Advertisement
ಕಂದಾಯ ಇಲಾಖೆ ಅಧಿಕಾರಿಗಳ ಜತೆ ಇದಕ್ಕೆ ಸಂಬಂಧಪಟ್ಟಂತೆ ಸಿದ್ಧತಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ರಾಜ್ಯದಲ್ಲಿ ಈ ಹಿಂದೆ ಭೂಮಿ ಮಂಜೂರಾದ ರೈತರಿಗೆ ಇನ್ನೂ ಪೋಡಿ ಸಮಸ್ಯೆ ಇತ್ಯರ್ಥವಾಗಿಲ್ಲ. ಜಮೀನು ಸ್ವಾಧೀನದಲ್ಲಿ ಇದ್ದರೂ ತಮ್ಮದು ಎಂದು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಈ ಹಿಂದೆ ಭೂ ಮಂಜೂರಿ ಮಾಡುವಾಗ ಆದ ಸಮಸ್ಯೆಗಳೂ ಕಾರಣವಿರಬಹುದು. ಈ ಹಿನ್ನೆಲೆಯಲ್ಲಿ ಸಮಸ್ಯೆ ನಿವಾರಣೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು. ಸುಮಾರು 8 ತಿಂಗಳ ಪ್ರಯತ್ನದ ಬಳಿಕ ಈ ಅಭಿಯಾನ ಪ್ರಾರಂಭಕ್ಕೆ ನಿರ್ಧರಿಸಲಾಗಿದೆ ಎಂದು ಹೇಳಿದರು.ಇದಕ್ಕಾಗಿ ಕಂದಾಯ ಇಲಾಖೆ ಪ್ರತ್ಯೇಕವಾದ ಆ್ಯಪ್ ಸಿದ್ಧಪಡಿಸುತ್ತದೆ. ಇದರಲ್ಲಿ ರೈತರು ತಮ್ಮ ಬಳಿ ಮಂಜೂರಾತಿಗೆ ಸಂಬಂಧಪಟ್ಟಂತೆ ಇರುವ ಎಲ್ಲ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಇದರ ಆಧಾರದ ಮೇಲೆ ಸರಕಾರವೇ ಸರ್ವೇ ಮಾಡಿ ಸ್ವಯಂಪ್ರೇರಣೆಯಿಂದ ಪೋಡಿ ಮಾಡಿಕೊಡಲಾಗುತ್ತದೆ. ಸಂಪೂರ್ಣ ಪ್ರಕ್ರಿಯೆ ಡಿಜಿಟಲ್ ರೂಪದಲ್ಲಿ ನಡೆಯುತ್ತದೆ. ದಾಖಲೆಗಳು ಇಲ್ಲದ ಸಂದರ್ಭದಲ್ಲಿ ಗೈರು ಕಡತ ವಿಲೇವಾರಿಗೆ ಪ್ರಯತ್ನ ನಡೆಸಲಾಗುವುದು. ಈ ಪ್ರಕ್ರಿಯೆಯಿಂದ ಶೇ. 50ರಷ್ಟಾದರೂ ಸಮಸ್ಯೆ ಇತ್ಯರ್ಥವಾಗಬಹುದೆಂಬ ನಿರೀಕ್ಷೆ ಇದೆ ಎಂದರು.
1,000 ಗ್ರಾಮ ಲೆಕ್ಕಿಗರ ನೇರ ನೇಮಕಕ್ಕೆ ಸರಕಾರದಿಂದ ಒಪ್ಪಿಗೆ ಪಡೆಯಲಾಗಿದೆ. ಪರೀಕ್ಷಾ ಪ್ರಾಧಿಕಾರದ ಮೂಲಕ ನೇಮಕ ನಡೆಸಲಾಗುವುದು. 750 ಸರ್ವೇಯರ್‌ಗಳನ್ನು , 34 ಎಡಿಎಲ್‌ಆರ್‌ಗಳನ್ನು ಕೆಪಿಎಸ್‌ಸಿ ಮೂಲಕ ನೇಮಕ ಮಾಡಿಕೊಳ್ಳಲಾಗುವುದು ಎಂದರು.