Advertisement

17 ಕೆರೆಗಳ ಭರ್ತಿಗೆ ಅನುದಾನ: ರಮೇಶ

02:57 PM May 27, 2020 | Suhan S |

ಕೋಹಳ್ಳಿ: ಅಥಣಿ ತಾಲೂಕಿನ ಪೂರ್ವ ಭಾಗದ ಪ್ರದೇಶವು ಹಲವಾರು ವರ್ಷಗಳಿಂದ ತೀವ್ರ ಬರದಿಂದ ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಶಾಶ್ವತ ಪರಿಹಾರ ಹಾಗೂ 11 ಗ್ರಾಮಗಳ 17 ಕೆರೆ ತುಂಬುವ ಯೋಜನೆ ರೂಪಿಸಿಕೊಂಡು, 2,500 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೋಳಿ ಹೇಳಿದರು.

Advertisement

ಮಂಗಳವಾರ ಗ್ರಾಮದಲ್ಲಿ ಕೊಟ್ಟಲಗಿ ಹೋಗುವ ಸಮಯದಲ್ಲಿ ಗ್ರಾಮದ ರೈತರು ಕೆರೆಗಳಿಗೆ ನೀರು ತುಂಬುವಂತೆ ನೀಡಿದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಕೋಹಳ್ಳಿ ಗ್ರಾಮದ ದೊಡ್ಡ ಕೆರೆ 500 ಎಕರೆ ವಿಸ್ತೀರ್ಣ ಪ್ರದೇಶ ಹೊಂದಿದೆ. ಆದರೆ ಕರಿಮಸೂತಿ ಏತ ನೀರಾವರಿ ಕಾಲುವೆಯೂ ಕೆರೆಯ ಕೆಳಗಡೆ ಇರುವುದರಿಂದ ಕೆರೆ ತುಂಬಲು ಆಗದ ಕಾರಣ ರೈತರಿಗೆ ತೊಂದರೆಯಾಗುತ್ತಿದೆ. 11 ಹಳ್ಳಿಗಳ ಸೇರಿ 17 ಕೆರೆ ತುಂಬುವ ಯೋಜನೆಯಲ್ಲಿ ಈಗಾಗಲೇ ಇದರ ಬಗ್ಗೆ ಸರ್ವೇ ಕಾರ್ಯ ಮುಗಿದಿದೆ. ಕೋಹಳ್ಳಿ ಕೆರೆ ಸೇರಿದಂತೆ 17 ಕೆರೆ ತುಂಬಲು ಕ್ರಮ ಕೈಗೊಳ್ಳಲಾಗಿದೆ.

ಝಂಜರವಾಡ-ಕೊಟ್ಟಲಗಿ ಏತ ನೀರಾವರಿ ಯೋಜನೆಯಲ್ಲಿ ಕರಿಮಸೂತಿ ಏತ ನೀರಾವರಿ ಯೋಜನೆಯಿಂದ ವಂಚಿತವಾದ 11 ಗ್ರಾಮಗಳ ಸೇರಿ 9,950 ಹೆಕ್ಟೇರ್‌ ಭೂಮಿ ನೀರಾವರಿಯಾಗಲಿದೆ. ಇದರಲ್ಲಿ ಕೊಟ್ಟಲಗಿ, ಕಕಮರಿ, ಕನ್ನಾಳ, ಬನ್ನೂರ, ತೆಲಸಂಗ, ಹಾಲಳ್ಳಿ ಸೇರಿದಂತೆ ಈ ಯೋಜನೆಗೆ 950 ಕೋಟಿ ರೂ. ವೆಚ್ಚದ ರೂಪರೇಷ ತಯಾರಿಸಲಾಗಿದೆ. ಇದರ ಬಗ್ಗೆ ಕೊಟ್ಟಲಗಿ ಗ್ರಾಮದಲ್ಲಿ ನಡೆಯುವ ರೈತ ಸಂಪರ್ಕ ಸಭೆಯಲ್ಲಿ ಚರ್ಚಿಸಲಾಗುವುದು. ಈ ಕಾಮಗಾರಿಯನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು.

ಅಥಣಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿದರು. ನೂರಅಹ್ಮದ್‌ ಡೊಂಗರಗಾಂವ, ಅಶೋಕ ಕೊಡಗ, ನಿಜಲಿಂಗ ಬಡಕೆ, ತುಕಾರಾಮ ಫಡತಾರೆ, ಶಂಕರ ಪೂಜಾರಿ, ಮೈಬೂಬ ಪಡಸಲಗಿ, ರಮೇಶ ಉಮರಾಣಿ, ಮಹಾದೇವ, ಕೇದಾರಿ, ಗುರಲಿಂಗ, ಶ್ರೀಶೈಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next