Advertisement

ಅನುದಾನ ತಂದ್ರೂ ಅಭಿವೃದ್ಧಿ ಮಾಡ್ತಿಲ್ಲ

03:03 PM Jun 28, 2017 | |

ಧಾರವಾಡ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಧಾರವಾಡ ಜಿಲ್ಲೆಗೆ  ವಿವಿಧ ಯೋಜನೆಗಳಿಗಾಗಿ ಕೇಂದ್ರದಿಂದ 1500 ಕೋಟಿ ರೂ.ಗಳಿಗೂ ಅಧಿಕ ಅನುದಾನ ನೀಡಿದ್ದರೂ ರಾಜ್ಯ ಸರ್ಕಾರದ ನಿರ್ಲಕ್ಷéದಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ಸಂಸದ ಪ್ರಹ್ಲಾದ ಜೋಶಿ ಆರೋಪಿಸಿದರು. 

Advertisement

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಬಿಡುಗಡೆಯಾದ ಅನುದಾನ ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತ ಮಾಹಿತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದಿಂದ ಅವಳಿನಗರದ ಪ್ರಮುಖ ರಸ್ತೆಗಳು, ವೃತ್ತಗಳು, ರಾಷ್ಟ್ರೀಯ ಹೆದ್ದಾರಿ, ಬೈಪಾಸ್‌-ವರ್ತುಲ ರಸ್ತೆಗಳ ಅಭಿವೃದ್ಧಿಗೆ 1200 ಕೋಟಿ ರೂ. ಅನುದಾನ ಬಂದಿದೆ.

ರೈಲ್ವೆ, ಕೃಷಿ, ಹನಿ ನೀರಾವರಿ, ನಗರೀಕರಣ, ಆರೋಗ್ಯ, ಪಿಂಚಣಿ ಸೇರಿದಂತೆ  ಎಲ್ಲದಕ್ಕೂ ಕೇಂದ್ರದಿಂದ ಹಣ ತಂದರೂ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ನಿರ್ಲಕ್ಷದಿಂದ ಜಿಲ್ಲೆಯಲ್ಲಿ ಅದರಲ್ಲೂ ಹು-ಧಾ.ದಲ್ಲಿ ಸಮರ್ಪಕವಾಗಿ ಯೋಜನೆಗಳು ಅನುಷ್ಠಾನವಾಗುತ್ತಿಲ್ಲ ಎಂದು ಆರೋಪಿಸಿದರು.

ಯಾವುದಕ್ಕೆ ಎಷ್ಟು?: ಕೃಷಿ ಸಂಚಾಯಿ ಯೋಜನೆಗೆ ಯುಪಿಎ ಸರ್ಕಾರ ಇದ್ದಾಗ ಧಾರವಾಡ ಜಿಲ್ಲೆಗೆ ಬರೀ 1.95 ಕೋಟಿ ಹಣ ಬಂದಿತ್ತು. ಆದರೆ, ಮೋದಿ ಅವಧಿಯಲ್ಲಿ 14 ಕೋಟಿ ಬಂದಿದೆ. ನರೇಗಾ ಯೋಜನೆಗೆ ಯುಪಿಎ ಅವಧಿಯಲ್ಲಿ 112 ಕೋಟಿ ರೂ. ಬಂದಿತ್ತು. ಮೋದಿ ಅವಧಿಯಲ್ಲಿ 130 ಕೋಟಿ ಬಿಡುಗಡೆಯಾಗಿದೆ.

ಸ್ವತ್ಛ ಭಾರತ ಯೋಜನೆಗೆ 30 ಕೋಟಿ, ನಿರ್ಮಲ ಭಾರತ  ಯೋಜನೆಗೆ 9.53 ಕೋಟಿ ಬಂದಿದೆ. ಜಿಲ್ಲೆಯ ಮಹಾನಗರ ಪಾಲಿಕೆ, ಪಪಂ, ನಗರ ಸಭೆ ಮತ್ತು ಪುರಸಭೆಗಳಿಗೆ 14ನೇ ಹಣಕಾಸಿನಡಿ 100 ಕೋಟಿ ಬಂದಿದೆ. ಇಷ್ಟೆಲ್ಲ ಅನುದಾನ ಬಂದಿದ್ದರೂ ಈ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗುತ್ತಿದೆ ಎಂದು ದೂರಿದರು.

Advertisement

ಫಸಲ್‌ ಬಿಮಾ ಸರಿಪಡಿಸುತ್ತೇವೆ: ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಕಳೆದ ವರ್ಷದ ಮುಂಗಾರಿನಲ್ಲಿ 89 ಸಾವಿರ ರೈತರು 16 ಕೋಟಿ ರೂ. ವಿಮೆ ಹಣ ತುಂಬಿದ್ದರು. ಅವರಿಗೆ 172 ಕೋಟಿ ರೂ. ಹಣ ಬಂದಿದ್ದು, ನೇರವಾಗಿ ಅದನ್ನು ರೈತರ ಖಾತೆಗೆ ರಾಜ್ಯ ಸರ್ಕಾರ ವರ್ಗಾವಣೆ ಮಾಡಬೇಕು. ವಿಮೆ ಕಂಪನಿಯಿಂದ ಹಣ ಬಂದರೂ ರಾಜ್ಯ ಸರ್ಕಾರ ಅದನ್ನು ರೈತರಿಗೆ ನೀಡುತ್ತಿಲ್ಲ ಎಂದು ಹೇಳಿದರು. ಫಸಲ್‌ ಬಿಮಾ ಯೋಜನೆಯಲ್ಲಿ ಲೋಪದೋಷಗಳಿದ್ದರೆ ಖಂಡಿತವಾಗಿಯೂ ಅದನ್ನು ಚರ್ಚಿಸಿ ಪರಿಹರಿಸಲು ಚಿಂತನೆ ನಡೆಸಲಾಗುವುದು ಎಂದರು.

ಸಾಲಮನ್ನಾಕ್ಕಿಂತ ರೈತ ಕಲ್ಯಾಣ ಮುಖ್ಯ: ರೈತರ ಸಾಲ ಮನ್ನಾ ಸಂದರ್ಭದಲ್ಲಿ ರಾಜ್ಯ ಸರ್ಕಾರ ಬರೀ ರಾಜ್ಯಕ್ಕೆ ಮಾತ್ರ ಸೀಮಿತವಾದರೆ, ಕೇಂದ್ರ ಸರ್ಕಾರ ಇಡೀ ದೇಶದ ಸಾಲವನ್ನು ಮನ್ನಾ ಮಾಡಬೇಕಾಗುತ್ತದೆ. ಹೀಗಾಗಿ ರೈತರ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡುವುದಕ್ಕೆ ಕೇಂದ್ರ ಸರ್ಕಾರ ಹೆಚ್ಚು ಆಸಕ್ತವಾಗಿದೆ. ಸಾಲಮನ್ನಾ ವಿಚಾರದಲ್ಲಿ ಕೇಂದ್ರ ಸರ್ಕಾರ ಸದ್ಯಕ್ಕೆ ತನ್ನ ಯಾವುದೇ ನಿಲುವು ಹೇಳಿಲ್ಲ. 

ಆದರೆ, ರೈತರ ಕಲ್ಯಾಣಕ್ಕೆ ಮಾತ್ರ ಬದ್ಧವಾಗಿದೆ ಎಂದರು. ಧಾರವಾಡ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಏನು ಕೊಡುಗೆ ನೀಡಿದೆ ಎಂಬ ಮಾಹಿತಿಯನ್ನು ಸರ್ಕಾರಕ್ಕೆ 3 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಜನರಿಗೆ ನೀಡುತ್ತಿದ್ದೇನೆಯೇ ಹೊರತು ಇದು ಜಿಲ್ಲಾ ಉಸ್ತುವಾರಿ ಸಚಿವ ವಿನಯ್‌ ಕುಲಕರ್ಣಿ ಅವರ ವಿರುದ್ಧ ಅಲ್ಲವೇ ಅಲ್ಲ ಎಂದು ಜೋಶಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next