Advertisement

ಆವರಣ ಗೋಡೆ ಮನೆ ಮೇಲೆ ಬಿದ್ದು ಅಜ್ಜಿ , ಮೊಮ್ಮಗ ಸಾವು

06:00 AM Jul 08, 2018 | Team Udayavani |

ಪುತ್ತೂರು: ಇಲ್ಲಿನ ರೈಲು ನಿಲ್ದಾಣ ಬಳಿಯ ಸಾಲ್ಮರ ಹೆಬ್ಟಾರಬೈಲಿನಲ್ಲಿ ಶುಕ್ರವಾರ ತಡರಾತ್ರಿ ಮನೆಯೊಂದರ ಮೇಲೆ ಪಕ್ಕದ ಮನೆಯ ಬೃಹತ್‌ ಆವರಣ ಗೋಡೆ ಜರಿದು ಬಿದ್ದು, ಅಜ್ಜಿ ಹಾಗೂ ಮೊಮ್ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪಾರ್ವತಿ (65) ಹಾಗೂ ಧನುಷ್‌ (13) ಮೃತಪಟ್ಟವರು. ಮನೆಯ ಅರ್ಧ ಭಾಗ ಸಂಪೂರ್ಣ ಹಾನಿಗೀಡಾಗಿದೆ. ಮನೆಗೆ ತಾಗಿಕೊಂಡೇ ಇರುವ ಕೊಟ್ಟಿಗೆ, ಶೌಚಾಲಯ ಕುಸಿದಿದೆ. ಮನೆಯೊಳಗಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು, 10ರಿಂದ 12 ಲಕ್ಷ ರೂ.ನಷ್ಟ ಅಂದಾಜಿಸಲಾಗಿದೆ.

Advertisement

ನಡೆದುದೇನು?
ಪಾರ್ವತಿ ಅವರ ಮನೆ ಹಿಂಬದಿಯ ನಿವಾಸಿಗಳಾದ ಭಾರತಿ ಅವರು ವಿದ್ಯಾರ್ಥಿನಿಯರ ಹಾಸ್ಟೆಲ್‌ ನಡೆಸುತ್ತಿದ್ದರೆ ರಾಂಗೋಪಾಲ್‌ ನಿಡ್ವಣ್ಣಾಯ ಅವರು ಬಾಡಿಗೆಗೆ ಮನೆಗಳನ್ನು ನೀಡಿದ್ದರು. ಈ ಎರಡೂ ಜಾಗಗಳಿಗೆ 40 ಅಡಿ ಉದ್ದ, 15 ಆಳಕ್ಕೆ ಕರ್ಗಲ್ಲು, ಕೆಂಪುಕಲ್ಲುಗಳನ್ನು ಬಳಸಿ ಪಿಲ್ಲರ್‌ ಹಾಕಿ ವರ್ಷಗಳ ಹಿಂದಷ್ಟೇ ಆವರಣ ಗೋಡೆ ಕಟ್ಟಿಸಲಾಗಿತ್ತು. ಅದು ಗುರುವಾರ ರಾತ್ರಿ ಕುಸಿದಿದೆ.

ಈ ಸಂದರ್ಭ ಮನೆಯೊಳಗೆ ಪಾರ್ವತಿ, ಅವರ ಇಬ್ಬರು ಮಕ್ಕಳಾದ ಮಹೇಶ್‌ ಹಾಗೂ ಯೊಗೀಶ್‌, ಮಹೇಶ್‌ ಪತ್ನಿ ಶಾಲಿನಿ, ಮಕ್ಕಳಾದ ಧನುಶ್‌, ಧನ್ವಿತ್‌. ಯೋಗೀಶ್‌ ಪತ್ನಿ ಶ್ವೇತಾ, ಮಗ ಜೀವಿತ್‌ ಸೇರಿದಂತೆ 8 ಮಂದಿ ನಿದ್ರಿಸುತ್ತಿದ್ದರು. ಪಾರ್ವತಿ ಹಾಗೂ ಧನುಷ್‌ ಹಿಂಬದಿಯ ಕೊಠಡಿಯಲ್ಲಿ ಮಲಗಿದ್ದರು. ರಾತ್ರಿ 1.30ರ ಸುಮಾರಿಗೆ ಭಾರೀ ಸದ್ದಿನ ಜತೆಗೆ, ಪಾರ್ವತಿ ಅವರು ಮಲಗಿದ್ದ ಕೋಣೆ ಮೇಲೆ ಆವರಣ ಗೋಡೆ ಜರಿದು ಬಿದ್ದಿತು. ಉಳಿದವರು ಅಪಾಯದಿಂದ ಪಾರಾಗಿದ್ದಾರೆ. ತತ್‌ಕ್ಷಣ ಸ್ಥಳೀಯರನ್ನು ಕರೆದು ಕಾರ್ಯಾಚರಣೆ ನಡೆಸಲಾಯಿತು. ತಾಲೂಕು ಕಚೇರಿಗೂ ವಿಷಯ ಮುಟ್ಟಿಸಿದ್ದು, ಸಹಾಯಕ ಆಯುಕ್ತ ಎಚ್‌.ಕೆ. ಕೃಷ್ಣಮೂರ್ತಿ ಸ್ಥಳಕ್ಕೆ ಆಗಮಿಸಿದ್ದರು. ಅಷ್ಟರಲ್ಲಿ ಕೋಣೆಯೊಳಗಿದ್ದ ಇಬ್ಬರು ಮೃತಪಟ್ಟಿದ್ದರು.

ಗುಳಿಗನ ಕಟ್ಟೆಗೆ ಹಾನಿ
ಹೆಬ್ಟಾರಬೈಲು ದಿ| ವಿಶ್ವನಾಥ ಸಾಲ್ಯಾನ್‌ ಅವರದ್ದು ಕುಟುಂಬದ ಮನೆ. ಇತ್ತೀಚೆಗಷ್ಟೇ ಕುಟುಂಬದ ದೈವಗಳನ್ನು ಈ ಮನೆಗೆ ತಂದಿದ್ದರು. ದೈವಗಳ ಪರ್ವದ ದಿನಗಳಲ್ಲಿ 50ಕ್ಕಿಂತಲೂ ಹೆಚ್ಚು ಜನ ಇಲ್ಲಿ ಸೇರುತ್ತಿದ್ದರು. ಮನೆಯೊಳಗಿದ್ದ ದೈವಗಳ ಸಹಿತ ಮನೆ ಹೊರಗೆ ನಿರ್ಮಿಸಿದ್ದ ಗುಳಿಗನ ಕಟ್ಟೆ ಸಂಪೂರ್ಣ ಧ್ವಂಸಗೊಂಡಿದೆ.

ಅಂತಿಮ ದರ್ಶನ
ಧನುಷ್‌ ಮಂಜಲ್ಪಡು ಸುದಾನ ವಸತಿಯುತ ಶಾಲೆಯ 6ನೇ ತರಗತಿ ವಿದ್ಯಾರ್ಥಿ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಪುತ್ತೂರು ಆಸ್ಪತ್ರೆಯ ಶವಾಗಾರಕ್ಕೆ ಆಗಮಿಸಿ, ಮೃತದೇಹದ ಅಂತಿಮ ದರ್ಶನ ಪಡೆದರು. ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದ ಬಳಿಕ, ಮೃತದೇಹಗಳನ್ನು ಮನೆ ಪಕ್ಕದಲ್ಲೇ ಇರುವ ಸಂಬಂಧಿಕರ ಮನೆಗೆ ತಂದು ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಆವರಣ ಕುಸಿದ ಭಾಗದಲ್ಲಿ ಇನ್ನೊಂದಷ್ಟು ಕಪ್ಪು ಕಲ್ಲುಗಳು, ಗೋಡೆಯ ಒಂದು ಭಾಗ ಮೇಲ್ಗಡೆ ಬಾಕಿಯಾಗಿವೆ. ಮಳೆ ಸುರಿಯುತ್ತಲೇ ಇರುವುದರಿಂದ ಮಣ್ಣು ಸಡಿಲಗೊಂಡು, ಕುಸಿಯುವ ಸಂಭವವೂ ಇದೆ. ತಾಲೂಕು ಆಡಳಿತ ತತ್‌ಕ್ಷಣ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸ್ಥಳೀಯರದ್ದು.

Advertisement

ತಿಂಗಳ ಅಂತರದಲ್ಲಿ ಎರಡು ದುರಂತ
ಮನೆಯ ಯಜಮಾನ ಹೆಬ್ಟಾರಬೈಲು ನಿವಾಸಿ, ಮಂಜಲ್ಪಡು³ವಿನಲ್ಲಿ ಕ್ಯಾಂಟೀನ್‌ ನಡೆಸುತ್ತಿದ್ದ ವಿಶ್ವನಾಥ್‌ ಸಾಲ್ಯಾನ್‌ (ಪಾರ್ವತಿ ಅವರ ಪತಿ) ಜೂನ್‌ 7ರಂದು ಅಸೌಖ್ಯದಿಂದ ನಿಧನ ಹೊಂದಿದ್ದರು. ಆ ಶೋಕ ಆರುವ ಮುನ್ನವೇ ಸರಿಯಾಗಿ ಒಂದು ತಿಂಗಳಲ್ಲಿ ಇನ್ನೊಂದು ದುರಂತ ಸಂಭವಿಸಿದೆ.

ಮುನ್ನೆಚ್ಚರಿಕೆ ವಹಿಸಿದ್ದರೆ…
ತಡರಾತ್ರಿ 1.10ರ ಸುಮಾರಿಗೆ ಮಾಡಿನ ಮೇಲೆ ತೆಂಗಿನಕಾಯಿ ಬಿದ್ದ ಸದ್ದು ಕೇಳಿತ್ತು.  ಎಚ್ಚೆತ್ತ ಮನೆಯವರು, ಹಿಂಬದಿ ಕೋಣೆಯಲ್ಲಿ ಮಲಗಿದ್ದವರನ್ನು ಈ ಕಡೆ ಬಂದು ಮಲಗುವಂತೆ ಸೂಚಿಸಿದ್ದರು. ಆದರೆ ನಿದ್ದೆಗಣ್ಣಿನಲ್ಲಿದ್ದವರು ಕಿವಿಗೊಡಲಿಲ್ಲ ಎನ್ನಲಾಗಿದೆ.

ದುರಂತ ಸ್ಥಳಕ್ಕೆ ರಾತ್ರಿಯೇ ಭೇಟಿ ನೀಡಿದ್ದೇನೆ. ಮೃತಪಟ್ಟವರಿಗೆ ತಲಾ 5 ಲಕ್ಷ ರೂ.ನಂತೆ ಒಟ್ಟು 10 ಲಕ್ಷ ರೂ. ಪರಿಹಾರ ನೀಡಲಾಗುವುದು. ಮನೆ ಹಾನಿಗೆ ಸಂಬಂಧಪಟ್ಟಂತೆ 95 ಸಾವಿರ ರೂ. ಪರಿಹಾರವನ್ನು ಕೂಡಲೇ ವಿತರಿಸಲಾಗುವುದು.

ಎಚ್‌.ಕೆ. ಕೃಷ್ಣಮೂರ್ತಿ, ಸಹಾಯಕ ಆಯುಕ್ತ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next