Advertisement
“ನಾನು ಕಾರ್ಟೂನ್ ನೋಡಲೇಬೇಕು! ಅಕ್ಕ ಅಂತಾ ಯಾವಾಗ್ಲೂ ಅನ್ಯಾಯ ಸಹಿಸೋಕೆ ಆಗಲ್ಲ. ಇವತ್ತು ನೀನು ಏನಾದರೂ ತರಲೆ ಮಾಡಿದ್ರೆ ಸುಮ್ಮನಿರಲ್ಲ’ ಎಚ್ಚರಿಸಿದ ಮೋನು. ಸೋಫಾದ ಮೇಲೆ ಕುಳಿತಿದ್ದ ಸೋನು ಮುಖ ಊದಿಸಿ, ದೊಡ್ಡದಾಗಿ ಕಣ್ಣು ಬಿಟ್ಟು “ಅರೆ, ನನಗೆ ಫುಟ್‌ಬಾಲ್ ಮ್ಯಾಚ್ ಬೇಕೇ ಬೇಕು. ನೀನು ಅದೇನು ಮಾಡ್ತಾ ನೋಡೇ ಬಿಡ್ತೀನಿ. ಸಣ್ಣವನು ಅಂತ ಸುಮ್ಮನಿದ್ರೆ ತಲೆ ಮೇಲೆ ಹತ್ತಿ ಕುಣೀತೀಯಾ’ ಎಂದು ಹೆದರಿಸಿದಳು!
Related Articles
Advertisement
ಆದರೆ ಅಜ್ಜ, ರಿಮೋಟ್‌ಅನ್ನು ಯಾರಿಗೂ ಕೊಡದೆ ಟಿ.ವಿ ಆಫ್ ಮಾಡಿ “ನಿಮ್ಮಿಬ್ಬರಲ್ಲಿ ಜಗಳಕ್ಕೆ ಕಾರಣವಾಗುವುದಾದರೆ ಈ ರಿಮೋಟ್ ದೂರ ಇಡೋಣ. ಸುಮ್ಮನೆ ಗಲಾಟೆ ಮಾಡದೇ ನಿಮ್ಮಿಷ್ಟದ ಕತೆಪುಸ್ತಕ ಓದಿ, ಆಟ ಆಡಿ, ಚಿತ್ರ ಬಿಡಿಸಿ. ಯಾರಿಗೂ ಬೇಸರ ಬೇಡ. ಹಾಗೆ ಮಾಡಿದರೆ ದೊಡ್ಡವರು, ಸಣ್ಣವರು ಅನ್ನೋ ವ್ಯತ್ಯಾಸವೇ ಇರುವುದಿಲ್ಲ’ ಎಂದು ತಮ್ಮ ರೂಮಿಗೆ ನಡೆದೇ ಬಿಟ್ಟರು. ಮಕ್ಕಳಿಗೆ ಒಂಥರಾ ಶಾಕ್! ಅಂತೂ ಆ ದಿನದ ಟಿ.ವಿ ಟೈಮ್ ವ್ಯರ್ಥವಾಗಿ ಹೋಯಿತು. ಅರ್ಧ ಗಂಟೆಯಾದರೂ ಸಿಗುತ್ತಿದ್ದ ಕಾರ್ಟೂನ್/ ಮ್ಯಾಚ್‌ಯಾವುದೂ ಇಲ್ಲ. ಮೋನು- ಸೋನುಗಾದ ದುಃಖ ಅಷ್ಟಿಷ್ಟಲ್ಲ. ಇಬ್ಬರಿಗೂ ಮತ್ತೂಬ್ಬರ ಮೇಲೆ ಅಸಮಾಧಾನ.
ಮರುದಿನ ಎಂದಿನಂತೆ ಸೋನು- ಮೋನು ಶಾಲೆಗೆ ಹೋಗಿ ಬಂದರು. ಸಂಜೆ ಆಟ, ಹೋಂವರ್ಕ್ ಮುಗಿಸಿದ್ದಾಯ್ತು. ಎಂಟುಗಂಟೆಗೆ ಟಿ.ವಿ ಹಾಕೋಣ ಎಂದರೆ ರಿಮೋಟ್ ಅಜ್ಜನ ಹತ್ತಿರವಿತ್ತು. ಧೈರ್ಯ ಮಾಡಿ ಕೇಳಿದ್ದಕ್ಕೆ ಸಿಕ್ಕ ಉತ್ತರ “ಗಲಾಟೆ ಮಾಡದೇ ನೋಡುವುದಾದರೆ ಟಿ.ವಿ ಹಾಕಬಹುದು. ಇಬ್ಬರಲ್ಲಿ ಯಾರೇ ಗಲಾಟೆ ಮಾಡಿದರೂ ಟಿ.ವಿ ಆಫ್ ಮಾಡ್ತೀನಿ. ಈಗ ಯಾರು ಯಾವ ಕಾರ್ಯಕ್ರಮ ಮೊದಲು ನೋಡ್ತೀರಾ ಅಂತ ಮೊದಲೇ ನಿರ್ಧರಿಸಿ’. ಅಜ್ಜನ ಮಾತು ಕೇಳಿ ಸೋನು- ಮೋನುಗೀಗ ಸಂಕಟ! ಆದರೂ ಟಿ.ವಿ ಟೈಮ್ ವೇಸ್ಟ್ ಆಗುವುದನ್ನು ಸಹಿಸಲಾಗಲಿಲ್ಲ. ಇಬ್ಬರೂ ಮುಖ ಮುಖ ನೋಡಿಕೊಂಡರು.
ಕಡೆಗೆ ಸೋನು “ಇವತ್ತು ನಿನ್ನ ಕಾರ್ಟೂನ್ ನೋಡೋಣ, ನಾಳೆ ನನ್ನ ಜತೆ ಪೂರ್ತಿ ಫುಟ್‌ಬಾಲ್ ಮ್ಯಾಚ್ ನೋಡ್ತೀಯಾ?’ ಎಂದು ಕೇಳಿದಳು. ಮೋನು ಖುಷಿಯಿಂದ “ಆಯ್ತು ಆಯ್ತು’ ಎಂದು ಕುಣಿಯುತ್ತಲೇ ಒಪ್ಪಿಕೊಂಡ. ಈಗ ಒಂದು ದಿನ ಮೋನು ಪೂರ್ತಿ ಕಾಟೂìನು ನೋಡಿದರೆ, ನಂತರದ ದಿನ ಸೋನು ಪೂರ್ತಿ ಫುಟ್‌ಬಾಲ್ ಮ್ಯಾಚ್ ನೋಡುತ್ತಾಳೆ. ಈಗೀಗ ಮೋನುಗೆ ಫುಟ್‌ಬಾಲ್ ಆಟದ ಬಗ್ಗೆ ಆಸಕ್ತಿ ಬಂದಿದ್ದರೆ, ಸೋನುಗೆ ಕಾಟೂìನ್ ಇಷ್ಟವಾಗುತ್ತಿದೆ. ಒಟ್ಟಿನಲ್ಲಿ ಅಜ್ಜನ ತೀರ್ಪಿನಿಂದ ಮನೆಯಲ್ಲಿ ಶಾಂತಿ ನೆಲೆಸಿರುವುದಷ್ಟೇ ಅಲ್ಲದೆ ಅಕ್ಕ ತಮ್ಮಂದಿರ ನಡುವೆ ದೋಸ್ತಿಯೂ ಬೆಳೆದಿದೆ.
ಡಾ.ಕೆ.ಎಸ್.ಚೈತ್ರಾ