Advertisement

ತ್ರಿಕೋನದಲ್ಲಿ ಅಜ್ಜ-ಅಜ್ಜಿ ಕಥೆ

11:54 AM Sep 19, 2018 | |

ಕನ್ನಡದಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ಅಂದರೆ, 2014 ರಲ್ಲಿ “143′ ಎಂಬ ಚಿತ್ರ ಬಂದಿದ್ದು ನೆನಪಿರಬಹುದು. ನಿರ್ದೇಶಕ ಚಂದ್ರಕಾಂತ್‌, ನಾಯಕ ಮತ್ತು ನಾಯಕಿ ಎರಡು ಪಾತ್ರಗಳನ್ನಿಟ್ಟುಕೊಂಡು ಹೊಸಬಗೆಯ ಚಿತ್ರವನ್ನು ಕಟ್ಟಿಕೊಟ್ಟಿದ್ದರು. ಆ ಚಿತ್ರಕ್ಕೆ ಜನಮೆಚ್ಚುಗೆ ಸಿಕ್ಕಿದ್ದಷ್ಟೇ ಅಲ್ಲ, ರಾಜ್ಯ ಪ್ರಶಸ್ತಿಯೂ ಲಭಿಸಿತ್ತು. ಹೊಸ ಪ್ರಯೋಗದ ಚಿತ್ರ ಕೊಟ್ಟಿದ್ದ ಚಂದ್ರಕಾಂತ್‌ ಎಲ್ಲಿ ಹೋಗಿದ್ದರು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

Advertisement

ಹೌದು, ಅವರೀಗ ಹೊಸದೊಂದು ಚಿತ್ರದೊಂದಿಗೆ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ಅವರ ಎರಡನೇ ನಿರ್ದೇಶನದ ಚಿತ್ರಕ್ಕೆ ಇಟ್ಟ ಹೆಸರು “ತ್ರಿಕೋನ’. ಈ ಚಿತ್ರದಲ್ಲಿ ಅವರು ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದು ನಿರ್ದೇಶನವಷ್ಟೇ ಮಾಡಿದ್ದಾರೆ. ಅವರ “ತ್ರಿಕೋನ’ ಚಿತ್ರದ ಹೀರೋ ಸುರೇಶ್‌ ಹೆಬ್ಳೀಕರ್‌. ಅವರಿಗೆ ನಾಯಕಿ ಲಕ್ಷ್ಮೀ. ಹೌದು ಇದು 60 ಪ್ಲಸ್‌ ಜೋಡಿಯ ಹೊಸ ಕಥೆ.

ಇವರೊಟ್ಟಿಗೆ 45 ಪ್ಲಸ್‌ ಜೋಡಿಯ ಕಥೆಯೂ ಸಾಗಲಿದೆ. ಅಚ್ಯುತ್‌ ಕುಮಾರ್‌ ಮತ್ತು ಸುಧಾರಾಣಿ ಜೋಡಿಯ ಕಥೆಯೂ ಇಲ್ಲೊಂದು ವಿಶೇಷತೆ ಹೊಂದಿದೆ. ಇದಷ್ಟೇ ಅಲ್ಲ, 25 ಪ್ಲಸ್‌ ಹುಡುಗನ ಕಥೆಯೂ ಒಳಗೊಂಡಿದೆ. ರಾಜ್‌ವೀರ್‌ ಎಂಬ ಹುಡುಗ ಆ ವಯಸ್ಸಿನ ಕಥೆಯ ಹೈಲೆಟ್‌. ಎಲ್ಲಾ ಸರಿ, 25, 45 ಮತ್ತು 60 ಪ್ಲಸ್‌ ವಯಸ್ಸಿನವರ ಕಥೆಯಲ್ಲೇನಿದೆ ಅಂದರೆ, “ಇದೊಂದು ಆ್ಯಕ್ಷನ್‌ ಕಮ್‌ ಥ್ರಿಲ್ಲರ್‌ ಬೇಸ್ಡ್ ಸಿನಿಮಾ. ಇಲ್ಲಿ ಎಲ್ಲವೂ ಇರಲಿದೆ.

ನೋವು, ನಲಿವು, ತಮಾಷೆ ಇತ್ಯಾದಿಯೊಂದಿಗೆ ಒಂದು ಹೊಸತನದ ಹೂರಣ ಇಲ್ಲಿ ಉಣಬಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ಒಂದೇ ಮಾತಲ್ಲಿ ಹೇಳುವುದಾದರೆ, ಅಜ್ಜ-ಅಜ್ಜಿಯ ಕಥೆಯೇ ಇಲ್ಲಿ ಪ್ರಮುಖವಾಗಿದೆ ಎನ್ನುವ ನಿರ್ದೇಶಕ ಚಂದ್ರಕಾಂತ್‌, ಸುಮಾರು 40 ದಿನಗಳ ಕಾಲ ಬೆಂಗಳೂರು, ಕುಕ್ಕೆ ಸುಬ್ರಹ್ಮಣ್ಯ ಇತ್ಯಾದಿ ಸ್ಥಳದಲ್ಲಿ ಚಿತ್ರೀಕರಿಸಲಾಗಿದೆ.  ಇನ್ನು, ಈ ಚಿತ್ರಕ್ಕೆ ರಾಜ್‌ಶೇಖರ್‌ ನಿರ್ಮಾಪಕರು.

ಅವರದೇ ಒನ್‌ಲೈನ್‌ ಸ್ಟೋರಿ. ಅದನ್ನಿಟ್ಟುಕೊಂಡು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾಗಿ’ ಹೇಳುತ್ತಾರೆ ಚಂದ್ರಕಾಂತ್‌. “143′ ಚಿತ್ರದ ಬಳಿಕ ಸಾಕಷ್ಟು ನಿರ್ಮಾಪಕರು ಬಂದು ಚಿತ್ರ ಮಾಡಿಕೊಡುವಂತೆ ಹೇಳಿದರಾದರೂ, ರೆಗ್ಯುಲರ್‌ ಕಥೆ ಫಾರ್ಮೆಟ್‌ ಹೊರತಾಗಿ ಬೇರೇನೋ ಮಾಡಬೇಕು ಅಂದುಕೊಂಡಿದ್ದೆ. ನನ್ನ ಕಲ್ಪನೆಗೆ ತಕ್ಕಂತಹ ಕಲಾವಿದರು ಬೇಕಿತ್ತು,

Advertisement

ಅದನ್ನು ಪ್ರೋತ್ಸಾಹಿಸಿ, ಬೆಂಬಲಿಸುವ ನಿರ್ಮಾಪಕರೂ ಬೇಕಿತ್ತು. ಹಾಗಾಗಿ ಎರಡನೇ ಚಿತ್ರ ಶುರುವಾಗಲು ತಡವಾಗಿದೆ. ಈಗ “ತ್ರಿಕೋನ’ ಚಿತ್ರ ಮುಗಿದಿದ್ದು, ಎಡಿಟಿಂಗ್‌ ಕೆಲಸದಲ್ಲಿ ತೊಡಗಿಕೊಂಡಿದೆ’ ಎನ್ನುತ್ತಾರೆ ಚಂದ್ರಕಾಂತ್‌. ಈ ಚಿತ್ರಕ್ಕೆ ಸುರೇಂದ್ರನಾಥ್‌ ಸಂಗೀತವಿದ್ದು, ಎರಡು ಹಾಡುಗಳಿಗೆ ಸಂಯೋಜನೆ ಮಾಡಿದ್ದಾರೆ. ಶ್ರೀನಿವಾಸ್‌ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next