ತಿ.ನರಸೀಪುರ: ಗ್ರಾಮೀಣ ಪ್ರದೇಶಗಳಲ್ಲಿರುವ ಸರ್ಕಾರಿ ಪ್ರೌಢಶಾಲೆಗಳಲ್ಲಿನ ಶೈಕ್ಷಣಿಕ ಪ್ರಗತಿಯಲ್ಲಿ ಸುಧಾರಣೆ ತರಲು ಹಾಗೂ ಶಾಲೆಗಳಿಗೆ ಸಮರ್ಪಕವಾಗಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಂಸದ ಆರ್.ಧ್ರುವನಾರಾಯಣ ಹೇಳಿದರು.
ತಾಲೂಕಿನ ಕುಪ್ಯ ಗ್ರಾಮದ ಬಳಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಹಾಗೂ ಸಂಸದರ ನಿಧಿಯ ಅನುದಾನ 80 ಲಕ್ಷ ರೂಗಳ ವೆಚ್ಚದ ಸರ್ಕಾರಿ ಪ್ರೌಢಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿ, ಹಳ್ಳಿಗಾಡಿನ ಮಕ್ಕಳಿಗೆ ಸ್ಥಳೀಯವಾಗಿ ಶಿಕ್ಷಣ ನೀಡುವ ಸರ್ಕಾರಿ ಪ್ರೌಢ ಶಾಲಾ ಕಟ್ಟಡಗಳ ನಿರ್ಮಾಣ ಮಾಡಲಿಕ್ಕೆ ಕೇಂದ್ರ ಪುರಸ್ಕೃತ ಯೋಜನೆಯಡಿ ನೆರವು ನೀಡಲಾಗುತ್ತಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ಕ್ಷೇತ್ರದ ಕುಪ್ಯ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು 80 ಲಕ್ಷ ರೂಗಳ ಅನುದಾನ ನೀಡಲಾಗಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಂಡ ಬಳಿಕೆ ಶಾಲೆ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ ಎಂದು ತಿಳಿಸಿದರು.
ವಸತಿ ಯೋಜನೆಗಳ ಜಾಗೃತಿ ಉಸ್ತುವಾರಿ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ವರುಣಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಿಗೆ ಅಂಬೇಡ್ಕರ್, ವಾಲ್ಮೀಕಿ ಹಾಗೂ ಡಿ.ದೇವರಾಜು ಅರಸು ಅಭಿವೃದ್ಧಿ ನಿಗಮಗಳ ಮೂಲಕ ಹಲವಾರು ಸಾಲ ಸೌಲಭ್ಯಗಳನ್ನು ಕಲ್ಪಿ$ಸಲಾಗಿದೆ. ಸೌಲಭ್ಯ ಸಿಗದವರಿಗೆ ಮುಂದಿನ ವರ್ಷದಲ್ಲಿ ಸಬ್ಸಿಡಿ ಸಾಲ ಕಲ್ಪಿಸುವ ಭರವಸೆ ನೀಡಿದರು.
ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಮಹದೇವಣ್ಣ, ವರುಣಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ದೇಗೌಡ, ಕುರುಬರ ಸಂಘದ ಅಧ್ಯಕ್ಷ ಟಿ.ಎಸ್.ಪ್ರಶಾಂತ್‌ಬಾಬು, ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ, ನರೇಗಾ ಸಹಾಯಕ ನಿರ್ದೇಶಕ ಡಿ.ಎಸ್.ಪ್ರೇಮ್‌ಕುಮಾರ್, ಗ್ರಾಪಂ ಅಧ್ಯಕ್ಷೆ ಜಯಲಕ್ಷಿ ಗೋವಿಂದ, ಮಾಜಿ ಅಧ್ಯಕ್ಷೆ ಭಾಗ್ಯಮ್ಮ, ಶಿವರಾಮು, ಸದಸ್ಯರಾದ ಹಿನಕಲ್ ಉದಯ್,
-ಎಂ.ರಮೇಶ, ಪಟ್ಟೇಹುಂಡಿ ಕಲ್ಪನ, ತಾಪಂ ಮಾಜಿ ಅಧ್ಯಕ್ಷ ತುಂಬಲ ಅಂದಾನಿ, ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಪುಟ್ಟಸ್ವಾಮಿ, ನೀರು ಬಳಕೆದಾರರ ಸಂಘದ ಅಧ್ಯಕ್ಷ ಜೆ.ಮಹದೇವು, ಕೃಷಿ ಬಳಗದ ಅಧ್ಯಕ್ಷ ಕುಪ್ಯ ಜಯರಾಮು, ಮುಖಂಡರಾದ ಮನ್ನೇಹುಂಡಿ ಮಹೇಶ, ಮಂಜುನಾಥ, ಗಾರೆ ಶಿವಣ್ಣ, ಮಹೇಶ, ನಾಗೇಗೌಡ, ಪತ್ರಿಕೆ ಶಿವಣ್ಣ ಹಾಗೂ ಇನ್ನಿತರರು ಹಾಜರಿದ್ದರು.