ಶಿರ್ವ:ಮೊಮ್ಮಕ್ಕಳಿಗೆ ಅಜ್ಜಿ ತಾತಂದಿರು ನೀಡುವ ಪ್ರೀತಿ, ಮಮತೆ, ಅವರು ಕಲಿಸುವ ಮೌಲ್ಯಗಳು ಮುಂದಿನ ಜೀವನಕ್ಕೆ ದಾರಿದೀಪವಾಗುತ್ತವೆ. ಹಿರಿಯರು ಕುಟುಂಬಕ್ಕೆ ದೀಪ ಸ್ತಂಭವಿದ್ದಂತೆ, ಅದು ಇಡೀ ಕುಟುಂಬಕ್ಕೆ ಬೆಳಕನ್ನು ನೀಡಿ ಮುಂದಿನ ದಾರಿಯನ್ನು ತೋರಿಸುತ್ತದೆ ಎಂದು ಶಿರ್ವಸಂತ ಮೇರಿ ಮತ್ತು ಡಾನ್ ಬೊಸ್ಕೊ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ|ಫಾ|ಡೆನ್ನಿಸ್ ಡೇಸಾ ಹೇಳಿದರು.
ಅವರು ಶುಕ್ರವಾರ ಶಿರ್ವ ಡಾನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಅಜ್ಜಿ ತಾತಂದಿರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಶಾಲೆಯ ನಿವೃತ್ತ ಶಿಕ್ಷಕಿ ಸಿಸಿಲಿಯಾ ಲೂವಿಸ್ ಮಾತನಾಡಿ, ಅಜ್ಜಿ ತಾತಂದಿರು ತಮ್ಮ ಮೊಮ್ಮಕ್ಕಳಿಗೆ ಪ್ರೀತಿ, ದಯೆ, ಕರುಣೆ ಮುಂತಾದ ಮೌಲ್ಯಗಳನ್ನು ಕಲಿಸಿ, ಕುಟುಂಬದ ಸದಸ್ಯರ ಪರಿಚಯ ಮಾಡಬೇಕು ಹಾಗೂ ಕುಟುಂಬದ ಚರಿತ್ರೆಯನ್ನು ಬಾಲ್ಯದಲ್ಲಿಯೇ ಹೇಳಿಕೊಡಬೇಕು ಎಂದು ಹಿರಿಯರಲ್ಲಿ ಮನವಿ ಮಾಡಿದರು. ನಿವೃತ್ತ ಶಿಕ್ಷಕಿ ಸಿಸಿಲಿಯಾ ಲೂವಿಸ್‌ಅವರನ್ನು ಶಾಲೆಯ ವತಿಯಿಂದ ಸಮ್ಮಾನಿಸಲಾಯಿತು.
ಶಾಲೆಯ ಪ್ರಾಂಶುಪಾಲ ರೆ| ಫಾ| ಮಹೇಶ್ ಡಿ’ಸೋಜಾ ಪ್ರಸ್ತಾವನೆಯೊಂದಿಗೆ ಅತಿಥಿಗಳನ್ನು ಪರಿಚಯಿಸಿದರು.ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ವಿಲ್ಸನ್ ಡಿ’ಸೋಜಾ ,ಶಿಕ್ಷಕಿಯರಾದ ಐರಿನ್ ರೊಡ್ರಿಗಸ್, ಶನೋಯಾ ವೇದಿಕೆಯಲ್ಲಿದ್ದರು. ಸುಮಾರು 200 ಹಿರಿಯರು ಬೆಂಗಳೂರು, ಚೆನೈ,ಗೋವಾದಿಂದ ಆಗಮಿಸಿ ತಮ್ಮ ಮೊಮ್ಮಕ್ಕಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಆನಂದಿಸಿದರು. ಪುಟಾಣಿಗಳಾದ ಕೀರ್ತಿ, ಇಯಾನ್ ಆಲ್ವ, ಆ್ಯನ್ ಲೀವಾ, ಪ್ರಥಮ್ ಸ್ವಾಗತಿಸಿದರು. ಜೋಶ್ವಾ ಡಿ‡ ಸೋಜಾ ಹಾಗೂ ವೃದ್ಧಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ನಿಕೊಲ್ ಲೋಬೊ, ಸಮನ್ವಿ, ಆಯೀಷಾ ಶಹಜಾನ್, ಸುವಿತ್ ಪೂಜಾರಿ ವಂದಿಸಿದರು.