Advertisement

ಜಾತಿವಾರು ಮತ ಪಡೆಯಲು ಮತ್ತೆ “ಅನುದಾನ’ಅಸ್ತ್ರ

04:46 PM Jan 30, 2021 | Team Udayavani |

ಮಸ್ಕಿ(ವಿಶೇಷ ವರದಿ): ಉಪಚುನಾವಣೆ ಘೋಷಣೆ ಕ್ಷಣಗಣನೆ ಹಿನ್ನೆಲೆಯಲ್ಲಿ ಈಗಾಗಲೇ ಭರ್ಜರಿ ಪ್ರಚಾರಗಳು ಆರಂಭವಾಗಿವೆ. ಆದರೆ, ಇದರ ನಡುವೆಯೇ ಈಗ ಬಿಜೆಪಿ ಸರಕಾರ ಜಾತಿವಾರು ಮತಗಳಿಕೆ ಲೆಕ್ಕಚಾರದಲ್ಲಿ ಬಂಪರ್‌ ಗಿಫ್ಟ್‌ ಘೋಷಣೆ ಮಾಡಿದೆ!.

Advertisement

ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಶಿಫಾರಸ್ಸು ಮೇರೆಗೆ ಸಿಎಂ ಬಿ.ಎಸ್‌. ಯಡಿಯೂರಪ್ಪ ಇಂತಹ ಘೋಷಣೆ ಆದೇಶ ಪತ್ರದ ಮೂಲಕ ಗುರುವಾರ
ಹೊರ ಹಾಕಿದ್ದಾರೆ. ಚುನಾವಣೆ ಘೋಷಣೆ ಹೊತ್ತಲ್ಲಿ ಹೊರ ಬಿದ್ದ ಈ ಅನುದಾನ ಹಂಚಿಕೆಯ ಆದೇಶ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯತ ಮತ್ತು ಕುರುಬ ಸಮಾಜದ ಮತಗಳಿಕೆಗಾಗಿಯೇ ಮಾಡಲಾಗಿದೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಕ್ಷೇತ್ರದಲ್ಲೂ ಇದು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

ಎಲ್ಲೆಲ್ಲಿ ಅನುದಾನ?: ಮಸ್ಕಿ ಪಟ್ಟಣದಲ್ಲಿ ಹೇಮರಡ್ಡಿ ಮಲ್ಲಮ್ಮನವರ ದೇವಸ್ಥಾನ ನಿರ್ಮಾಣಕ್ಕೆ ಒಂದು ಕೋಟಿ ರೂ., ಕನಕ ಭವನ ನಿರ್ಮಾಣಕ್ಕಾಗಿ ಒಂದು
ಕೋಟಿ ಹಾಗೂ ತುರ್ವಿಹಾಳ ಗ್ರಾಮದಲ್ಲಿರುವ ಅಮೋಘ ಸಿದ್ದೇಶ್ವರ ದೇವಸ್ಥಾನ (ಕುರುಬ ಸಮುದಾಯಕ್ಕೆ ಸೇರಿದ) ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳ  ಟಿಪ್ಪಣಿ ಪತ್ರದ ಮೂಲಕ ಹೊರಡಿಸಲಾಗಿದೆ.

ಹೆಚ್ಚಿದ ಕುತೂಹಲ: ಸದ್ಯ ಮಸ್ಕಿ ಕ್ಷೇತ್ರದಲ್ಲಿ ಸಂಪೂರ್ಣ ಉಪಚುನಾವಣೆಯ ಕಾವು ಶುರುವಾಗಿದೆ. 5ಎ ಕಾಲುವೆ ಹೋರಾಟದ ಬೇಡಿಕೆಯ ಬಿಸಿಯೂ ಜೋರಾಗಿದ್ದು ಇದರ ನಡುವೆ ಸಮುದಾಯಗಳ ಮನವೊಲಿಕೆಗೆ ಈ ಮಾರ್ಗ ಹುಡುಕಲಾಗಿದೆಯೇ? ಎನ್ನುವ ಪ್ರಶ್ನೆಗಳು ಶುರುವಾಗಿವೆ. ವಿಶೇಷವಾಗಿ ಈ ಬಾರಿ ಲಿಂಗಾಯತ ಮತ್ತು ಕುರುಬ ಸಮಾಜದ ವೋಟುಗಳ ಕೇಂದ್ರೀಕರಿಸಿ ಅನುದಾನ ಘೋಷಣೆ ಮಾಡಿರುವುದು ಗಮನಾರ್ಹ ಸಂಗತಿ. ಕ್ಷೇತ್ರದಲ್ಲಿ
52 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತ ಸಮುದಾಯದ ಮತಗಳಿದ್ದರೆ, 20-25 ಸಾವಿರದಷ್ಟು ರೆಡ್ಡಿ ಲಿಂಗಾಯತ ಸಮುದಾಯದ ಮತಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಮತಗಳಿಕೆ ದೂರದೃಷ್ಠಿಯಿಂದಲೇ ಈ ಸಮುದಾಯದ ಬಹುಬೇಡಿಕೆಯಾಗಿದ್ದ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ನಿರ್ಮಾಣಕ್ಕೆ ಅಸ್ತು ಎನ್ನಲಾಗಿದೆ. ಇದಕ್ಕಾಗಿ ಒಂದು ಕೋಟಿ ರೂ. ಘೋಷಣೆ ಮಾಡಲಾಗಿದೆ. ಇನ್ನು ಕುರುಬ ಸಮುದಾಯದ ಮತಗಳು ಕೂಡ ಕ್ಷೇತ್ರದಲ್ಲಿ ಅಧಿಕವಾಗಿವೆ. ಅಂದಾಜು 25 ಸಾವಿರಕ್ಕೂ ಹೆಚ್ಚು ಮತಗಳಿದ್ದು, ಇದಕ್ಕಾಗಿ ಮಸ್ಕಿ ಪಟ್ಟಣದಲ್ಲಿ ಕನಕ ಭವನ ನಿರ್ಮಾಣ, ತುರುವಿಹಾಳದಲ್ಲಿರುವ ಅಮೋಘಸಿದ್ದೇಶ್ವರ ಮಠದ ಬಳಿಯೂ ಕನಕ ಭವನ ನಿರ್ಮಾಣಕ್ಕೆ 50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ.

Advertisement

ಚರ್ಚೆಗೆ ಗ್ರಾಸ: ವಿಶೇಷ ಪ್ರಾತಿನಿಧ್ಯದಡಿ ಮಸ್ಕಿ ಕ್ಷೇತ್ರಕ್ಕೆ ಸದ್ಯ 2.50 ಕೋಟಿ ರೂ. ಹಂಚಿಕೆ ಮಾಡಿದ ಈ ಆದೇಶ ಹೊರ ಬಿದ್ದ ಬಳಿಕ ಹಲವು ರೀತಿ ಚರ್ಚೆಗಳು ಶುರುವಾಗಿವೆ. ಇಷ್ಟು ವರ್ಷ ಬಿಡುಗಡೆಯಾಗದೇ ಇದ್ದ ಅನುದಾನ ಈಗ ಘೋಷಣೆಗಾಗಿರುವುದು ಎಲೆಕ್ಷನ್‌ ಉದ್ದೇಶಕ್ಕಾಗಿಯೇ ಎನ್ನುವ ಅಭಿಪ್ರಾಯಗಳು ಸಮಾಜಿಕ ಜಾಲತಾಣಗಳೂ ಸೇರಿ ಜನ-ಮನದಲ್ಲೂ ಹರಿದಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next