ಬೆಳ್ತಂಗಡಿ: ವರ್ಷದ ಹಿಂದೆ 2022ರ ಜುಲೈ 23ರಂದು ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ಕೆರೆಕೋಡಿಯಲ್ಲಿ ತನ್ನ ಅಜ್ಜಿಯನ್ನೇ ಕಟ್ಟಿಗೆಯಿಂದ ಬಡಿದು ಕೊಂದಿದ್ದ ಆರೋಪಿ, ಜೈಲಿನಲ್ಲಿದ್ಧಾತ ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ಜೂ. 7ರಂದು ನಡೆದಿದೆ.
ಬೆಳ್ತಂಗಡಿ ತಾಲೂಕು ಕಡಿರುದ್ಯಾವರ ಗ್ರಾಮದ ಕಾನರ್ಪ ಮನೆ ನಿವಾಸಿ ಅಶೋಕ ಗೌಡ (35) ಮೃತಪಟ್ಟಿರುವ ವಿಚಾರಣಾಧೀನ ಕೈದಿ. ಈತ ತನ್ನ ಅಜ್ಜಿ ಅಕ್ಕು ಗೌಡ (85) ಅವರನ್ನು ಕಟ್ಟಿಗೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿ ಚಿನ್ನಾಭರಣಗಳನ್ನು ದರೋಡೆ ಮಾಡಿ ಪರಾರಿ ಯಾಗಿದ್ದ.
ಘಟನೆಯ ಬಳಿಕದ ತನಿಖೆಯಲ್ಲಿ ಪತ್ತೆ ಹಚ್ಚಿದಂತೆ ಆರೋಪಿಯನ್ನು ಬಂಧಿಸಿದ್ದ ಪೊಲೀಸರು ಆತನ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ವಿಪರೀತ ಮದ್ಯ ಸೇವನೆ ಹಾಗೂ ದುಶ್ಚಟದಿಂದ ಆತ ಹಣದ ಕೊರತೆಯಿಂದ ಮಾನಸಿಕ ಅಸ್ವಸ್ಥತೆಗೊಳಗಾಗಿದ್ದ. ಅಜ್ಜಿ ಮನೆಗೆ ಹೋಗಿದ್ದಾಗ ಅಜ್ಜಿಯ ಮೈಮೇಲಿದ್ದ ಚಿನ್ನಾಭರಣದ ಆಸೆಗಾಗಿ ಕಟ್ಟಿಗೆಯ ತುಂಡಿನಿಂದ ಹಲ್ಲೆ ನಡೆಸಿದ್ದ. ಇದರಿಂದ ಗಾಯಗೊಂಡಿದ್ದ ಅಜ್ಜಿ ಅಲ್ಲೇ ಪ್ರಾಣ ಬಿಟ್ಟಿದ್ದರು. ಸಂಜೆಯ ವೇಳೆ ಮನೆಯ ಇತರರು ಮನೆಗೆ ಬಂದ ವೇಳೆ ಈ ಕೃತ್ಯ ಬೆಳಕಿಗೆ ಬಂದಿತ್ತು. ಬಳಿಕ ಈ ಕೃತ್ಯ ಅಶೋಕ ಗೌಡನೇ ಮಾಡಿದ್ದೆಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದು ಆತನನ್ನು ಬಂಧಿಸಿದ್ದ ಪೊಲೀಸರು ವಿಚಾರಣೆ ನಡೆಸಿ ಮಂಗಳೂರು ಸಬ್ ಜೈಲಿಗೆ ಕಳುಹಿಸಿದ್ದರು.
ಆರೋಪಿ ಅಶೋಕ ಗೌಡ ಕ್ಷಯರೋಗ ಹಾಗೂ ಮಧುಮೇಹ ಮತ್ತು ಟಿ.ಬಿ. ಸಮಸ್ಯೆಯಿಂದ ಬಳಲುತ್ತಿದ್ದ. ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಆತ ಜೂನ್ 7ರಂದು ಬೆಳಗ್ಗೆ ಮೃತಪಟ್ಟಿದ್ದಾನೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.