Advertisement

ಅಜ್ಜನಿಂದಲೇ ಮೊಮ್ಮಗನ ಕಿಡ್ನಾಪ್‌ : ಎಸ್ಪಿ ಪನ್ನೇಕರ್‌

04:58 PM Aug 23, 2022 | Team Udayavani |

ಕಾರವಾರ: ಜಿಲ್ಲೆಯ ಭಟ್ಕಳದಲ್ಲಿ ಶನಿವಾರ ಸಂಜೆ ನಡೆದಿದ್ದ ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ. ಹಣದ ವಿಚಾರವಾಗಿ ಕೌಟುಂಬಿಕ ಕಲಹದಿಂದಾಗಿ ಮೊಮ್ಮಗನನ್ನೇ ಅಜ್ಜ ಅಪಹರಿಸಿದ್ದ ಎನ್ನುವುದು ಪೊಲೀಸ್‌ ತನಿಖೆಯಲ್ಲಿ ಬಯಲಾಗಿದೆ ಎಂದು ಎಸ್ಪಿ ಡಾ| ಸುಮನ್‌ ಪನ್ನೇಕರ್‌ ತಿಳಿಸಿದ್ದಾರೆ.

Advertisement

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ. 20ರಂದು ಸಂಜೆ ಅಂಗಡಿಗೆ ತೆರಳಿದ್ದ ಭಟ್ಕಳ ಆಜಾದ್‌ ನಗರದ ಎಂಟು ವರ್ಷದ ಬಾಲಕನೊಬ್ಬನನ್ನು ಅಪಹರಣ ಮಾಡಲಾಗಿತ್ತು. ಈ ಸಂಬಂಧ ಭಟ್ಕಳ ನಗರ ಠಾಣೆಯಲ್ಲಿ ಮಧ್ಯರಾತ್ರಿ ಪ್ರಕರಣ ಸಹ ದಾಖಲಾಗಿತ್ತು. ಬಾಲಕನ ಹುಡುಕಾಟ ನಡೆಸಿದ್ದ ಪೊಲೀಸರು ಸುರಕ್ಷಿತವಾಗಿ ಕರೆತರಲು ಐದು ತಂಡ ರಚಿಸಿದ್ದರು. ಸಿಸಿ ಟಿವಿ ದೃಶ್ಯಾವಳಿಯ ನೆರವಿನಿಂದ ಹಾಗೂ ಕುಟುಂಬದವರನ್ನು ವಿಚಾರಣೆ ನಡೆಸಿದಾಗ ಹಣದ ವ್ಯವಹಾರವೇ ಅಪಹರಣಕ್ಕೆ ಕಾರಣ ಎಂಬುದು ತನಿಖೆಯಲ್ಲಿ ಕಂಡು ಬಂದಿದೆ.

ಬಾಲಕನನ್ನು ಮಾರುತಿ ಸುಜುಕಿ ಇಕೋ ವಾಹನದಲ್ಲಿ ಆಜಾದ್‌ ನಗರದಿಂದ ಅಪಹರಿಸಿ, ಬಳಿಕ ಮತ್ತೂಂದು ವಾಹನ ಬಳಸಿ ಬಾಲಕನನ್ನು ಗೋವಾಕ್ಕೆ ಕರೆದೊಯ್ಯಲಾಗಿತ್ತು. ಸೋಮವಾರ ಬೆಳಗ್ಗೆ ಅಲ್ಲಿನ ಕಲಂಗುಟ್‌ ಬೀಚ್‌ನ ಕೋಣರಯೊಂದರಲ್ಲಿ ಒಬ್ಬ ಆರೋಪಿ ಅನೀಶ್‌ ಎಂಬಾತನೊಂದಿಗೆ ಪತ್ತೆಯಾಗಿದ್ದಾನೆ.

ಬಾಲಕನ ತಾಯಿಯ ಸೋದರ ಮಾವ (ಬಾಲಕನ ಅಜ್ಜ), ಸೌದಿ ಅರೇಬಿಯಾದಲ್ಲಿರುವ ಇನಾಯತ್‌ ಉಲ್ಲಾ ಎಂಬಾತನ ಸೂಚನೆಯ ಮೇರೆಗೆ ಈ ಅಪಹರಣ ನಡೆದಿದೆ. ಐವರು ಆರೋಪಿಗಳು ಇದರಲ್ಲಿ ಭಾಗಿಯಾಗಿದ್ದರು ಎಂಬುದು ತಿಳಿದು ಬಂದಿದೆ.

ಈ ಸಂಬಂಧ ಒಬ್ಬನನ್ನು ಬಂಧಿಸಲಾಗಿದ್ದು, ನಾಲ್ವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಎಸ್ಪಿ ಸುಮನ್‌ ತಿಳಿಸಿದರು. ಬಾಲಕನ ತಂದೆ ಮತ್ತು ಅಜ್ಜನಿಗೆ ಹಣದ ವ್ಯವಹಾರವಿತ್ತು. ಈ ಕಾರಣಕ್ಕಾಗಿ ಬಾಲಕನನ್ನು ಅಪಹರಣ ಮಾಡಿಸಲಾಗಿತ್ತು.

Advertisement

ಬಾಲಕನಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಸುರಕ್ಷಿತವಾಗಿ ಕರೆತರಲಾಗಿದೆ ಎಂದ ಅವರು, ಈ ಅಪಹರಣದಿಂದ ಭಟ್ಕಳದ ಜನತೆ ಅಥವಾ ಜಿಲ್ಲೆಯ ಜನತೆ ಭಯಪಡುವಂಥದ್ದೇನೂ ಇಲ್ಲ. ಇದು ಕೌಟುಂಬಿಕ ಕಲಹದಿಂದ ನಡೆದ ಅಪಹರಣವಷ್ಟೇ ಎಂದು ಎಸ್ಪಿ ಹೇಳಿದರು. ಅಪಹರಣದ ಪ್ರಕರಣದಲ್ಲಿ ನಾಲ್ವರ ಹುಡುಕಾಟ ನಡೆದಿದೆ ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next