Advertisement
ಕ್ರಿಕೆಟ್, ಟೆನಿಸ್, ಫುಟ್ಬಾಲ್, ಹಾಕಿ, ಅಥ್ಲೆಟಿಕ್ಸ್… ಸೇರಿದಂತೆ ಬಹುತೇಕ ಕ್ರೀಡೆಯಲ್ಲಿ 36 ವರ್ಷ ಅನ್ನುವುದು ಕ್ರೀಡಾಪಟುವಿಗೆ ಮುಪ್ಪು ಇದ್ದಂತೆ. ಯಾವುದೇ ಸ್ಪರ್ಧೆಯಿದ್ದರೂ 18 ರಿಂದ 25 ವರ್ಷದೊಳಗಿನ ಬಿಸಿ ರಕ್ತದ ಯುವಕರ ಜತೆ ಕಾದಾಡಲು ಸಾಧ್ಯವಾಗುವುದಿಲ್ಲ. ವಯಸ್ಸು ಹೆಚ್ಚಾದಂತೆ ಆಟದ ಅಂಗಳದಲ್ಲಿ ವೇಗವಾಗಿ ಓಡಾಡಲು ದೇಹ ಸ್ಪಂದಿಸುವುದಿಲ್ಲ. ಆಗ ಅನಿವಾರ್ಯವಾಗಿ ಕ್ರೀಡಾಪಟುಗಳು ನಿವೃತ್ತಿಯ ಹಾದಿ ತುಳಿಯುತ್ತಾರೆ. ಆದರೆ ಟೆನಿಸ್ ದಿಗ್ಗಜ ರೋಜರ್ ಫೆಡರರ್‌ಗೆ ವಯಸ್ಸು ಅನ್ನುವುದು ಕೇವಲ ಅಂಕಿ ಸಂಖ್ಯೆ ಅಷ್ಟೇ, ಇದು ಆಸ್ಟ್ರೇಲಿಯಾ ಓಪನ್‌ನಲ್ಲಿ ಮತ್ತೂಮ್ಮೆ ಸಾಬೀತಾಯ್ತು!
Related Articles
ರೋಜರ್ ಫೆಡರರ್‌ಗೆ ಮೊದಲ ಗ್ರ್ಯಾನ್‌ಸ್ಲಾಮ್ ಸಿಕ್ಕಿದ್ದು, 2003ರಲ್ಲಿ. ಅಂದಿನ ದಿನಗಳಲ್ಲಿ ಬಲಿಷ್ಠ ಆಟಗಾರನಾಗಿದ್ದ ಆಸ್ಟ್ರೇಲಿಯಾದ ಮಾರ್ಕ್ ಫಿಲಿಪೌಸಿಸ್ ವಿಂಬಲ್ಡನ್‌ನಲ್ಲಿ ಫೈನಲ್ ತಲುಪಿದ್ದರು. ಆಗಷ್ಟೇ ಟೆನಿಸ್ ಜಗತ್ತಿನಲ್ಲಿ ತನ್ನ ಹೆಸರು ದಾಖಲಿಸಲು ಸಿದ್ಧನಾಗಿದ್ದ ಫೆಡರರ್ ಕೂಡ ಫೈನಲ್ ತಲುಪಿದ್ದರು.
Advertisement
ಪಂದ್ಯಕ್ಕೂ ಮುನ್ನ ಇದು ಮಾರ್ಕ್‌ಗೆ ಸುಲಭದ ತುತ್ತು ಎಂದೇ ಎಣಿಸಲಾಗಿತ್ತು. ಆದರೆ ಅಲ್ಲಿ ಆಗಿದ್ದೇ ಬೇರೆ. ಅಂದು 21 ವರ್ಷದ ಯುವಕನಾಗಿದ್ದ ಫೆಡರರ್ ಪಂದ್ಯವನ್ನು 7-6 (7-5), 6-2, 7-6(7-3) ಗೆದ್ದು ವೃತ್ತಿ ಜೀವನದಲ್ಲಿ ಮೊದಲ ಗ್ರ್ಯಾನ್‌ಸ್ಲಾಮ್ ಕಿರೀಟ ಪಡೆದರು.
20 ವರ್ಷದ ನಂತರವೂ ಅದೇ ಉತ್ಸಾಹ1998ರಲ್ಲಿ ಮೊದಲ ಬಾರಿಗೆ ಹಿರಿಯರ ವಿಭಾಗದಲ್ಲಿ ಆಡಲು ಆರಂಭಿಸಿದ ಫೆಡರರ್ ಪದಾರ್ಪಣೆ ಮಾಡಿದ ಒಂದೇ ವರ್ಷದಲ್ಲಿಯೇ ಅಗ್ರ 100 ಶ್ರೇಯೊಂಕದೊಳಗೆ ಸ್ಥಾನ ಗಿಟ್ಟಿಸಿಕೊಂಡರು. 2002 ರಿಂದ 2016ರೊಳಗೆ ಸತತವಾಗಿ ಅಗ್ರ 10 ಶ್ರೇಯಾಂಕದೊಳಗೆ ಸ್ಥಾನವನ್ನು ಕಾಯ್ದುಕೊಂಡ ಖ್ಯಾತಿ ಅವರದು. ಎಟಿಪಿ ಶ್ರೇಯಾಂಕದಲ್ಲಿ 302 ವಾರಗಳ ಕಾಲ ನಂ.1 ಸ್ಥಾನ ಕಾಯ್ದುಕೊಂಡು ಇತಿಹಾಸ ನಿರ್ಮಿಸಿದ್ದಾರೆ. ಸದ್ಯಕ್ಕೆ ಸವಾಲು ನೀಡುವವರು ಯಾರು?
ಕಳೆದ 10 ವರ್ಷಗಳಿಂದ ರೋಜರ್ ಫೆಡರರ್‌ಗೆ ಸವಾಲಾದವರೆಂದರೆ ಅದು ರಫಾಯೆಲ್ ನಡಾಲ್, ನೊವಾಕ್ ಜೊಕೊವಿಚ್, ಆ್ಯಂಡಿ ಮರ್ರೆ…ಸೇರಿದಂತೆ ಬೆರಳೆಣಿಕೆಯ ಆಟಗಾರರು ಮಾತ್ರ. ಇವರಲ್ಲಿ ಫೆಡರರ್ ಅವರನ್ನು ಹೆಚ್ಚು ಕಾಡಿಸಿದ್ದು, ನಡಾಲ್. ಇವರು 38 ಬಾರಿ ಮುಖಾಮುಖೀಯಾಗಿದ್ದಾರೆ. ಅದರಲ್ಲಿ ಫೆಡರರ್ 15 ಪಂದ್ಯ ಗೆದ್ದರೆ, 23 ಪಂದ್ಯದಲ್ಲಿ ಸೋತಿದ್ದಾರೆ. ಜೊಕೊ ವಿರುದ್ಧ 45 ಮುಖಾಮುಖೀಯಲ್ಲಿ 22ರಲ್ಲಿ ಗೆದ್ದರೆ, 23 ಬಾರಿ ಸೋಲುಂಡಿದ್ದಾರೆ. ಮರ್ರೆ ವಿರುದ್ಧ 25 ಬಾರಿ ಆಡಿದ್ದಾರೆ. ಅದರಲ್ಲಿ 14ರಲ್ಲಿ ಗೆಲುವು, 11ರಲ್ಲಿ ಸೋಲುಂಡಿದ್ದಾರೆ. ಆದರೆ ಇದೀಗ ನಡಾಲ್ ಗಾಯದಲ್ಲಿರುವುದೇ ಜಾಸ್ತಿ. ಸ್ಟಾನ್ ವಾವ್ರಿಂಕಾ ಮೊದಲಿನ ಫಾರ್ಮ್ ಉಳಿಸಿಕೊಂಡಿಲ್ಲ. ಉಳಿದಂತೆ ಜೊಕೊ, ಮರ್ರೆ ಕೂಡ ಗಾಯದಿಂದ ಬಳಲಿ ಫಾರ್ಮ್ ಕಳೆದುಕೊಂಡಿದ್ದಾರೆ. ಹೀಗಾಗಿ 2018ರಲ್ಲಿ ನಡೆಯಲಿರುವ ಫ್ರೆಂಚ್ ಓಪನ್, ವಿಂಬಲ್ಡನ್, ಯುಎಸ್ ಓಪನ್ ಗ್ರ್ಯಾನ್‌ಸ್ಲಾಮ್‌ನಲ್ಲಿ ಫೆಡರರ್‌ಗೆ ಸವಾಲು ನೀಡುವವರು ಯಾರು ಅನ್ನುವುದೇ ಪ್ರಶ್ನೆಯಾಗಿದೆ. ಪ್ರಶಸ್ತಿ ಮೊತ್ತವೇ 732 ಕೋಟಿ ರೂ.
20 ವರ್ಷದ ವೃತ್ತಿ ಜೀವನದಲ್ಲಿ ಫೆಡರರ್ ಗೆದ್ದ ಒಟ್ಟು ಪ್ರಶಸ್ತಿಯ ಸಂಖ್ಯೆ 96. ಅದರಲ್ಲಿ 20 ಗ್ರ್ಯಾನ್‌ಸ್ಲಾಮ್ ಕಿರೀಟ. ಒಟ್ಟು ಪ್ರಶಸ್ತಿಯ ಮೊತ್ತವೇ 732 ಕೋಟಿ ರೂ. ಇನ್ನು ಜಾಹೀರಾತಿನಿಂದ ಗಳಿಸಿದ ಮೊತ್ತ ಸಾವಿರಾರು ಕೋಟಿ ರೂ., ಮುಂದಿನ 3-4 ವರ್ಷಗಳ ಕಾಲ ಇದೇ ಫಾರ್ಮ್ ಉಳಿಸಿಕೊಂಡರೆ ಫೆಡರರ್ ಬಳಿ ಇರುವ ಪ್ರಶಸ್ತಿ ಮೊತ್ತವೇ ಸಾವಿರ ಕೋಟಿ ದಾಟಿದರೂ ಅಚ್ಚರಿ ಇಲ್ಲ. ಮಂಜು ಮಳಗುಳಿ