Advertisement

ಅನುದಾನವಷ್ಟೇ ಸಾಕು; ಸಚಿವ ಸ್ಥಾನಕ್ಕೆ ಆಕಾಂಕ್ಷಿಯಲ್ಲ

01:58 AM May 24, 2019 | sudhir |

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದಿನ ಎರಡು ಚುನಾವಣೆಗಳಲ್ಲಿಯೂ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಬಿಜೆಪಿ ಅಭ್ಯರ್ಥಿ ನಳಿನ್‌ ಮತ್ತೆ 3ನೇ ಬಾರಿಗೆ ಕ್ಷೇತ್ರದ ಇತಿಹಾಸದಲ್ಲಿಯೇ ದಾಖಲೆಯ ಮತಗಳ ಅಂತರದಿಂದ ಗೆಲುವು ಸಾಧಿಸಿ ಹ್ಯಾಟ್ರಿಕ್‌ ಜಯ ಸಾಧಿಸಿರುವ ಸಂಸದರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಎರಡೂವರೆ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿರುವ ನಳಿನ್‌ ಅವರು ಕ್ಷೇತ್ರದ ಮತದಾರರು ನೀಡಿರುವ ಈ ಜನಾದೇಶದ ಕುರಿತಂತೆ “ಉದಯವಾಣಿ’ಗೆ ವಿಶೇಷ ಸಂದರ್ಶನ ನೀಡಿದ್ದು, ಪೂರ್ಣ ವಿವರ ಇಲ್ಲಿದೆ.

Advertisement

– ಹ್ಯಾಟ್ರಿಕ್‌ ಗೆಲುವು ಹೇಗನಿಸುತ್ತಿದೆ ?
ಇದು ಕಾರ್ಯಕರ್ತರು ಹಾಗೂ ಮತದಾರರ ಗೆಲುವು. ಕಳೆದ 5 ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ನೀಡಿರುವ ಮಹತ್ವದ ಯೋಜನೆ ಹಾಗೂ ಕಾರ್ಯಗಳಿಗೆ ಹಾಗೂ ದ.ಕ. ಜಿಲ್ಲೆಗೆ ನೀಡಿದ ಕೊಡುಗೆಗೆ ಮತದಾರರು ನೀಡಿದ ಆಶೀರ್ವಾದದ ಗೆಲುವು. ಜತೆಗೆ ಕಳೆದ 10 ವರ್ಷದಲ್ಲಿ ದ.ಕ. ಜಿಲ್ಲೆಯಲ್ಲಿ ಸಜ್ಜನಿಕೆಯ ರಾಜಕಾರಣ ಮಾಡಿದ ನನ್ನ ಮೇಲೆ ಜಿಲ್ಲೆಯ ಜನರು ವಿಶ್ವಾಸವಿಟ್ಟಿದ್ದಾರೆ. ಆ ವಿಶ್ವಾಸಕ್ಕೆ ಸಿಕ್ಕ ಗೆಲುವು ಕೂಡ ಹೌದು.
– ಗೆಲುವಿನ ಅಂತರ ಹೆಚ್ಚ‌ಲು ಕಾರಣ ?
ಜಿಲ್ಲೆಯಲ್ಲಿ ನಾನು ನನ್ನ ಕ್ಷೇತ್ರದಲ್ಲಿ ಮಾಡಿರುವ ಒಂದಷ್ಟು ಕೆಲಸ ಕಾರ್ಯಗಳನ್ನು ನೋಡಿಕೊಂಡು ಮತದಾರರು ಮೆಚ್ಚಿ ಆಶೀರ್ವಾದ ಮಾಡಿದ್ದಾರೆ. ಜತೆಗೆ ದೇಶದಲ್ಲಿ ಮೋದಿ ಕುರಿತಾಗಿ ಇರುವ ವಿಶ್ವಾಸದ ಕಾರಣದಿಂದ ಗೆಲುವಿನ ಅಂತರದಲ್ಲಿ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇರುವುದು ಮೋದಿ ಸುನಾಮಿ ಎಂಬುದು ಸ್ಪಷ್ಟವಾಗಿದೆ.

– ನೀವು ಸಚಿವ ಸ್ಥಾನಕ್ಕೆ ಆಕಾಂಕ್ಷಿಯೇ?
ನನಗೆ ಸಚಿವ ಸ್ಥಾನದ ಬಗ್ಗೆ ಯಾವುದೇ ಆಸೆ-ಆಕಾಂಕ್ಷೆ ಇಲ್ಲ. ದ.ಕ. ಜಿಲ್ಲೆಯನ್ನು ನಂ. 1 ಸ್ಥಾನಕ್ಕೇರಿಸುವುದಷ್ಟೇ ನನ್ನಾಸೆ. ಜಿಲ್ಲೆಯ ಅಭಿವೃದ್ಧಿ ಗಾಗಿ ನನಗೆ ಅನುದಾನ ಮಾತ್ರ ಬೇಕಾಗಿರುವುದರಿಂದ ಸಚಿವ ಸ್ಥಾನ-ಹುದ್ದೆಯ ಆಕಾಂಕ್ಷೆ ನನಗಿಲ್ಲ.

– ಹಿನ್ನಡೆಯಾಗಿರುವ ಕಾಮಗಾರಿ ವೇಗ ಹೆಚ್ಚಿಸಲು ಏನು ಮಾಡುವಿರಿ?
ಕ್ಷೇತ್ರದಲ್ಲಿ ಯಾವೆಲ್ಲ ಯೋಜನೆಗಳು ಅನುಷ್ಠಾನ ಹಂತದಲ್ಲಿ ಇವೆಯೋ ಅವುಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು. ಸ್ಮಾರ್ಟ್‌ ಸಿಟಿ ಕೇಂದ್ರದ ಯೋಜನೆಯಾದರೂ ಅದನ್ನು ಅನುಷ್ಠಾನ ಮಾಡಬೇಕಾದದ್ದು ರಾಜ್ಯ ಸರಕಾರ ಮತ್ತು ಪಾಲಿಕೆ. ಹೀಗಾಗಿ ಇದು ನನ್ನ ಹಿನ್ನಡೆಯಲ್ಲ. ಪಂಪ್‌ವೆಲ್‌ ಪ್ಲೈಓವರ್‌ ತಡೆಗೆ ಕಾಂಗ್ರೆಸ್‌ ಕಾರಣವೇ ಹೊರತು ನನ್ನ ಹಿನ್ನಡೆಯಲ್ಲ. ಆದರೆ ಈ ಎಲ್ಲ ಯೋಜನೆಗಳಿಗೆ ಮುಂದಿನ ದಿನದಲ್ಲಿ ವೇಗ ನೀಡುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ.

– ಕಳೆದ ಬಾರಿ ಸಂಸದರಾಗಿ ಯೋಜನೆಗಳನ್ನು ಘೋಷಿಸಿದ್ದು ಮಾತ್ರ; ಅಭಿವೃದ್ಧಿ ಮಾಡಿಲ್ಲ ಎಂದು ವಿಪಕ್ಷಗಳ ಆರೋಪವಿದೆಯಲ್ಲವೇ?
ಕಾಂಗ್ರೆಸ್‌ನ ಎಲ್ಲ ರೀತಿಯ ಟೀಕೆಗೆ ಮತದಾರರು ಸ್ಪಷ್ಟ ಉತ್ತರವನ್ನು ಈಗಾಗಲೇ ನೀಡಿದ್ದಾರೆ. ಅವರ ಎಲ್ಲ ಟೀಕೆ-ಟಿಪ್ಪಣಿಗಳನ್ನು ನಾನು ಸ್ವಾಗತಿಸುತ್ತೇನೆ. ಆದರೆ ಜನಾಶೀರ್ವಾದದ ಮೂಲಕ ಜನರು ನನಗೆ ಬೆಂಬಲ ನೀಡಿರುವುದರಿಂದ ಜನರ ಆಶೀರ್ವಾದಕ್ಕೆ ನಾನು ತಲೆಬಾಗುತ್ತೇನೆ.

Advertisement

ಧಾರ್ಮಿಕ, ಹೆಲ್ತ್‌ ಟೂರಿಸಂಗೆ ಆದ್ಯತೆ
– ಜನತೆಗೆ ನಿಮ್ಮ ಭರವಸೆ ಏನು?
ಕಳೆದ ಆಡಳಿತ ಸಮಯದಲ್ಲಿ ಶಿಲಾನ್ಯಾಸ ನಡೆದಿರುವ ಎಲ್ಲ ಯೋಜನೆಗಳನ್ನು ಕ್ಷಿಪ್ರವಾಗಿ ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು. ರಸ್ತೆ ಅಭಿವೃದ್ಧಿ, ರೈಲ್ವೇಯಲ್ಲಿ ವಿವಿಧ ಕಾಮಗಾರಿ, ಮೀನುಗಾರಿಕಾ ಜೆಟ್ಟಿ, ಪ್ಲಾಸ್ಟಿಕ್‌ ಪಾರ್ಕ್‌ ಯೋಜನೆಗಳಿಗೆ ಶಿಲಾನ್ಯಾಸ ಮಾಡಲಾಗಿದ್ದು ಅದನ್ನು ಕ್ಷಿಪ್ರಗತಿಯಲ್ಲಿ ಮುಗಿಸಲು ಒತ್ತು ನೀಡಲಾಗುವುದು. ಇದಲ್ಲದೆ ಜಿಲ್ಲೆಗೆ ಬೇಕಾಗುವ ಹಲವು ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಲಾಗುವುದು. ಪ್ರವಾಸೋದ್ಯಮದ ಜತೆಗೆ, ಧಾರ್ಮಿಕ ಟೂರಿಸಂ, ಹೆಲ್ತ್‌ ಟೂರಿಸಂ, ಕೃಷಿ ಪೂರಕ ಯೋಜನೆ ಹಾಗೂ ಕೈಗಾರಿಕೆಗಳ ಮುಖೇನ ಜಿಲ್ಲೆಯ ಅಭಿವೃದ್ಧಿಯ ಸಂಕಲ್ಪವಿದೆ.

Advertisement

Udayavani is now on Telegram. Click here to join our channel and stay updated with the latest news.

Next