Advertisement

ಅಜ್ಜಿ ಮನೆ ನೆನಪು ಅಳಿಸಿದ ಶಿಬಿರ

03:41 PM Apr 23, 2017 | |

ಕಲಬುರಗಿ: ಇವತ್ತಿನ ಬೇಸಿಗೆ ದಿನಗಳು ಮಕ್ಕಳಿಗೆ ಸಮ್ಮರ್‌ ಕ್ಯಾಂಪ್‌ ಹೆಸರಿನಲ್ಲಿ ಅಜ್ಜಿ ಮನೆಯ ನೆನಪುಗಳನ್ನು ಅಳಿಸಿ ಹಾಕುತ್ತಿವೆ. ಜೊತೆಯಲ್ಲಿ ಅದೆಷ್ಟೋ ಭಾವನಾತ್ಮಕ ಸಂಬಂಧಗಳು ಬಿಡಿಸಿ ಹೋಗುತ್ತಿವೆ ಎಂದು ರಂಗ ಸಮಾಜದ ಸದಸ್ಯೆ ಹಾಗೂ ನಾಟಕಕಾರ್ತಿ ಡಾ| ಸುಜಾತಾ ಜಂಗಮಶೆಟ್ಟಿ ಕಳವಳ ವ್ಯಕ್ತಪಡಿಸಿದರು. 

Advertisement

ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ರಂಗಾಯಣ ಶನಿವಾರದಿಂದ ಆರಂಭಿಸಿರುವ ಚಿಣ್ಣರ ಮೇಳ 2017 ಮಕ್ಕಳ ಬೇಸಿಗೆ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ದಶಕದ ಹಿಂದಿನ ಬೇಸಿಗೆ ರಜೆಯಲ್ಲಿನ ಮೋಜುಗಳೇ ಭಿನ್ನವಾಗಿದ್ದವು. ಅಜ್ಜಿ ಹೇಳುತ್ತಿದ್ದ ಕಥೆಗಳು, ಮಾವ ಕೊಡಿಸುತ್ತಿದ್ದ ತಿನಿಸುಗಳು, ಇತರೆಲ್ಲಾ ಮಕ್ಕಳೊಂದಿಗೆ ಆಡುತ್ತಿದ್ದ ಆಟವೆಲ್ಲಾ ಈಗ ಮಾಯವಾಗಿವೆ.

ಅದರೊಂದಿಗೆ ಅಜ್ಜ, ಅಜ್ಜಿ, ಮಾಮಾ, ಮಾಮಿ, ಕಾಕಾ, ಕಾಕಿ, ಸಣ್ಣವ್ವ, ದೊಡ್ಡವ್ವ ಹೀಗೆ ಹತ್ತು ಹಲವು ಸಂಬಂಧಗಳು ಕೂಡ ಸಣ್ಣಗೆ ಮರೆಗೆ ಸರಿದಿವೆ ಎಂದು ವಿಷಾದ ವ್ಯಕ್ತಪಡಿಸಿದರು. ಕಾಲದ ಧರ್ಮ ಪಾಲಿಸುವ ಆತುರದಲ್ಲಿ ಬಂದೆರಗಿರುವ ಈ ಮಕ್ಕಳ ಬೇಸಿಗೆ ಶಿಬಿರಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು.

ಈ ನಿಟ್ಟಿನಲ್ಲಿ ಮಕ್ಕಳಿಗೆ ಅವಕಾಶ ನೀಡಿ ತಿಳಿ ಹೇಳಬೇಕು ಎಂದು ಪಾಲಕರಿಗೆ ಹೇಳಿದರು. ಶಿಬಿರಕ್ಕೆ ಚಾಲನೆ ನೀಡಿದ ಮೈತ್ರೇಯಿ ಬಿಸ್ವಾಸ್‌, ಇದೊಂದು ತಮಗೆ ದೊರೆತ ಕೊನೆಯ ಅವಕಾಶ. ನನ್ನ ಪತಿಗೆ ವರ್ಗವಾಗಿದ್ದು ನಾನು ಹೋಗುತ್ತಿದ್ದೇನೆ. ಆದರೆ ಇಲ್ಲಿ ಮಹಿಳೆಯರಿಗಾಗಿ ಇನ್ನೂ ಬಹಳಷ್ಟು ಕೆಲಸಗಳು ಬಾಕಿ ಇದ್ದವು.

ಅಲ್ಲದೆ, ಮಹಿಳೆಯರಿಗಾಗಿ ಒಂದು ನಾಟಕವನ್ನು ಮಾಡಬೇಕಿತ್ತು. ಎಲ್ಲವೂ ಅರ್ಧಕ್ಕೆ ನಿಂತು ಹೋದವು ಎಂದು ಹಳಹಳಿಸಿದರು. ಬೇಸಿಗೆ ಶಿಬಿರಗಳಿಂದ ಸಂಸ್ಕೃತಿ ಮತ್ತು ಸಭ್ಯತೆ ಕಲಿಯಬೇಕು. ಅದಕ್ಕಾಗಿ ನಿಮ್ಮ ಮಕ್ಕಳಿಗೆ ಸರಿಯಾದ ಮತ್ತು ರಂಗಾಯಣದಂತಹ ಸಂಸ್ಥೆಗಳು ನಡೆಸುವ ಶಿಬಿರಗಳಿಗೆ ಸೇರಿಸಿ ಎಂದು ಹೇಳಿದರು.

Advertisement

ನಂತರ ಬೀದರನ ಲಂಬಾಣಿ ಕಲಾವಿದರು ನಡೆಸಿಕೊಟ್ಟು ಲಂಬಾಣಿ ನೃತ್ಯದಲ್ಲಿ ಹೆಜ್ಜೆ ಹಾಕಿದ ಮೈತ್ರೇಯಿ ಬಿಸ್ವಾಸ್‌. ಕಲಬುರಗಿ ಜನರ ಸಹಾಯ ಸಹಕಾರಕ್ಕೆ ಧನ್ಯವಾದ ಅರ್ಪಿಸಿದರು.  ಅಧ್ಯಕ್ಷತೆ ವಹಿಸಿದ್ದ ರಂಗಾಯಣ ಪ್ರಭಾರಿ ನಿರ್ದೇಶಕ ಕೆ.ಹೆಚ್‌.ಚನ್ನೂರ್‌ ಮಾತನಾಡಿ, ಈಚೆಗೆ ಮಕ್ಕಳ ಶಿಬಿರಗಳು ಹೆಚ್ಚಾಗುತ್ತಿವೆ.

ಇದರಿಂದ ಪಾಲಕರ ಜವಾಬ್ದಾರಿಯೂ ಹೆಚ್ಚುತ್ತದೆ. ಅದೂ ಅಲ್ಲದೆ, ಕೆಲವು ಶಿಬಿರಗಳಲ್ಲಿ ಭಾರಿ ಪ್ರಮಾಣ ಹಣ ಸುಲಿಯಲಾಗುತ್ತದೆ. ರಂಗಾಯಣದಿಂದ  ಆರಂಭಿಸಿರುವ ಈ ಶಿಬಿರದಲ್ಲಿ ಮಕ್ಕಳಿಗೆ ಕಲೆ, ಸಂಸ್ಕೃತಿ, ನಾಟಕ, ಹಾಡುಗಾರಿಕೆ, ಚಿತ್ರಕಲೆ ಸೇರಿದಂತೆ ಹಲವಾರು ಆಯಾಮಗಳಲ್ಲಿ ಮಕ್ಕಳನ್ನು ತೊಡಗಿಸಲಾಗುತ್ತಿದೆ.

ಇದಕ್ಕಾಗಿ ಕೇವಲ 1ಸಾವಿರ ರೂ. ಶುಲ್ಕವಿದೆ. ಇದರೊಂದಿಗೆ ಸರಕಾರ ರಂಗಾಯಣದ ಮೂಲಕ 3 ಲಕ್ಷ ರೂ.ಗಳನ್ನು ನೀಡುತ್ತಿದೆ. ಈ ಅನುದಾನದಲ್ಲಿ ಶಿಬಿರದ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಲಾಗುತ್ತಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಶಿಬಿರದ ಸಂಚಾಲಕ ಸಂದೀಪ ಬಿ, ಶಿಬಿರ ಉದ್ದೇಶಗಳು ಹಾಗೂ ಶಿಬಿರದ ಹಾಡಿನ ಕುರಿತು ಹೇಳಿದರು.

ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ, ರಂಗ ಸಮಾಜದ ಸದಸ್ಯ ಡಾ| ಕೈ.ವೈ. ನಾರಾಯಣ ಸ್ವಾಮಿ, ಧಾರವಾಡದ ಹಿರಿಯ ರಂಗಕರ್ಮಿ ಕೆ.ಜಿಗುಚಂದ್ರ ಹಾಗೂ ರಂಗಾಯಣದ ಆಡಳಿತಾಧಿಕಾರಿ ದತ್ತಪ್ಪ ಸಾಗನೂರು ಇತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next