕುಸ್ತಿಪಟುಗಳಿಗೆ 2022-23ರ ಸಾಲಿನಲ್ಲಿ ಕುಸ್ತಿ ಹಾಗೂ ಕುಸ್ತಿಯೇತರ ಕ್ರೀಡಾಪಟುಗಳಿಗೆ ಮಾಸಾಶನವನ್ನು ಹೆಚ್ಚಿಸಲಾಗಿದೆ, ಇದರಿಂದಾಗಿ 469.24 ಲಕ್ಷ ರೂ. ಹೆಚ್ಚುವರಿ ಅನುದಾನ ಕೊರತೆಯಾಗಿದೆ. ಪ್ರಸ್ತುತ ಆರ್ಥಿಕ ಇಲಾಖೆಯಿಂದ ಹೆಚ್ಚುವರಿ ಅಗತ್ಯವಿರುವ ಈ ಮೊತ್ತವನ್ನುಮಂಜೂರು ಮಾಡಲಾಗಿದೆ. ಕುಸ್ತಿ ಪಟುಗಳಿಗೆ ಬಾಕಿ ಇರುವ ಮಾಸಾಶನವನ್ನು ಶೀಘ್ರ ಪಾವತಿಸಲಾಗುವುದು ಎಂದರು.

ಪ್ರವರ್ಗ-3ಬಿಯಲ್ಲಿ ಸೇರ್ಪಡೆಗೆ ಶಿಫಾರಸು
ಸುವರ್ಣ ವಿಧಾನಸೌಧ: ವೈಶ್ಯವಾಣಿ ಜಾತಿಯನ್ನು ಹಿಂದುಳಿದ ವರ್ಗಗಳ ಜಾತಿ ಪಟ್ಟಿಯಲ್ಲಿ ಪ್ರವರ್ಗ-3(ಬಿ) ಅಡಿ ಸೇರಿಸಬೇಕೆಂಬ ಸಲಹೆಯು ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಬುಧವಾರ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಹರತಾಳು ಹಾಲಪ್ಪ ಪ್ರಶ್ನೆಗೆ ಉತ್ತರಿಸಿದರು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧಿನಿಯಮದಂತೆ ಪ್ರವರ್ಗ-3ಬಿಯಲ್ಲಿ ಸೇರ್ಪಡೆಗೆ ಶಿಫಾರಸು ಮಾಡಿರುತ್ತದೆ ಎಂದೂ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next