Advertisement

ಸದಸ್ಯರ ನಡುವೆ ಅನುದಾನದ ವಾದ-ವಿವಾದ

02:16 PM Jul 07, 2018 | Team Udayavani |

ಬೆಂಗಳೂರು: ರಾಜ್ಯ ಸರ್ಕಾರ ಹಿಂದಿನ ಬಜೆಟ್‌ನಲ್ಲಿ ಘೋಷಣೆ ಮಾಡಿದ ಅನುದಾನ ಇನ್ನೂ ಬಿಡುಗಡೆ ಮಾಡಿಲ್ಲ. ಹೊಸದಾಗಿ ಮಂಡಿಸಿದ ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪವೂ ಇಲ್ಲ. ಜತೆಗೆ ಹೊಸ ಅನುದಾನಕ್ಕೂ ಕತ್ತರಿ ಬಿದ್ದಿದ್ದು, ಇದರಿಂದ ಪಾಲಿಕೆ ಸಂಕಷ್ಟಕ್ಕೀಡಾಗಲಿದೆ. ಆದ್ದರಿಂದ ಈ ಸಂಬಂಧ ಸರ್ಕಾರದಿಂದ ಸ್ಪಷ್ಟೀಕರಣ ಪಡೆದು ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ಆಗ್ರಹಿಸಿದರು. 

Advertisement

ಪಾಲಿಕೆ ಕೇಂದ್ರ ಕಚೇರಿಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಶುಕ್ರವಾರ ನಡೆದ ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, 2016ರಲ್ಲಿ ಸರ್ಕಾರ 7,300 ಕೋಟಿ ಅನುದಾನ ಘೋಷಿಸಿತ್ತು. ಈ ಪೈಕಿ ಇನ್ನೂ ಎರಡು ಸಾವಿರ ಕೋಟಿ ರೂ. ಬಾಕಿ ಇದೆ. ಈ ಬಗ್ಗೆ ನೂತನ ಸಿಎಂ ಮಂಡಿಸಿದ ಬಜೆಟ್‌ನಲ್ಲಿ ಪ್ರಸ್ತಾಪಿಸಿಲ್ಲ. ಮತ್ತೂಂದೆಡೆ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್‌ಗೆ ಹೋಲಿಸಿದರೆ, ಈ ಬಾರಿ ಸುಮಾರು 75 ಕೋಟಿ ಅನುದಾನಕ್ಕೆ ಕತ್ತರಿ ಬಿದ್ದಿದೆ ಎಂದು ಹೇಳಿದರು.

ಈ ಮಧ್ಯೆ ಸರ್ಕಾರದ ಅನುದಾನ ನೆಚ್ಚಿಕೊಂಡು ಪಾಲಿಕೆ ವಿವಿಧ ಕಾಮಗಾರಿಗಳಿಗೆ ಕ್ರಿಯಾಯೋಜನೆ ರೂಪಿಸಿ, ಟೆಂಡರ್‌ ಪ್ರಕ್ರಿಯೆ ಕೂಡ ಪೂರ್ಣಗೊಳಿಸಿದೆ. ಒಂದು ವೇಳೆ ಸರ್ಕಾರದಿಂದ ನಿರೀಕ್ಷಿತ ಅನುದಾನ ಬರದಿದ್ದರೆ, ಪಾಲಿಕೆ ಮೇಲೆ ಹೊರೆ ಬೀಳುವ ಸಾಧ್ಯತೆ ಇದೆ. “ಆದ್ದರಿಂದ ಪಾಲಿಕೆ ಆಯುಕ್ತರು ಸರ್ಕಾರಕ್ಕೆ ಪತ್ರ ಬರೆದು, ಉತ್ತರ ಪಡೆದ ನಂತರ ಮುಂದುವರಿಯಬೇಕು. ಸಾಕಷ್ಟು ಯೋಜನೆಗಳನ್ನು ಕೈಗೆತ್ತಿಕೊಂಡು, ಆಮೇಲೆ ಪಾಲಿಕೆಯನ್ನು ಸಂಕಷ್ಟಕ್ಕೀಡು ಮಾಡಬೇಡಿ’ ಎಂದರು. 

ಜೆಡಿಎಸ್‌ ಸದಸ್ಯೆ ನೇತ್ರಾ ನಾರಾಯಣ್‌ ಮಧ್ಯಪ್ರವೇಶಿಸಿ, “ಬೆಂಗಳೂರಿಗೆ ಸಂಬಂಧಿಸಿದಂತೆ ಎತ್ತರಿಸಿದ ಮಾರ್ಗಗಳು, ಮೆಟ್ರೋ ಸೇರಿದಂತೆ ಅನೇಕ ಯೋಜನೆಗಳನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಆದರೆ, ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎನ್ನುವಂತಿದೆ ಪ್ರತಿಪಕ್ಷದ ನಾಯಕರ ಹೇಳಿಕೆ’ ಎಂದು ತಿರುಗೇಟು ನೀಡಿದರು. 

ವೆಚ್ಚ ಮಾಡಿಲ್ಲ; ಕೇಳ್ಳೋದು ಹೇಗೆ?: ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಮಾತನಾಡಿ, “ಕಳೆದೆರಡು ವರ್ಷಗಳಲ್ಲಿ ಸರ್ಕಾರ 5 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದೆ. ಉಳಿದ 2,300 ಕೋಟಿ ರೂ.ಗಳನ್ನೂ ನೀಡಲು ಸಿದ್ಧವಿದೆ. ಅಷ್ಟೇ ಅಲ್ಲ, ಕೊರತೆಬಿದ್ದರೆ ಪೂರಕ ಬಜೆಟ್‌ನಲ್ಲಿ ಅನುದಾನ ನೀಡುವುದಾಗಿ ಹೇಳಿದೆ. ಆದರೆ, ಸಮಗ್ರ ಯೋಜನಾ ವರದಿ, ಕನ್ಸಲ್ಟಂಟ್‌ ನೇಮಕ ಸೇರಿದಂತೆ ತಾಂತ್ರಿಕ ಕಾರಣಗಳಿಂದ ಎರಡು ವರ್ಷಗಳಲ್ಲಿ ಬಿಡುಗಡೆಯಾದ ಹಣವನ್ನು ಸಂಪೂರ್ಣವಾಗಿ ಖರ್ಚು ಮಾಡಿಲ್ಲ. ಹೀಗಿರುವಾಗ ಮತ್ತೆ ಹಣ ಕೇಳಿದರೆ, ಸಹಜವಾಗಿ ನಿರಾಕರಿಸುತ್ತದೆ’ ಎಂದು ಸಮಜಾಯಿಷಿ ನೀಡಿದರು.

Advertisement

ಅಷ್ಟಕ್ಕೂ ಗುರುವಾರ ಮಂಡಿಸಿರುವ ಬಜೆಟ್‌ನಲ್ಲಿ ಈ ಹಿಂದಿನ ಎಲ್ಲ ಯೋಜನೆಗಳೂ ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದ್ದರಿಂದ ಬಾಕಿ ಇರುವ 2,300 ಕೋಟಿ ರೂ. ಕೂಡ ಬಿಡುಗಡೆ ಆಗಲಿದೆ. ಇನ್ನು ಪಾಲಿಕೆಗೆ ನೀಡಿದ ಅನುದಾನ 3,645 ಕೋಟಿಯಿಂದ 3,570 ಕೋಟಿಗೆ ಸೀಮಿತವಾಗಿರುವುದು ನಿಜ ಎಂದು ಒಪ್ಪಿಕೊಂಡರು.

ವರ್ತೂರು ಹೋಬಳಿ ರಾಮಗೊಂಡನಹಳ್ಳಿಯ ಲಾಫಿಂಗ್‌ ವಾಟರ್‌ ಲೇಔಟ್‌ ಬಳಿ ಸರ್ವೆ ನಂಬರ್‌ 105 ಮತ್ತು 106ರಲ್ಲಿ ಸುಮಾರು 4.5 ಎಕರೆ ಖರಾಬು ಜಮೀನು ಇದೆ. 150-160 ಕೋಟಿ ಬೆಲೆಬಾಳುವ ಈ ಜಮೀನು ವಶಕ್ಕೆ ಪಡೆಯಲು ಪಾಲಿಕೆ ಅಧಿಕಾರಿಗಳು ಮುಂದಾಗುತ್ತಿಲ್ಲ ಯಾಕೆ ಎಂದು ಪದ್ಮನಾಭ ರೆಡ್ಡಿ ಪ್ರಶ್ನಿಸಿದರು. ದನಿಗೂಡಿಸಿದ ಉಮೇಶ್‌ ಶೆಟ್ಟಿ, ಪಾಲಿಕೆಯ ಸಾವಿರಾರು ಕೋಟಿ ರೂ. ಆಸ್ತಿಗಳು ಕಂಡವರ ಪಾಲಾಗುತ್ತಿವೆ. ಆದರೆ, ಆ ಆಸ್ತಿ ರಕ್ಷಣೆಗೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯೆ ಲಾವಣ್ಯಾ ಗಣೇಶ್‌ರೆಡ್ಡಿ, ತಮ್ಮ ವಾರ್ಡ್‌ನಲ್ಲಿ ಗಾಂಜಾ ಮಾಫಿಯಾ ಮಿತಿಮೀರಿದೆ. ಫ್ಲೈಓವರ್‌ ಕೆಳಗೆ, ಕೊಳಚೆ ಪ್ರದೇಶಗಳಲ್ಲೆಲ್ಲಾ ಯುವಕರು ಇದರ ದಾಸರಾಗುತ್ತಿದ್ದು, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸದಸ್ಯ ಕಟ್ಟೆ ಸತ್ಯನಾರಾಯಣ, ಹೇಮಲತಾ ಮತ್ತಿತರ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು. 

“ಸೇಫ್ ಸಿಟಿ ಪ್ರಾಜೆಕ್ಟ್’: “ಸುರಕ್ಷಿತ ನಗರ ಯೋಜನೆ’ (ಸೇಫ್ ಸಿಟಿ ಪ್ರಾಜೆಕ್ಟ್) ವಿಷಯ ಪ್ರಸ್ತಾಪಿಸಿದ ಪದ್ಮನಾಭ ರೆಡ್ಡಿ, ಕೇಂದ್ರವು ಈ ಯೋಜನೆ ಅಡಿ ದೇಶದಲ್ಲೇ ಅತಿ ಹೆಚ್ಚು ಅನುದಾನವನ್ನು ಬೆಂಗಳೂರಿಗೆ ನೀಡಿದೆ. ಮಹಿಳೆಯರ ರಕ್ಷಣೆಗೆ ಯೋಜನೆ ಸಹಕಾರಿ ಆಗಲಿದ್ದು, ಪೊಲೀಸ್‌ ಇಲಾಖೆಯು ಪಾಲಿಕೆ ಸದಸ್ಯರ ಸಹಯೋಗದಲ್ಲಿ ಇದನ್ನು ಅನುಷ್ಠಾನಗೊಳಿಸಬೇಕು ಎಂದರು. ಇದಕ್ಕೆ ಮಹಿಳಾ ಸದಸ್ಯರು ಸೇರಿದಂತೆ ಎಲ್ಲರೂ ದನಿಗೂಡಿಸಿದರು.

ಪ್ರತಿಕ್ರಿಯಿಸಿದ ಮಂಜುನಾಥ್‌ ಪ್ರಸಾದ್‌, ಯೋಜನೆ ಅಡಿ 667 ಕೋಟಿ ರೂ. ನೀಡಲಾಗುತ್ತಿದೆ. ಇದರಲ್ಲಿ 5,500 ಸಿಸಿಟಿವಿ, 300 ನಾಲ್ಕು ಚಕ್ರದ ವಾಹನಗಳು, ಸಾವಿರ ಬೈಕ್‌ಗಳನ್ನು ಖರೀದಿಸಲಾಗುವುದು. ಒಂದು ನಿಯಂತ್ರಣ ಕೊಠಡಿ, ನೂರು ಕಾಲೇಜುಗಳ ಬಳಿ ಪೊಲೀಸ್‌ ಚೌಕಿ ಕೂಡ ಇರಲಿವೆ. ಅನುಷ್ಠಾನ ಮಾಡುವ ಮೊದಲು ಪಾಲಿಕೆ ಸದಸ್ಯರೊಂದಿಗೆ ಪೊಲೀಸ್‌ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಮಲೋಚನೆ ನಡೆಸಲಿದ್ದಾರೆ ಎಂದರು.

ಸಹಿಗೆ ಸಾವಿರ ರೂ.!: ರಾಜಾಜಿನಗರದ ವೈದ್ಯಕೀಯ ಆರೋಗ್ಯ ಅಧಿಕಾರಿ ಮಂಜುಳಾ ಎಂಬುವವರ ವಿರುದ್ಧ ಆಕ್ರೋಶ ಹೊರಹಾಕಿದ ಮಹಿಳಾ ಸದಸ್ಯರು, ಒಂದು ಸಹಿಗೆ ಸಾವಿರ ರೂ. ಕಮೀಷನ್‌ ಕೇಳುತ್ತಿದ್ದಾರೆ ಎಂದು ಆರೋಪಿಸಿದರು. ಮೊದಲು ವಿಷಯ ಪ್ರಸ್ತಾಪಿಸಿದ ದೀಪಾ ನಾಗೇಶ್‌, ಆರೋಗ್ಯಾಧಿಕಾರಿ ಮಂಜುಳಾ ಅವರು ಜನಪ್ರತಿನಿಧಿಗಳಿಗೆ ಏಕವಚನದಲ್ಲಿ ಅಸಭ್ಯವಾಗಿ ಮಾತನಾಡುತ್ತಾರೆ.

ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಟ್ಟುಹಿಡಿದರು. ಇದಕ್ಕೆ ದನಿಗೂಡಿಸಿದ ಸದಸ್ಯೆ ಲತಾ ಕುಮಾರ್‌ ರಾಠೊಡ್‌, ಒಂದು ಸಹಿಗೆ ಸಾವಿರ ರೂ. ಕಮೀಷನ್‌ ಕೇಳುತ್ತಾರೆ. ಈ ಸಂಬಂಧ ಅನೇಕರು ನನ್ನ ಬಳಿ ದೂರು ನೀಡಿದರು ಎಂದು ಸಭೆ ಗಮನಸೆಳೆದರು. ಈ ಬಗ್ಗೆ ಅಧಿಕಾರಿಯನ್ನು ಸಭೆಗೆ ಕರೆಸಿ, ಸ್ಪಷ್ಟೀಕರಣ ಕೇಳಲಾಗುವುದು ಎಂದು ಮೇಯರ್‌ ಸಂಪತ್‌ರಾಜ್‌ ತಿಳಿಸಿದರು.

ಕುಸಿದುಬಿದ್ದ ಸದಸ್ಯೆ; ನಂತರ ಚೇತರಿಕೆ: ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ರಾಜ್‌ಕುಮಾರ್‌ ರಸ್ತೆ ವಾರ್ಡ್‌ನ ಕಾಂಗ್ರೆಸ್‌ ಸದಸ್ಯೆ (ವಾರ್ಡ್‌ ಸಂಖ್ಯೆ 106) ರೂಪಾ ಲಿಂಗೇಶ್‌ ಕುಸಿದುಬಿದ್ದ ಘಟನೆ ನಡೆಯಿತು. ಸಭೆಯಲ್ಲಿ ಬಿರುಸಿನ ಚರ್ಚೆ ನಡೆದಿತ್ತು. ಈ ಸಂದರ್ಭದಲ್ಲಿ ಚಳಿ ಮತ್ತು ಹೊಟ್ಟೆನೋವಿನಿಂದ ನಿತ್ರಾಣಗೊಂಡು ರೂಪಾ ಕುಳಿತಲ್ಲಿಯೇ ಕುಸಿದರು.

ತಕ್ಷಣ ಮೇಯರ್‌ ಸಂಪತ್‌ರಾಜ್‌, ಅಕ್ಕ-ಪಕ್ಕದಲ್ಲಿದ್ದ ಸದಸ್ಯರು ರಕ್ಷಣೆಗೆ ಬಂದರು. ಸಭೆಯಲ್ಲೇ ಅಧಿಕಾರಿಗಳ ಗ್ಯಾಲರಿಯಲ್ಲಿದ್ದ ಮುಖ್ಯ ಆರೋಗ್ಯ ಅಧಿಕಾರಿ ಡಾ.ಲೋಕೇಶ್‌ ಕೂಡ ಧಾವಿಸಿದರು. ನಂತರ ಪಾಲಿಕೆಯ ಕೊಠಡಿಯೊಂದರಲ್ಲಿ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದರು. ಕೆಲ ಹೊತ್ತಿನ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡುಬಂತು.

ಅಲ್ಲಿಂದ ಮೇಯರ್‌ ಕಾರಿನಲ್ಲೇ ರೂಪಾ ಅವರನ್ನು ಮಲ್ಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವಿವಿಧ ಪರೀಕ್ಷೆಗಳನ್ನು ನಡೆಸಿದಾಗ, ಎಲ್ಲವೂ ಸಾಮಾನ್ಯವಾಗಿ ಇರುವುದು ದೃಢಪಟ್ಟಿತು. ನಂತರ ಮನೆಗೆ ಕಳುಹಿಸಲಾಯಿತು. ಸಭಾಂಗಣದಲ್ಲಿನ ಎಸಿ, ಹೊಟ್ಟೆನೋವಿನಿಂದ ರೂಪಾ ನಿತ್ರಾಣಗೊಂಡಿದ್ದರಷ್ಟೇ. ಈಗ ಆರಾಮ ಆಗಿದ್ದಾರೆ ಎಂದು ಡಾ.ಲೋಕೇಶ್‌ ಸ್ಪಷ್ಟಪಡಿಸಿದರು.

ಸಾಲಮನ್ನಾಕ್ಕೆ ತಿಂಗಳ ಸಂಭಾವನೆ: ರೈತರ ಸಾಲಮನ್ನಾಕ್ಕೆ ಕೈಜೋಡಿಸಿದ ಬಿಬಿಎಂಪಿ ಸದಸ್ಯರು, ತಮ್ಮ ಒಂದು ತಿಂಗಳ ಸಂಭಾವನೆಯನ್ನು ಸರ್ಕಾರಕ್ಕೆ ನೀಡಲು ತೀರ್ಮಾನಿಸಿದ್ದಾರೆ. ಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಯಿತು. ಎಲ್ಲ 198 ವಾರ್ಡ್‌ ಸದಸ್ಯರು ತಮ್ಮ ಒಂದು ತಿಂಗಳ ಸಂಭಾವನೆಯನ್ನು ರೈತರ ಸಾಲಮನ್ನಾಕ್ಕೆ ವಿನಿಯೋಗಿಸಲು ಸರ್ಕಾರಕ್ಕೆ ನೀಡಲು ಸಮ್ಮತಿಸಿದರು. ಮೇಯರ್‌ ಎರಡು ತಿಂಗಳ ಸಂಭಾವನೆ ನೀಡುವುದಾಗಿ ಹೇಳಿದರು. ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಸಂಭಾವನೆ ಜತೆಗೆ ಒಂದು ಲಕ್ಷ ರೂ. ಕೊಡುವುದಾಗಿ ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next