Advertisement

ಅನುದಾನ ಕೇಂದ್ರ ನೀಡುವ ದಾನವಲ್ಲ

07:55 AM Oct 24, 2017 | Team Udayavani |

ಧಾರವಾಡ: “ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡುವ ಅನುದಾನ ರಾಜ್ಯಗಳ ಹಕ್ಕಾಗಿದೆಯೇ ಹೊರತು ಕೇಂದ್ರ ನೀಡುವ ದಾನದ ಹಣವಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿರುಗೇಟು ನೀಡಿದರು.

Advertisement

ಇಲ್ಲಿನ ಕೃಷಿ ವಿವಿಯಲ್ಲಿ ಹಮ್ಮಿಕೊಂಡಿದ್ದ ಬೆಳಗಾವಿ ಕಂದಾಯ ವಿಭಾಗದ ಏಳು ಜಿಲ್ಲೆಗಳ ಸೌಲಭ್ಯ ವಿತರಣಾ ಸಮಾವೇಶ ಹಾಗೂ ಮಾಹಿತಿ ಉತ್ಸವ-2017ನ್ನು ಉದ್ಘಾಟಿಸಿ ಅವರು ಮಾತ  ನಾಡಿದರು. “ಪ್ರಧಾನಿ ಮೋದಿ ಅವರು ಕೇಂದ್ರದ ವಿರುದ್ಧ ಧ್ವನಿ ಎತ್ತುವ ರಾಜ್ಯಗಳಿಗೆ ಬಿಡಿಗಾಸು ಕೊಡುವುದಿಲ್ಲ ಎಂದು ಬಾಲಿಶ ಹೇಳಿಕೆ ನೀಡಿದ್ದಾರೆ. ಅವರಿಗೆ ನಾವೆಲ್ಲ ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ ಎನ್ನುವುದರ ಅರಿವು ಇರಬೇಕಾಗುತ್ತದೆ. ದೇಶದ ಸಂವಿಧಾನವೂ ಅವರಿಗೆ ಗೊತ್ತಿದೆ ಎಂದು ನಾನು ಭಾವಿಸುತ್ತೇನೆ” ಎಂದು ಟಾಂಗ್‌ ನೀಡಿದರು.

ಕೇಂದ್ರ ಸರ್ಕಾರ ರಾಜ್ಯಗಳಿಗೆ ತನ್ನ ಅನುದಾನವನ್ನೇನೂ ಕೊಡುವುದಿಲ್ಲ. ಬದಲಿಗೆ ರಾಜ್ಯಗಳಿಂದ ಕಲೆ ಹಾಕಿರುವ ವಿವಿಧ ತೆರಿಗೆಗಳ ಹಣವೇ ಕೇಂದ್ರಕ್ಕೆ ಹೋಗಿರುತ್ತದೆ. ವಿವಿಧ ಶುಲ್ಕದ ರೂಪದಲ್ಲಿ ರಾಜ್ಯ ನೀಡಿರುವ ಹಣವನ್ನು ಮರಳಿ ಪಡೆಯುವುದು ರಾಜ್ಯಗಳ ಹಕ್ಕಾಗಿದೆಯೇ ಹೊರತು ಅದು ಕೇಂದ್ರದ ದಾನವಲ್ಲ ಎಂದು ಕಿಡಿಕಾರಿದರು.

ಅಚ್ಛೇದಿನ್‌ ಅಂಬಾನಿಗೆ: ಚುನಾವಣೆಗೆ ಮುಂಚೆ ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣ ತರುತ್ತೇನೆ, ಅಚ್ಛೇ ದಿನ್‌ ಬರುತ್ತವೆ ಎಂದೆಲ್ಲ ಭಾಷಣ ಮಾಡಿದ್ದರು. ಆದರೆ ಮೋದಿ ಪ್ರಧಾನಿಯಾದ ಮೇಲೆ ಅಚ್ಛೇ ದಿನ್‌ ಬಂದಿರುವುದು ಬರೀ ಅಂಬಾನಿ, ಅದಾನಿ, ಬಾಬಾ ರಾಮದೇವ್‌ ಮತ್ತು ಅಮಿತ್‌ ಶಾ ಪುತ್ರನಿಗೆ ಮಾತ್ರ ಎಂದು ಟೀಕಾ ಪ್ರಹಾರ ನಡೆಸಿದರು. 

ಕಾಪಿ ಮಾಡಿದ್ದು ಯಾಕೆ?: ರಾಜ್ಯದ ಕಾಂಗ್ರೆಸ್‌ ಸರ್ಕಾರ ಏನೂ ಕೆಲಸ ಮಾಡಿಲ್ಲ, ಯಾವ ಒಳ್ಳೆಯ ಯೋಜನೆಯನ್ನೂ ತಂದಿಲ್ಲ ಎಂದು ರಾಜ್ಯ ಬಿಜೆಪಿ ಮುಖಂಡರು ಟೀಕಿಸುತ್ತಿದ್ದಾರೆ. ಹಾಗಾದರೆ ಕೇಂದ್ರದ ಕೃಷಿ ಸಚಿವರೇ ರಾಜ್ಯ ಸರ್ಕಾರದ ಉತ್ತಮ ಯೋಜನೆ ಗಳನ್ನು ಯಾಕೆ ಕಾಪಿ ಮಾಡಿಕೊಂಡರು? ಎಂದು ರಾಜ್ಯ ಬಿಜೆಪಿ ನಾಯಕರನ್ನು ಸಿಎಂ ಪ್ರಶ್ನಿಸಿದರು.

Advertisement

“ದೇವ್ರು ಮಾಂಸ ತಿನ್ನಬೇಡಿ ಎಂದಿಲ್ಲ’
ಧಾರವಾಡ: ಯಾವುದೇ ದೇವರು ಮಾಂಸಾಹಾರ ಸೇವನೆ ಮಾಡಿ ದೇವಸ್ಥಾನಕ್ಕೆ ಬರಬೇಡಿ ಎಂಬುದಾಗಿ ಹೇಳಿಲ್ಲ ಎಂದು
ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕೃಷಿ ವಿವಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ಮಂಜುನಾಥಸ್ವಾಮಿ ಸನ್ನಿಧಿ ಭೇಟಿಗೆ ಮುನ್ನ ಮಾಂಸಾಹಾರ ಸೇವನೆ ಮಾಡಿದ್ದನ್ನು ಸಮರ್ಥಿಸಿಕೊಂಡರು. ಬೇಡರ ಕಣ್ಣಪ್ಪ ಕೂಡ ಮಾಂಸವನ್ನೇ ನೈವೇದ್ಯ ಮಾಡಿದ್ದ. ಮಾಂಸ ಸೇವನೆ ಮಾಡಿ ದೇವಸ್ಥಾನಕ್ಕೆ ಹೋಗುವುದು ತಪ್ಪಲ್ಲ. ಯಾವ ದೇವರೂ ಮಾಂಸ ಆಹಾರ ಸೇವನೆ ಮಾಡಬೇಡಿ ಎಂಬುದಾಗಿ ಹೇಳಿಲ್ಲ ಎಂದರು.

ರೈಲು ಮಾರ್ಗ ಉದ್ಘಾಟನೆಯಲ್ಲಿ ಪ್ರಧಾನಿ ಸಣ್ಣತನ: ಖರ್ಗೆ ಟೀಕೆ 
ಕಲಬುರಗಿ: ಕಲಬುರಗಿ-ಬೀದರ್‌ ರೈಲು ಮಾರ್ಗ ಪೂರ್ಣಗೊಳಿಸಲು ತಾವು ಎಷ್ಟು ಶ್ರಮಪಟ್ಟಿದ್ದೇವೆ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ಆದರೆ, ತಮ್ಮನ್ನು ಕಾರ್ಯಕ್ರಮದಿಂದ ದೂರವಿಡಬೇಕೆಂಬ ಉದ್ದೇಶದಿಂದ ಪ್ರಧಾನಿ ಮೋದಿ ಬೀದರ್‌ನಲ್ಲಿ ರೈಲು ಮಾರ್ಗ ಉದ್ಘಾಟಿಸುತ್ತಿದ್ದಾರೆ. ಇದು ತಾರತಮ್ಯ ನೀತಿ ತೋರಿಸುತ್ತದೆ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ವಾಗ್ಧಾಳಿ ನಡೆಸಿದರು.

ಪೊಲೀಸ್‌ ಡಿಎಎಆರ್‌ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್‌ ವಸತಿ ಗೃಹ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ತಾವು ರೈಲ್ವೆ ಸಚಿವರಾಗಿದ್ದಾಗ ಕಲಬುರಗಿ-ಬೀದರ್‌ ರೈಲು ಮಾರ್ಗದ ಕೆಲಸ ಶೇ. 80ರಷ್ಟು ಮುಗಿದಿತ್ತು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೆಲಸ ಮಾಡಿದ್ದರೆ ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಬಹುದಿತ್ತು. ಆದರೆ, ಮೂರೂವರೆ ವರ್ಷದ ನಂತರ ಅದೂ ಚುನಾವಣೆ ಹತ್ತಿರ ಬಂದಾಗ ನಮ್ಮೆಲ್ಲರನ್ನು ಮರೆತು ಉದ್ಘಾಟನೆಗೆ
ಮುಂದಾಗಿರುವುದು ಸಣ್ಣತನ ತೋರಿದಂತಾಗಿದೆ ಎಂದರು. 

ಸರ್ಕಾರದ ಸಾಧನೆ ಸುಳ್ಳೇನ್ರಿ ಶೆಟ್ಟರ್‌?
ಧಾರವಾಡ: “ಈ ರಾಜ್ಯದ ರೈತರ ಸಾಲ ಮನ್ನಾ ಮಾಡಿದ್ದು ಸುಳ್ಳೇನ್ರಿ ಜಗದೀಶ ಶೆಟ್ಟರ್‌, ಬಡವರ ಮಕ್ಕಳಿಗೆ ಹಾಲುಣಿಸುತ್ತಿದ್ದೇವೆ ಅದು ಸುಳ್ಳೇನ್ರಿ ಶೆಟ್ಟರ್‌, ರಾಜ್ಯದಲ್ಲಿ 1.70 ಲಕ್ಷ ಕೃಷಿ ಹೊಂಡ ನಿರ್ಮಾಣ ಮಾಡಿದ್ದೇವೆ, ಇದು ಸುಳ್ಳೇನ್ರಿ ಶೆಟ್ಟರ್‌, ಪ್ರತಿ ಲೀಟರ್‌ ಹಾಲಿಗೆ 5 ರೂ. ಸಹಾಯ ಧನ ಕೊಡ್ತಿದ್ದೇವೆ ಇದು ಸುಳ್ಳೇನ್ರಿ ಶೆಟ್ಟರ್‌?’ ಧಾರವಾಡದ ಕೃಷಿ ವಿವಿಯಲ್ಲಿ ಭಾನುವಾರ ನಡೆದ ಭರವಸೆ ಗಳ ಸಾಕಾರದ ಸಂಭ್ರಮ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌ ಅವರನ್ನು ತರಾಟೆಗೆ ತೆಗೆದುಕೊಂಡ ಪರಿ ಇದು. 

ರಾಜ್ಯ ಕಾಂಗ್ರೆಸ್‌ ಸರ್ಕಾರದ ಸಾಧನೆ ಶೂನ್ಯ ಎಂದು ಹೇಳುತ್ತಿರುವ ಬಿಜೆಪಿ ಮುಖಂಡರು ಒಂದೇ ವೇದಿಕೆಯಲ್ಲಿ ಚರ್ಚೆಗೆ ಬಂದರೆ ಅವರಿಗೆ ನಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ತಿಳಿಸುತ್ತೇವೆ. ಆದರೆ ಅವರಿಗೆ ನಮ್ಮ ಎದುರು ಕುಳಿತು ಮಾತನಾಡುವ ಧೈರ್ಯವಿಲ್ಲ. ಬಿಜೆಪಿಯವರು ಪಲಾಯನ ಮಾಡುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next