Advertisement
ಉತ್ತರ ಕರ್ನಾಟಕದ ಮಂದಿಗೆ ಗಿರ್‌ಮಿಟ್ ಜೊತೆಗೆ ಮೆಣಸಿಕಾಯಿ ಬಜ್ಜಿ ಭಾಳ ಪ್ರೀತಿಯ ತಿನಿಸು. ಅದರಲ್ಲೂ, ಮಳೆಗಾಲದಲ್ಲಿ ಗಿರ್‌ಮಿಟ್ ಬಜ್ಜಿ, ಚಹಾ ಸವಿಯುವ ಗಮ್ಮತ್ತೇ ಬೇರೆ. ಅಲ್ಲಿ, ಬೀದಿಗೊಂದರಂತೆ ಬಜ್ಜಿ ಅಂಗಡಿಗಳಿರುತ್ತವೆ. ಅಂಥ ಅಂಗಡಿಗಳಲ್ಲಿ, ಗದಗದ ಸ್ಟೇಷನ್ ರಸ್ತೆಯಲ್ಲಿರುವ “ತೋಂಟದಾರ್ಯ ಮಿರ್ಚಿ ಸೆಂಟರ್’ ಕೂಡಾ ಒಂದು. ಬೇರೆ ಅಂಗಡಿಗಳಿಗಿಂತ ಆ ಮಿರ್ಚಿ ಸೆಂಟರ್ ಭಿನ್ನ ಎನಿಸಲು ಕಾರಣ, ಅದರ ಮಾಲೀಕರಾದ ಈರಮ್ಮ ಹಿರೇಹಡಗಲಿ ಮತ್ತು ಅವರ ಕೈ ರುಚಿಯ ಬಜ್ಜಿ.
ಕಳೆದ 25ವರ್ಷಗಳಿಂದ ಬಜ್ಜಿ ಮಾರಾಟದಲ್ಲಿ ತೊಡಗಿರುವ ಈರಮ್ಮ ಅವರ ವಯಸ್ಸು 78 ದಾಟಿದೆ. ಆರಂಭದಲ್ಲಿ, ಕುಟುಂಬದ ಹೊಟ್ಟೆ ಹೊರೆಯುವ ಉದ್ದೇಶದಿಂದ ಪ್ರಾರಂಭಿಸಿದ ಈ ಉದ್ಯೋಗ, ಅವರೊಂದಿಗೇ ಬೆಳೆದುಕೊಂಡು ಬಂದಿದೆ.ಮೊದಲು ಸಣ್ಣ ಅಂಗಡಿ ಇಟ್ಟುಕೊಂಡಿದ್ದ ಈರಮ್ಮ, 1 ರೂಪಾಯಿಗೆ ಬಜ್ಜಿ ಮಾರುತ್ತಿದ್ದರಂತೆ. ಆಗ ಇವರ ಬಜ್ಜಿ ಸವಿದಿದ್ದ ಅನೇಕರಿಗೆ, ಈಗಲೂ ಈರಮ್ಮನೇ ಬಜ್ಜಿ ಮಾಡಿ ಕೊಡಬೇಕಂತೆ. ಅಂಗಡಿಗೆ ಹೊಸ ರೂಪ
ಬಜ್ಜಿಯ ಜನಪ್ರಿಯತೆ ಹೆಚ್ಚಿದಂತೆ, ವ್ಯಾಪಾರವೂ ಹೆಚ್ಚಿದ್ದರಿಂದ, ಆರು ವರ್ಷಗಳ ಹಿಂದೆ ಅಂಗಡಿಗೆ ಹೊಸ ರೂಪ ಸಿಕ್ಕಿತು. ಈಗ, ಮನೆ ಮಂದಿಯ ಸಹಕಾರ ಹಾಗೂ ಮೂವರು ಕೆಲಸಗಾರರ ಶ್ರಮದಿಂದ ಮಿರ್ಚಿ ಸೆಂಟರ್ ನಡೆಸುತ್ತಿದ್ದಾರೆ ಈರಮ್ಮ. ಆರಂಭದಲ್ಲಿ 2 ಕೆ.ಜಿ. ಹಿಟ್ಟಿನ ಬಜ್ಜಿ ತಯಾರಿಸುತ್ತಿದ್ದ ಇವರು, ಈಗ ದಿನಕ್ಕೆ 2-3 ಸಾವಿರ ರೂ. ದುಡಿಯುತ್ತಾರಂತೆ. ಮನೆ-ಅಂಗಡಿ ನಿರ್ವಹಣೆಗೆಂದು ಮಾಡಿದ್ದ ಸಾಲವನ್ನೂ, ಬಜ್ಜಿ ಮಾರಿಯೇ ತೀರಿಸಿದ್ದಾರೆ.
Related Articles
ಸಂಜೆ 4ರಿಂದ ರಾತ್ರಿ 10 ಗಂಟೆಯವರೆಗೂ ಬಿಡುವಿಲ್ಲದ ಕೆಲಸ ಈರಮ್ಮನಿಗೆ. ಇವರು ಮಾಡುವ ಬದನೇಕಾಯಿ ಬಜ್ಜಿ, ಮಿರ್ಚಿ ಬಜ್ಜಿ, ಅಲಸಂದೆ ಕಾಳು ವಡೆ, ಗಿರಮಿಟ್, ಗಿರಾಕಿಗಳಿಗೆ ಬಲು ಇಷ್ಟವಂತೆ. ಸಂಜೆಯಾದರೆ ಸಾಕು: ಜನ, ಮಿರ್ಚಿ ಸೆಂಟರ್ ಮುಂದೆ ಜಮಾಯಿಸುತ್ತಾರೆ. 1 ಬಜಿಗೆ 10ರೂ, ಗಿರ್‌ಮಿಟ್‌ಗೆ 20 ರೂ. ಬಜ್ಜಿ ತಯಾರಿಸಲು ಶೇಂಗಾ ಎಣ್ಣೆ ಬಳಸುವ ಇವರು, ಈಗಲೂ ಕಟ್ಟಿಗೆ ಒಲೆಯನ್ನೇ ಬಳಸುತ್ತಾರೆ. ಅದರಿಂದಲೇ ಬಜ್ಜಿಯ ರುಚಿ ಹೆಚ್ಚುವುದು ಅಂತಾರೆ ಗಿರಾಕಿಗಳು.
Advertisement
“ದುಡಿದು ತಿನ್ನೋಕೆ ಯಾವ ಕೆಲಸಾನೂ ಸಣ್ಣದಲ್ಲಾರೀ. ಮಿರ್ಚಿ ಮಾಡೋದ್ರಿಂದ ನಮ್ಮ ಜೀವನ ಕಂಡುಕೊಂಡಿವ್ರಿ. ಎಂಥಾ ಕಷ್ಟ ಬಂದ್ರೂ ಬಜ್ಜಿ ಅಂಗಡೀನ ಮುಂದುವರಿಸಿಕೊಂಡು ಬಂದೀನ್ರಿ. ಇದು ನಮಗ ಅನ್ನಕೊಟ್ಟೈತ್ರೀ’-ಈರಮ್ಮ ಹಿರೇಹಡಗಲಿ -ಬಸಮ್ಮ ಭಜಂತ್ರಿ