ಕುಣಿಗಲ್: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಶಾಸಕ ಡಾ.ಎಚ್.ಡಿ.ರಂಗನಾಥ್ ಆರೋಪಿಸಿದರು.
ತಾಲೂಕಿನ ಹುಲಿಯೂರುದುರ್ಗ ಹೋಬಳಿ ಬೈಪಾಸ್ ರಸ್ತೆಯಿಂದ ತಾವರೆಮರದ ಶನೇಶ್ವರಸ್ವಾಮಿದೇವಸ್ಥಾನ ಮಾರ್ಗವಾಗಿ, ಕಂಪಲಾಪುರ ಗ್ರಾಮದವರೆಗಿನ 69 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸಮಿಶ್ರ ಸರ್ಕಾರದ ಅನುದಾನ ವಾಪಸ್: ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದಲೂ ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಿಗೆ ಯಾವುದೇ ಅನುದಾನ ನೀಡದೇ ಅನ್ಯಾಯ ಮಾಡಿದೆ. ಅನುದಾನ ನೀಡದಿದ್ದರೂ ಪರವಾಗಿಲ್ಲ. ಆದರೆ, ಕೋವಿಡ್ ನೆಪವೊಡ್ಡಿ ಈ ಹಿಂದಿನ ಸಮಿಶ್ರ ಸರಕಾರದಲ್ಲಿ ತಾಲೂಕಿನ ಅಭಿವೃದ್ಧಿಗೆ ನೀಡಿದ್ದ ಅನುದಾನವನ್ನು ತಡೆಹಿಡಿಯುವ ಮೂಲಕ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದರು.
ಅಭಿವೃದ್ಧಿಗೆ ಹೆಚ್ಚು ಒತ್ತು: ತಾಲೂಕಿನಲ್ಲಿ ಹುಲಿಯೂರುದುರ್ಗ ಅತ್ಯಂತ ದೊಡ್ಡಹೋಬಳಿಯಾಗಿದೆ. ಈ ಸಂಬಂಧ ಹುಲಿಯೂರುದುರ್ಗ ಅಭಿವೃದ್ಧಿಗೆ ಹೆಚ್ಚು ಒತ್ತುನೀಡಲಾಗುವುದು. ಹಿಂದೆ ಡಿ.ಕೆ.ಶಿವಕುಮಾರ್ ಸಚಿವರಾಗಿದ್ದಾಗ ಹುಲಿಯೂರುದುರ್ಗ ಕುಂಬಿ ಬೆಟ್ಟದ ರಸ್ತೆ ಅಭಿವೃದ್ಧಿ ಸೇರಿದಂತೆ 2 ಕೋಟಿ ರೂ. ಅನುದಾನ ಮಂಜೂರು ಮಾಡಿಕೊಟ್ಟಿದ್ದಾರೆ. ಜೊತೆಗೆ, ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈಗಸುತ್ತಮುತ್ತ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಮುಂದಾಗಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂಹೆಚ್ಚಿನ ಅನುದಾನ ತಂದು ಮತ್ತಷ್ಟು ಅಭಿವೃದ್ಧಿಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. ಗ್ರಾಪಂ ಅಧ್ಯಕ್ಷಮಂಜುನಾಥ್, ಸದಸ್ಯ ಅಲ್ಲಾಬಕಾಶ್, ಲೋಕೋಪಯೋಗಿ ಇಂಜಿನಿಯರ್ ರಾಜಣ್ಣ, ಪಿಡಿಒ ವಿನಾಯಕ್ ಮತ್ತಿತರಿದ್ದರು.
ಲಿಂಕ್‌ಕೆನಾಲ್ ಯೋಜನೆಗೆ ಒತ್ತಾಯಿಸಿ ಪದಾಯಾತ್ರೆ : ತಾಲೂಕಿನ ಬಹು ಮಹತ್ವಾಕಾಂಕ್ಷಿ ಯೋಜನೆಯಾದ ಲಿಂಕ್‌ಕೆನಾಲ್ ಯೋಜನೆ ರದ್ದುಗೊಳಿಸಿ, ಇದೇ ಅನುದಾನವನ್ನು ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಹಂಚಿಕೆ ಮಾಡಿದ್ದಾರೆ. ಈ ಬಗ್ಗೆ ಅಧಿವೇಶನದಲ್ಲಿ ಪ್ರಶ್ನೆ ಮಾಡಲಾಗಿದೆ. ಆದರೂ, ಕ್ರಮ ಕೈಗೊಂಡಿಲ್ಲ. ಹೀಗಾಗಿ ಲಿಂಕ್ ಕೆನಾಲ್ ಯೋಜನೆ ಜಾರಿಗೆ ಒತ್ತಾಯಿಸಿ ಕುಣಿಗಲ್‌ನಿಂದ ವಿಧಾನಸೌಧದವರೆಗೂ ಬೃಹತ್ ಪಾದಾಯಾತ್ರೆ ನಡೆಸಿ, ಹೋರಾಟ ಮಾಡಲು
ಸಿದ್ಧತೆ ನಡೆಸಿದ್ದೇನೆ. ಯಾವುದೇ ಕಾರಣಕ್ಕೂ ಲಿಂಕ್‌ಕೆನಾಲ್ ಯೋಜನೆ ಜಾರಿಗೊಳಿಸದೇ ವಿರಮಿಸುವುದಿಲ್ಲ. ಎಂತಹ ಹೋರಾಟಕ್ಕೂ ಸಿದ್ಧನಿದ್ದೇನೆ ಎಂದು ಎಚ್ಚರಿಸಿದರು.