Advertisement

ಅನುದಾನ ಸಮರ್ಪಕ ಬಳಕೆಯಾಗಲಿ

02:01 PM Sep 29, 2018 | |

ಶಿವಮೊಗ್ಗ: ರಾಜ್ಯದಲ್ಲಿ ವಿಕಲಚೇತನರ ಕಲ್ಯಾಣಕ್ಕಾಗಿ ಅನುಷ್ಠಾನಕ್ಕೆ ಬಂದಿರುವ ಹೊಸ ಕಾಯ್ದೆಯಂತೆ ವಿವಿಧ ಇಲಾಖೆಗಳ ಅಧಿ ಕಾರಿಗಳು ಅರ್ಹ ಫಲಾನುಭವಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ರಾಜ್ಯ ಆಯುಕ್ತ ವಿ.ಎಸ್‌. ಬಸವರಾಜು ಅವರು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಪಂ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ನಾನಾ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಅವರು ಮಾತನಾಡಿದರು. ಈ ಕಾಯ್ದೆಯನ್ವಯ ವಿಕಲಚೇತನರನ್ನು ಗುರುತಿಸಲು ಸುಮಾರು 21 ಮಾದರಿಗಳನ್ನು ನಿಗದಿಪಡಿಸಲಾಗಿದೆ. ಈ ಮಾನದಂಡಗಳನ್ನು ಅನುಸರಿಸಿ ಅರ್ಹ ವಿಕಲಚೇತನರಿಗೆ ಗುರುತಿನ ಚೀಟಿ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಲು ಅಧಿಕಾರಿಗಳು ಮುಂದಾಗುವಂತೆ ಸೂಚಿಸಿದರು. ವಿಕಲಚೇತನರ ಕಲ್ಯಾಣಕ್ಕಾಗಿ ಈ ಹಿಂದೆ ಶೇ.3ರಷ್ಟು ಮೀಸಲಿಡಲು ನಿಗ ಪಡಿಸಿದ್ದ ಅನುದಾನವನ್ನು ಶೇ.5ಕ್ಕೆ ಹೆಚ್ಚಿಸಲಾಗಿದೆ. ಅದರಂತೆ ಎಲ್ಲಾ ಅಧಿಕಾರಿಗಳು ತಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ನಿಗದಿಪಡಿಸಿದ ರೀತಿಯಲ್ಲಿಯೇ ಅನುದಾನವನ್ನು ವಿಕಲಾಂಗರ ಕಲ್ಯಾಣಕ್ಕಾಗಿ ಕಾಯ್ದಿರಿಸಿ ಬಳಸುವಂತೆ ಸೂಚಿಸಿದರು.

 ವಿಕಲಚೇತನರಿಗೆ ಸೌಲತ್ತುಗಳನ್ನು ಒದಗಿಸುವುದು ವ್ಯವಸ್ಥೆಯ ಒಂದು ಭಾಗವಾಗಿದೆ. ಇದರೊಂದಿಗೆ ವಿಕಲಚೇತರಿಗಾಗಿರುವ ಯೋಜನೆಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸುವ ಕುರಿತು ಅಗತ್ಯ ಮಾಹಿತಿಯನ್ನು ಅಧಿಕಾರಿಗಳು ಹೊಂದಿರಬೇಕು. ಅಲ್ಲದೇ ವಿಕಲಚೇತನರ ಕಲ್ಯಾಣಕ್ಕಾಗಿ ನಿಯೋಜಿತರಾಗಿರುವ ಸಿಬ್ಬಂಧಿಗಳು ಯೋಜನೆಯ ಅನುಷ್ಠಾನದ ಕುರಿತು ಕಾಲಕಾಲಕ್ಕೆ ಪ್ರಗತಿ ಪರಿಶೀಲನೆ ನಡೆಸುವಂತೆ ಸೂಚಿಸಿದರು.

ಅಂಗವಿಕಲರ ಸೌಲಭ್ಯಗಳನ್ನು ಹೊಂದಲು ನಕಲಿ ಪ್ರಮಾಣಪತ್ರಗಳನ್ನು ಹೊಂದಿರುವುದನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ. ಅಂತಹ ಪ್ರಕರಣಗಳು ಕಂಡುಬಂದಲ್ಲಿ ಅಗತ್ಯ ಕಾನೂನುಕ್ರಮ ಜರುಗಿಸಲಾಗುವುದು ಎಂದ ಅವರು, ಬಸ್‌ ನಿಲ್ದಾಣಗಳಲ್ಲಿ ವ್ಹೀಲ್‌ ಚೇರ್‌, ತ್ರಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ, ಶೌಚಾಲಯ, ಬಸ್‌ಪಾಸ್‌ ಇತ್ಯಾದಿ ಸೌಲಭ್ಯಗಳನ್ನು ಒದಗಿಸಬೇಕು ಎಂದರು. 

 ತಾಲೂಕು ಮತ್ತು ಗ್ರಾಪಂ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಕಲಚೇತನರು ಅರ್ಹರಿಗೆ ಮಾಸಾಶನ, ಸ್ಕಾಲರ್‌ಶಿಫ್‌ ಕೊಡಿಸುವುದು ಮಾತ್ರವಲ್ಲ ಅವರು ಸರ್ವಾಂಗೀಣ ವಿಕಾಸ ಹೊಂದಲು ವಿವಿಧ ಇಲಾಖೆಗಳಲ್ಲಿ ಜಾರಿಯಾಗುತ್ತಿರುವ ಕಾರ್ಯಕ್ರಮಗಳ ಅನುಷ್ಠಾನ, ಈ ಸೌಲಭ್ಯಗಳು ಅರ್ಹರಿಗೆ ದೊರೆಕಿಸಿಕೊಡಲು ಯತ್ನಿಸಬೇಕು. ಜಿಲ್ಲೆಯ ಅಗತ್ಯಕ್ಕೆ ತಕ್ಕಂತೆ ವಿಕಲಾಂಗರ ಚಿಕಿತ್ಸೆಗೆ ವೈದ್ಯರು ಸೇವೆಗೆ ಇದ್ದಾರೆ. ಅವರ ಸೇವೆಯನ್ನು ಅರ್ಹರು ಬಳಸಿಕೊಳ್ಳುವಂತೆ ಮಾಹಿತಿ ನೀಡಬೇಕು ಎಂದರು.

Advertisement

ಶಾಲೆಗಳಲ್ಲಿ ದಾಖಲಾಗಿರುವ ಮೂಕ ಮತ್ತು ಕಿವುಡ ಮಕ್ಕಳು ಈ ತಜ್ಞ ವೈದ್ಯರ ಸೇವೆಯನ್ನು ಬಳಸಿಕೊಳ್ಳಲು ಅನುಕೂಲವಾಗುವಂತೆ ಶಿಕ್ಷಣ ಇಲಾಖೆಯಿಂದ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಮಾಹಿತಿ ರವಾನಿಸುವಂತೆ ಹಾಗೂ ಅರ್ಹ ಮಕ್ಕಳು ಈ ಸದವಕಾಶದ ಲಾಭ ಪಡೆದುಕೊಳ್ಳುವಂತೆ ಗಮನಹರಿಸಬೇಕೆಂದರು.

 ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಪಂಚಾಯತ್‌ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಕಲಚೇತನ ಸ್ವಯಂ ಸೇವಕರನ್ನು ನಿರ್ಲಕ್ಷಿಸುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಚೀಟಿ ನೀಡಲು ಉದಾಸೀನ ಮಾಡುತ್ತಿದ್ದಾರೆ ಎಂಬ ದೂರುಗಳು ಬರುತ್ತಿವೆ ಇವುಗಳನ್ನು ಪಿಡಿಒ.ಗಳು ಪರಿಹರಿಸಿ, ಅರ್ಹರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಸೂಚಿಸಿದರು. ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌ ಮಾತನಾಡಿ, ಒಂದೇ ಫಲಾನುಭವಿಗೆ ಬೇರೆ-ಬೇರೆ ಸಂಸ್ಥೆಗಳು ಒಂದೇ ರೀತಿಯ ಸೌಲಭ್ಯ ಒದಗಿಸುತ್ತಿರುವುದು ತರವಲ್ಲ. ಅಲ್ಲದೇ ವ್ಯಕ್ತಿಯೊಬ್ಬರಿಗೆ ಯೋಜನೆಯ ಪೂರ್ತಿ ಹಣ ಬಳಸುವುದು ಕೂಡ ಸೂಕ್ತವಲ್ಲ.
ಒಂದು ಸಂಸ್ಥೆಗೆ ಬಿಡುಗಡೆಯಾಗಿರುವ ಅಥವಾ ಕಾಯ್ದಿರಿಸಿದ ಅನುದಾನವನ್ನು ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಬಳಸಿಕೊಳ್ಳುವಂತೆ ಕ್ರಿಯಾಯೋಜನೆ ರೂಪಿಸಬೇಕೆಂದರು.

 ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶಿವರಾಮೇಗೌಡ ಕೆ., ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ರಾಜ್ಯ ಸಹಾಯಕ ಆಯುಕ್ತ ಪದ್ಮನಾಭ, ಅಪರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮುತ್ತುರಾಜ್‌, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಷಪ್ಪ ಮತ್ತು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿ ಕಾರಿ ಶಿಲ್ಪಾ ದೊಡ್ಮನಿ ಸೇರಿದಂತೆ ಸಮಾಜ ಕಲ್ಯಾಣ, ಆರೋಗ್ಯ ಮತ್ತು ಸಂಬಂಧಿಸಿದ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next