ಕುಂದಾಪುರ: ಸೈನ್ಯಕ್ಕೆ ಆಯ್ಕೆಯಾಗಿ, ಈಗ 6 ತಿಂಗಳ ತರಬೇತಿ ಮುಗಿಸಿ ಊರಿಗೆ ವಾಪಾಸಾಗುವ ಮೊಮ್ಮಗನ ಬರುವಿಕೆಗಾಗಿ ಕಾಯುತ್ತಿರುವ ಅಜ್ಜಿಯು, ಊರವರು ಅಭಿಮಾನದಿಂದ ಸ್ವಾಗತ ಕೋರಿ ಹಾಕಲಾದ ಬ್ಯಾನರನ್ನು ಪ್ರತಿ ದಿನ ಸ್ವಚ್ಛ ಮಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಹಕ್ಲಾಡಿ ಗ್ರಾಮದ ಯಳೂರು ಮಕ್ಕಿಮನೆ ದಿ| ಚಿಕ್ಕಮ್ಮ ಶೆಡ್ತಿ ಹಾಗೂ ಮಹಾಬಲ ಶೆಟ್ಟಿ ದಂಪತಿ ಪುತ್ರ ಮಂಜುನಾಥ ಶೆಟ್ಟಿ ಸೈನ್ಯಕ್ಕೆ ಆಯ್ಕೆಯಾಗಿದ್ದು, ಸದ್ಯ ಗೋವಾದಲ್ಲಿ ತರಬೇತಿ ಪಡೆಯುತ್ತಿದ್ದಾರೆ. 6 ತಿಂಗಳ ತರಬೇತಿ ಮುಗಿಸಿ, ಶನಿವಾರ ಊರಿಗೆ ಬರಲಿದ್ದಾರೆ.
ಚಿಕ್ಕಂದಿನಿಂದ ಕೈತುತ್ತು ನೀಡಿ, ಸಾಕಿ ಬೆಳೆಸಿದ ಮೊಮ್ಮಗ ಯೋಧನಾಗುತ್ತಿದ್ದು, ಒಂದೆರಡು ದಿನದಲ್ಲಿ ತರಬೇತಿ ಮುಗಿಸಿ ಮನೆಗೆ ಬರಲಿರುವ ಮೊಮ್ಮಗನ ನಿರೀಕ್ಷೆಯಲ್ಲಿ ಹಾಗೂ ಬರಮಾಡಿ ಕೊಳ್ಳಲು ಅಜ್ಜಿ ನೀಲಮ್ಮ ಶೆಟ್ಟಿ ಹಾತೊರೆಯು ತ್ತಿದ್ದಾರೆ.
ಮಂಜುನಾಥ ಅವರು ಪದವೀಧರನಾಗಿದ್ದು, ಶಿವಮೊಗ್ಗದಲ್ಲಿ ಫಾರ್ಮಾಸಿಸ್ಟ್ ವ್ಯಾಸಂಗ ಮಾಡಿದ್ದಾರೆ. ಅರಣ್ಯ, ಫಾರ್ಮಾಸಿಸ್ಟ್, ಬ್ಯಾಂಕಿಂಗ್ ಪರೀಕ್ಷೆ ಬರೆದಿದ್ದು, ಅದರಲ್ಲಿ ಕೆಲಸ ಸಿಗುವ ಅವಕಾಶವಿದ್ದರೂ, ಅದನ್ನು ಬಿಟ್ಟು, ಸೈನ್ಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ .
ಊರಿಗೆ ಬರುತ್ತಿರುವ ತಮ್ಮೂರಿನ ಹೆಮ್ಮೆಯ ಪುತ್ರನ ಬಗ್ಗೆ ಅಭಿಮಾನದಿಂದ ಯಳೂರು ದುರ್ಗಾ ಫ್ರೆಂಡ್ಸ್ ಹಾಕಿದ ಸ್ವಾಗತ ಬ್ಯಾನರ್ ಅನ್ನು ದಿನನಿತ್ಯವು ಸ್ವಚ್ಛ ಮಾಡುವ ಮೂಲಕ ಯೋಧನ ಅಜ್ಜಿ ಮೊಮ್ಮಗನ ಮೇಲಿನ ಪ್ರೀತಿ, ಯೋಧನೆಂಬ ಗೌರವ ತೋರುತ್ತಿದ್ದಾರೆ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.