Advertisement
ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಪ್ರವಾಹ ಪೀಡಿತ ಕ್ಷೇತ್ರಗಳ ಅಭಿವೃದ್ಧಿಗೆ 25 ಕೋಟಿ ರೂ.ವಿಶೇಷ ಅನುದಾನ ಬಿಡುಗಡೆ ಮಾಡಿದ್ದು, ಪ್ರತಿಪಕ್ಷಗಳ ಶಾಸಕರ ಕ್ಷೇತ್ರಗಳಿಗೆ ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದ ಎರಡನೇ ಕಂತು ಹಣ ಬಿಡುಗಡೆ ಮಾಡದಿರುವುದು ಪ್ರತಿಪಕ್ಷಗಳ ಶಾಸಕರ ಆಕ್ರೋಶಕ್ಕೆ ಕಾರಣವಾಗಿದೆ.
Related Articles
Advertisement
ಆದರೆ, ಈಗಾಗಲೇ ಬಜೆಟ್‌ಗೆ ಒಪ್ಪಿಗೆ ದೊರೆತು ಒಂದೂವರೆ ತಿಂಗಳು ಕಳೆದರೂ ಶಾಸಕರ ಕ್ಷೇತ್ರಭಿವೃದ್ಧಿ ಅನುದಾನ ಬಿಡುಗಡೆ ಮಾಡದಿರುವುದು ಪ್ರತಿಪಕ್ಷಗಳ ಶಾಸಕರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದ 22 ಜಿಲ್ಲೆಗಳ 103 ತಾಲೂಕುಗಳಲ್ಲಿ ಪ್ರವಾಹ ಬಂದಿದ್ದು, ಅವುಗಳಲ್ಲಿ ಕೇವಲ ಆಡಳಿತ ಪಕ್ಷಗಳ ಶಾಸಕರ ಕ್ಷೇತ್ರಗಳಿಗೆ ವಿಶೇಷ ಅನುದಾನ ಬಿಡುಗಡೆ ಮಾಡಿರುವುದು ರಾಜಕೀಯವಾಗಿ ಪ್ರತಿಪಕ್ಷಗಳ ಶಾಸಕರ ಮೇಲೆ ಗೂಬೆ ಕೂರಿಸುವ ತಂತ್ರ ಅಡಗಿದೆ ಎನ್ನಲಾಗುತ್ತಿದೆ.
ಆದರೆ, ಸರ್ಕಾರದ ಮೂಲಗಳ ಪ್ರಕಾರ ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನವನ್ನು ಮೊದಲ ಕಂತಿನ ಹಣ ಖರ್ಚು ಮಾಡಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದರೆ, ಎರಡನೇ ಕಂತಿನ ಹಣ ಬಿಡುಗಡೆ ಮಾಡಲಾಗುತ್ತದೆ. ಕೆಲವು ಶಾಸಕರು ಮೊದಲ ಕಂತಿನ ಹಣವನ್ನು ಸಂಪೂರ್ಣ ಖರ್ಚು ಮಾಡಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡದಿರುವುದರಿಂದ ಬಿಡುಗಡೆ ಮಾಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಅಲ್ಲದೇ, ಈ ಕುರಿತು ಮುಖ್ಯಮಂತ್ರಿಯೇ ಶಾಸಕರಿಗೆ ಪತ್ರ ಬರೆದು ಕ್ಷೇತ್ರಾಭಿವೃದ್ಧಿ ನಿಧಿಯನ್ನು ಬಳಕೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯ ಸರ್ಕಾರ ಶಾಸಕರಿಗೆ ಬಿಡುಗಡೆ ಮಾಡುವ ಅನುದಾನದಲ್ಲಿ ತಾರತಮ್ಯ ಮಾಡಿದರೆ ಪ್ರತಿಪಕ್ಷಗಳ ಶಾಸಕರ ಕ್ಷೇತ್ರಗಳಿಗೆ ಅಭಿವೃದ್ಧಿ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ. ಬಿಜೆಪಿ ಸರ್ಕಾರ ಅನುದಾನ ಬಿಡುಗಡೆ ಮಾಡುವಲ್ಲಿಯೂ ದ್ವೇಷದ ರಾಜಕಾರಣಕ್ಕೆ ಮುಂದಾಗಿದೆ ಎಂಬ ಅಭಿಪ್ರಾಯ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ಮೂಡಿದೆ.
ಮೈತ್ರಿಯಲ್ಲಿ ನಿರ್ಲಕ್ಷ್ಯ: ರಾಜ್ಯದಲ್ಲಿ ಒಂದು ವರ್ಷ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಮಾತ್ರ ವಿಶೇಷ ಅನುದಾನ ಬಿಡುಗಡೆ ಮಾಡಿ, ಪ್ರತಿಪಕ್ಷ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಯಾವುದೇ ಅನುದಾನ ಬಿಡುಗಡೆ ಮಾಡಿರಲಿಲ್ಲ ಎಂಬ ಆರೋಪವಿದೆ. ಅದೇ ಕಾರಣಕ್ಕೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಮುಖ್ಯ ಮಂತ್ರಿ ಯಡಿಯೂರಪ್ಪ ಪಕ್ಷದ ಎಲ್ಲ ಶಾಸಕರ ಕ್ಷೇತ್ರ ಗಳಿಗೆ ವಿಶೇಷ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ದಾರೆ. ಇದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.
ಮೈತ್ರಿ ಸರ್ಕಾರದ ಅನುದಾನಕ್ಕೆ ಬ್ರೇಕ್: ಮೈತ್ರಿ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದ ಯೋಜನೆಗಳಿಗೆ ಬಿಜೆಪಿ ಸರ್ಕಾರ ಬ್ರೇಕ್ ಹಾಕಿ, ಆ ಯೋಜನೆಗಳಿಗೆ ಮೀಸಲಿಟ್ಟಿರುವ ಹಣವನ್ನು ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ವರ್ಗಾಯಿಸಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ. ಮೈತ್ರಿ ಸರ್ಕಾರ ಕೊನೇ ಗಳಿಗೆಯಲ್ಲಿ ಅನೇಕ ಯೋಜನೆಗಳಿಗೆ ನಿಯಮ ಬಾಹಿರವಾಗಿ ಅನುಮೋದನೆ ಕೊಟ್ಟಿದೆ ಎಂಬ ಕಾರಣಕ್ಕೆ ಅವುಗಳಿಗೆ ತಡೆಯೊಡ್ಡಲಾಗುತ್ತಿದೆ ಎಂದೂ ಹೇಳಲಾಗುತ್ತಿದೆ.
ರಾಜ್ಯ ಸರ್ಕಾರ ಪ್ರತಿಪಕ್ಷಗಳ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ಮಾಡಿದೆ. ಹಿಂದಿನ ಸರ್ಕಾರದ ಯೋಜನೆಗಳನ್ನು ಸ್ಥಗಿತಗೊಳಿಸಿ, ಹಣ ತಡೆ ಹಿಡಿಯಲಾಗುತ್ತಿದೆ. ಈ ರೀತಿ ತಾರತಮ್ಯ ಮಾಡಿದರೆ, ಪ್ರತಿಪಕ್ಷಗಳ ಶಾಸಕರ ಕ್ಷೇತ್ರಗಳಲ್ಲಿ ಹೇಗೆ ಕೆಲಸ ಮಾಡುವುದು? ಎಲ್ಲದಕ್ಕೂ ದ್ವೇಷದ ರಾಜಕಾರಣ ಒಳ್ಳೆಯದಲ್ಲ. -ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ ರಸ್ತೆ, ವಿದ್ಯುತ್ ಕಂಬ ಸೇರಿ ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷವಾಗಿ 25 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಕಾರ್ಪೊರೇಷನ್ ನಿಂದ 10 ಕೋಟಿ ಹಾಗೂ ಪಿಡಬ್ಲ್ಯುಡಿಯಿಂದ 15 ಕೋಟಿ ರೂ. ಶಾಸಕರು ಬಯಸುವ ಕೆಲಸ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
-ಅಭಯ್ ಪಾಟೀಲ್, ಬಿಜೆಪಿ ಶಾಸಕ ಬಿಜೆಪಿಯ ಎಲ್ಲ ಶಾಸಕರಿಗೂ 25 ಕೋಟಿ ರೂ. ವಿಶೇಷ ಅನುದಾನ ನೀಡಿದ್ದಾರೆ. ನಮ್ಮ ಕ್ಷೇತ್ರಕ್ಕೂ ವಿಶೇಷ ಅನುದಾನ ಬಿಡುಗಡೆ ಮಾಡಿದ್ದಾರೆ. ನಮಗೆ ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ.
-ಬಿ.ಸಿ. ಪಾಟೀಲ್, ಅನರ್ಹ ಶಾಸಕ * ಶಂಕರ ಪಾಗೋಜಿ